ಪರಿಶಿಷ್ಟರಿಗೆ ಸ್ಮಶಾನ ಭೂಮಿ ಒದಗಿಸಲು ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

4

ಬೆಳಗಾವಿ,ಸೆ.29- ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜನರಿಗೆ ಸ್ಮಶಾನ ಭೂಮಿ ಒದಗಿಸುವ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಬೇಕು. ಬಾಕಿ ಇರುವ ಸ್ಮಶಾನ ಭೂಮಿ ಖರೀದಿ ಪ್ರಕರಣಗಳನ್ನು ನಾಲ್ಕು ವಾರದೊಳಗೆ ಇತ್ಯರ್ಥಪಡಿಸಬೇಕು ಎಂದು ಜಿಲ್ಲಾಧಿಕಾರಿ ಎನ್. ಜಯರಾಮ್ ಸೂಚನೆ ನೀಡಿದ್ದಾರೆ.ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ನಿನ್ನೆ ಪರಿಶಿಷ್ಟ ಜಾತಿ /ಪಂಗಡಗಳ ನಿಯಮಗಳು 1995ರ ಅನ್ವಯ ನಡೆದ ಜಿಲ್ಲಾಮಟ್ಟದ ಜ ಗೃತ ಮತ್ತು ಉಸ್ತುವಾರಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರಿ ಭೂಮಿ ಲಭ್ಯವಿರುವ ಕಡೆಗಳಲ್ಲಿ ಸ್ಮಶಾನಕ್ಕೆ ಭೂಮಿ ಒದಗಿಸ ಬೇಕು. ಒಂದು ವೇಳೆ ಸರ್ಕಾರಿ ಭೂಮಿ ಇಲ್ಲದಿದ್ದರೆ ಖಾಸಗಿ ಭೂಮಿಯನ್ನು ಖರೀದಿಸುವಂತೆ ತಿಳಿಸಿದರು.
ಪರಿಶಿಷ್ಟ ಜಾತಿ /ಪಂಗಡಗಳ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಕೇವಲ ಐದು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಆರ್. ರವಿಕಾಂತೇಗೌಡ ಸಭೆಗೆ ತಿಳಿಸಿದರು.
ಸಾಮಾಜಿಕ ಒತ್ತಡದ ಕಾರಣದಿಂದಾಗಿ ಬಹುತೇಕ ಪ್ರಕರಣಗಳು ಬಿದ್ದು ಹೋಗುತ್ತಿದ್ದು, ಇದನ್ನು ಮೀರಿ ನೊಂದವರಿಗೆ ಶಿಕ್ಷೆ ಕೊಡಿಸುವ ಪ್ರಯತ್ನ ಆಗಬೇಕಿದೆ. ಅದಕ್ಕಾಗಿ ದೌರ್ಜನ್ಯಕ್ಕೆ ಒಳಗಾದವರಿಗೆ ಹಾಗೂ ಸಾಕ್ಷಿದಾರರಿಗೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ಬಗ್ಗೆ ಸೂಕ್ತ ತಿಳಿವಳಿಕೆ ನೀಡುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಮಹಾನಗರ ಪಾಲಿಕೆ ಇದುವರೆಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯ ಕ್ರಿಯಾ ಯೋಜನೆಯನ್ನೇ ಸಲ್ಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಜಯರಾಮ್, ತಕ್ಷಣವೇ ಕ್ರಿಯಾ ಯೋಜನೆ ಸಲ್ಲಿಸದಿದ್ದರೆ ಪಾಲಿಕೆ ವಿರುದ್ಧವೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ವಿಧಾನಪರಿಷತ್ ಸದಸ್ಯ ವಿವೇಕರಾವ್ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಉಮಾ ಸಾಲಿಗೌಡರ ಉಪಸ್ಥಿತರಿದ್ದರು.ಉಪ ವಿಭಾಗಾಧಿಕಾರಿ ರಾಜಶ್ರೀ ಜೈನಾಪುರ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಹಾಗೂ ತಾಲ್ಲೂಕುಮಟ್ಟದ ಅಧಿಕಾರಿಗಳು, ಪರಿಶಿಷ್ಟ ಜಾತಿ /ವರ್ಗಗಳ ಜಿಲ್ಲಾಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

 

Facebook Comments

Sri Raghav

Admin