ಪರಿಕ್ಕರ್ ಪದಗ್ರಹಣ ತಡೆಗೆ ಸುಪ್ರೀಂ ನಕಾರ, 16ರಂದು ಬಹುಮತ ಸಾಬೀತು ಪಡಿಸುವಂತೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Manohar

ನವದೆಹಲಿ, ಮಾ.14-ಗೋವಾ ಮುಖ್ಯಮಂತ್ರಿಯಾಗಿ ಮನೋಹರ್ ಪರಿಕರ್ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ನಿಲ್ಲಿಸಲು ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ. ಇದರಿಂದ ಇಂದು ಸಂಜೆ ನಿಗದಿಯಾಗಿರುವ ಪದ್ರಗ್ರಹಣ ಸಮಾರಂಭ ನಿರ್ವಿಘ್ನವಾಗಿ ನಡೆಯಲಿದ್ದು, ಕಾಂಗ್ರೆಸ್‍ಗೆ ಭಾರೀ ಮುಖಭಂಗವಾಗಿದೆ. ಇದೇ ವೇಳೆ ಮಾರ್ಚ್ 16ರಂದು ಬಹುಮತ ಸಾಬೀತು ಮಾಡುವಂತೆಯೂ ಬಿಜೆಪಿಗೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ.  ಗೋವಾದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವುದನ್ನು ವಿರೋಧಿಸಿ ಕಾಂಗ್ರೆಸ್ ನಿನ್ನೆ ಸಲ್ಲಿಸಿದ್ದ ಅರ್ಜಿ ಕುರಿತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವ ಪೀಠ ಇಂದು ತುರ್ತು ವಿಚಾರಣೆ ನಡೆಸಿತು.

ಗೋವಾ ಮುಖ್ಯಮಂತ್ರಿಯಾಗಿ ಪರಿಕರ್ ಪದಗ್ರಹಣವನ್ನು ತಡೆಯಲು ಸಾಧ್ಯವಿಲ್ಲ. ಅವರು ಪ್ರಮಾಣ ವಚನ ಸ್ವೀಕರಿಸಲು ಅವಕಾಶವಿದೆ ಎಂದು ಹೇಳಿರುವ ನ್ಯಾಯಾಲಯ, ಮುಂದಿನ 48 ಗಂಟೆಗಳ ಒಳಗಾಗಿ ವಿಧಾನಸಭೆ ಅಧಿವೇಶನದಲ್ಲಿ ಬಹುಮತ ಸಾಬೀತುಪಡಿಸಬೇಕೆಂದು ತಾಕೀತು ಮಾಡಿದೆ.   ಮುಖ್ಯಮಂತ್ರಿ ಮತ್ತು ಸಂಪುಟ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾರ್ಚ್ 16ರಂದು ಬೆಳಗ್ಗೆ 11 ಗಂಟೆಗೆ ವಿಧಾನಸಭೆ ಅಧಿವೇಶನ ಕರೆಯಬೇಕು ಹಾಗೂ ಬಹುಮತ ಪರೀಕ್ಷೆ ಕಲಾಪಗಳನ್ನು ಮಾತ್ರ ನಡೆಸಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.

ಚುನಾವಣಾ ಆಯೋಗದಿಂದ ಅಗತ್ಯವಾದ ಔಪಚಾರಿಕ ವಿಧಾನಗಳು ಸೇರಿದಂತೆ ಬಹುಮತ ಸಾಬೀತು ಪ್ರಕ್ರಿಯೆಗೆ ಅಗತ್ಯವಾದ ಎಲ್ಲ ಪ್ರಕ್ರಿಯೆಗಳನ್ನು ಮಾರ್ಚ್ 15ರೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.  ಇಂದು ಸಂಜೆ ಪರಿಕರ್ ಪ್ರಮಾಣ : ಕರಾವಳಿ ರಾಜ್ಯ ಗೋವಾದ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಮನೋಹರ್ ಪರಿಕರ್ ಇಂದು ಸಂಜೆ 5 ಗಂಟೆಗೆ ಪಣಜಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ಧಾರೆ. ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರು ನೂತನ ಮುಖ್ಯಮಂತ್ರಿ ಮತ್ತು ಸಂಪುಟ ಸಹೋದ್ಯೋಗಿಗಳಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin