ಪರೀಕ್ಷೆ ಮುಗಿದ ಖುಷಿಯಲ್ಲಿ ಕೆರೆಗೆ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

ಈ ಸುದ್ದಿಯನ್ನು ಶೇರ್ ಮಾಡಿ

Student

ಗುಡಿಬಂಡೆ ,ಮಾ.24-ಪರೀಕ್ಷೆ ಮುಗಿದ ಸಂತಸದಲ್ಲಿ ಸ್ನೇಹಿತರೊಂದಿಗೆ ಕೆರೆಗೆ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿ ಬಂಡೆ ಪಟ್ಟಣದಲ್ಲಿ ನಡೆದಿದೆ.   ಪಟ್ಟಣದ ಹೇಮಂತ್ ಎಂಬುವರ ಪುತ್ರ ಮುರುಳಿ ಮೋಹನ್(15) ಮತ್ತು ತುಳಸಿಧರ ಎಂಬುವರ ಪುತ್ರ ಕೇಶವ್(15) ಸಾವನಪ್ಪಿರುವ ವಿದ್ಯಾರ್ಥಿಗಳು.

ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಈ ಇಬ್ಬರು ಪರೀಕ್ಷೆ ಮುಗಿದ ಸಂತಸದಲ್ಲಿ ನಿನ್ನೆ ಸಂಜೆ 4 ಗಂಟೆ ಸಮಯದಲ್ಲಿ ನಾಲ್ವರು ಸ್ನೇಹಿತರ ಜೊತೆಗೆ ಈಜಲು ಕೆರೆಗೆ ತೆರಳಿದ್ದರು. ಪಟ್ಟಣದ ಅಮಾನಿ ಬೈರಸಾಗರ ಕೆರೆಗೆ ಒಟ್ಟಾಗಿ ಹೋಗಿದ್ದು , ಇವರಿಬ್ಬರಿಗೆ ಈಜಲು ಬರುತ್ತಿರಲಿಲ್ಲ. ಸ್ನೇಹಿತರಿದ್ದ ಸಂತಸದಲ್ಲಿ ಅವರ ಕೈ ಹಿಡಿದುಕೊಂಡೇ ನೀರಿಗಿಳಿದ ಇವರಿಬ್ಬರು ಆಟವಾಡುತ್ತಾ ಮುಂದೆ ಹೋಗುತ್ತಿದ್ದಂತೆ ಗುಂಡಿ ಇರುವುದು ಇವರ ಗಮನಕ್ಕೆ ಬರದೆ ಇವರಿಬ್ಬರು ಮುಳುಗಿದ್ದಾರೆ.

ಇದನ್ನು ಗಮನಿಸಿದ ಕೆರೆಯಲ್ಲಿ ಬಟ್ಟೆ ಒಗೆಯುತ್ತಿದ್ದವರು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಸ್ಥಳದಲ್ಲಿದ್ದವರು ತಕ್ಷಣ ನೀರಿಗೆ ಹಾರಿ ಅವರನ್ನು ರಕ್ಷಿಸಲು ಮುಂದರಾದರೂ ಸಾಧ್ಯವಾಗಲಿಲ್ಲ. ತಕ್ಷಣ ಗುಡಿಬಂಡೆ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ನೀರಿಗಿಳಿದು ಬಾಲಕರ ಶವಗಳನ್ನು ಹೊರತೆಗೆದು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ ನಂತರ ವಾರಸುದಾರರಿಗೆ ಒಪ್ಪಿಸಿದ್ದಾರೆ. ಘಟನೆಯ ಸುದ್ದಿ ತಿಳಿದ ಮೃತ ಬಾಲಕರ ಪೋಷಕರು, ಸಂಬಂಧಿಕರು, ನೆರೆಹೊರೆಯವರು ಕೆರೆ ಬಳಿ ಜಮಾಯಿಸಿ ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಘಟನೆ ಸಂಬಂದ ಗುಡಿಬಂಡೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin