ಪರ-ವಿರೋಧದ ನಡುವೆಯೂ ಕರ್ನಾಟಕ ಪ್ರತ್ಯೇಕ ಧ್ವಜ ಹೊಂದುವುದು ಖಚಿತ

ಈ ಸುದ್ದಿಯನ್ನು ಶೇರ್ ಮಾಡಿ

Kannada-Flag--01

ಬೆಂಗಳೂರು, ನ.7- ಹಲವರ ಪರ-ವಿರೋಧದ ನಡುವೆಯೂ ಕರ್ನಾಟಕವು ಪ್ರತ್ಯೇಕ ಧ್ವಜ ಹೊಂದುವುದು ಬಹುತೇಕ ಖಚಿತವಾಗಿದೆ. ಧ್ವಜ ರಚನೆ ಸಂಬಂಧ ರಾಜ್ಯ ಸರ್ಕಾರ ರಚನೆ ಮಾಡಿರುವ 9 ಮಂದಿ ಸಮಿತಿ ಸದಸ್ಯರ ಸಭೆಯು ಗುರುವಾರ ನಡೆಯಲಿದ್ದು, ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಇರಬೇಕೆಂಬ ವರದಿ ನೀಡಲು ತೀರ್ಮಾನಿಸಿದೆ. ಒಂದು ವೇಳೆ ಕರ್ನಾಟಕ ಸಮಿತಿಯ ವರದಿ ಅಂಗೀಕರಿಸಿದರೆ ಜಮ್ಮು-ಕಾಶ್ಮೀರದ ನಂತರ ದೇಶದಲ್ಲೇ ಪ್ರತ್ಯೇಕ ಧ್ವಜ ಹೊಂದಿದ ಎರಡನೆ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ. ಈ ಧ್ವಜಕ್ಕೆ ಸಾಂವಿಧಾನಿಕ ಸ್ಥಾನಮಾನ ಸಿಗುತ್ತದೆಯೋ, ಇಲ್ಲವೋ ಎಂಬುದು ನಂತರವೇ ನಿರ್ಧಾರವಾಗಲಿದೆ.

ಪ್ರತ್ಯೇಕ ಧ್ವಜ ರಚನೆ ಮಾಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿ ಅಭಿವೃದ್ಧಿ ಪ್ರಾಧಿಕಾರ, ಕಾನೂನು ಇಲಾಖೆ ಸೇರಿದಂತೆ ಒಟ್ಟು 9 ಇಲಾಖೆಗಳ ಸಮಿತಿಯೊಂದನ್ನು ರಚಿಸಿದ್ದರು. ಇದರಲ್ಲಿ ಕನ್ನಡ ಹಾಗೂ ಸಂಸ್ಕøತಿ ಇಲಾಖೆಯ ನಿರ್ದೇಶಕರು ಮುಖ್ಯಸ್ಥರಾಗಿದ್ದರು. ಇದೀಗ 9ರಂದು ಸಭೆ ಸೇರಲಿರುವ ಸಮಿತಿ ರಾಜ್ಯಕ್ಕೆ ತನ್ನದೇ ಆದ ಪ್ರತ್ಯೇಕ ಧ್ವಜ ಇರಬೇಕೆಂಬ ವರದಿಯನ್ನು ಸರ್ಕಾರಕ್ಕೆ ನೀಡಲಿದೆ ಎಂದು ತಿಳಿದುಬಂದಿದೆ.

ತ್ರಿವರ್ಣ ಧ್ವಜ:

ಕರ್ನಾಟಕ ಏಕೀಕರಣವಾದ ನಂತರ ಕನ್ನಡ ರಾಜ್ಯೋತ್ಸವ ಸೇರಿದಂತೆ ವಿಶೇಷ ಸಂದರ್ಭದಲ್ಲಿ ಹಳದಿ ಹಾಗೂ ಕೆಂಪು ಮಿಶ್ರಿತ ಬಣ್ಣದ ಧ್ವಜವನ್ನು ಈವರೆಗೂ ಹಾರಿಸುತ್ತ ಬಂದಿದೆ. ಇದನ್ನೇ ನಾಡಧ್ವಜವನ್ನಾಗಿ ಅಂಗೀಕರಿಸಲಾಗಿದೆ. ಈ ಧ್ವಜಕ್ಕೆ ಯಾವುದೇ ರೀತಿಯ ಕಾನೂನಿನ ಮಾನ್ಯತೆ ಇಲ್ಲವಾದರೂ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ನಾಡಧ್ವಜವನ್ನಾಗಿ ಒಪ್ಪಿಕೊಳ್ಳಲಾಗಿದೆ. ಇದೀಗ ಸಮಿತಿಯು ಈ ಧ್ವಜದ ಬದಲಿಗೆ ತ್ರಿವರ್ಣ ಧ್ವಜ ಹೊಂದುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ನಾಡಧ್ವಜಕ್ಕೆ ಎಲ್ಲಿಯೂ ಅಪಮಾನವಾಗದಂತೆ ಜಮ್ಮು-ಕಾಶ್ಮೀರದಲ್ಲಿರುವ ಮಾದರಿಯಲ್ಲೇ ಧ್ವಜವನ್ನು ತ್ರಿವರ್ಣ ಧ್ವಜ ಅಂಗೀಕರಿಸಲು ಸರ್ಕಾರಕ್ಕೆ ಸಲಹೆ ಮಾಡಲಿದೆ. ತ್ರಿವರ್ಣ ಧ್ವಜದಲ್ಲಿ ಮುಖ್ಯವಾಗಿ ಕರ್ನಾಟಕ, ಇಲ್ಲಿನ ಜನತೆ, ನಾಡು-ನುಡಿ, ಇತಿಹಾಸ, ಸಂಸ್ಕøತಿ ಬಿಂಬಿಸುವಂತಹ ಮೂರು ಬಣ್ಣಗಳುಳ್ಳ ಧ್ವಜವನ್ನೇ ಆಯ್ಕೆ ಮಾಡಿಕೊಳ್ಳಲಿದೆ. ಈಗಾಗಲೇ ಕಾನೂನು ಇಲಾಖೆಯ ಒಪ್ಪಿಗೆ ಪಡೆಯಲಾಗಿದೆ.

ಕಾನೂನು ಇಲಾಖೆ ಏನು ಹೇಳುತ್ತದೆ?

ಸಮಿತಿಯು ಕಾನೂನು ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳ ಜತೆ ಅನೌಪಚಾರಿಕ ಮಾತುಕತೆ ನಡೆಸಿದೆ. ಅಧಿಕಾರಿಗಳು ನೀಡಿರುವ ಸಲಹೆಯಂತೆ ರಾಷ್ಟ್ರಧ್ವಜಕ್ಕೆ ಎಳ್ಳಷ್ಟೂ ಅಪಚಾರವಾಗದಂತೆ ನಾಡಧ್ವಜ ಹೊಂದುವುದು ಸಂವಿಧಾನ ವಿರೋಧಿಯಾಗುವುದಿಲ್ಲ. ನಮ್ಮ ಸಂವಿಧಾನದಲ್ಲಿ ತ್ರಿವರ್ಣ ಧ್ವಜವನ್ನೇ ನಾವು ರಾಷ್ಟ್ರಧ್ವಜವನ್ನಾಗಿ ಅಂಗೀಕರಿಸಿರುವುದರಿಂದ ಪ್ರತ್ಯೇಕವಾದ ಧ್ವಜ ಹೊಂದಲು ಸಂವಿಧಾನದಲ್ಲಿ ಅವಕಾಶವಿಲ್ಲ. ಆದರೆ, ರಾಜ್ಯದ ಸ್ವಾಭಿಮಾನಕ್ಕಾಗಿ ಪ್ರತ್ಯೇಕ ಧ್ವಜ ಇಟ್ಟುಕೊಂಡರೆ ಅದು ಪ್ರಮಾದವಾಗುವುದಿಲ್ಲ ಎಂಬ ಸಲಹೆ ನೀಡಿದ್ದಾರೆ.

ಧ್ವಜ ಹಾರಿಸು ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಎಲ್ಲಿಯೂ ಅವಮಾನವಾಗದಂತೆ ಎಚ್ಚರ ವಹಿಸಬೇಕು. ಈಗಿರುವ ನಾಡಧ್ವಜದ ಜತೆಗೆ ತ್ರಿವರ್ಣ ಧ್ವಜ ಹೊಂದುವುದು ಉತ್ತಮ ಎಂಬ ಅಭಿಪ್ರಾಯಕ್ಕೆ ಕಾನೂನು ಅಧಿಕಾರಿಗಳು ಬಂದಿದ್ದಾರೆ. ಈ ಎಲ್ಲ ಸಾಧಕ-ಬಾಧಕಗಳನ್ನು ಗಮನದಲ್ಲಿಟ್ಟುಕೊಂಡೇ ಸಮಿತಿಯು ಸರ್ಕಾರಕ್ಕೆ ಪ್ರತ್ಯೇಕ ಧ್ವಜ ರಚನೆಗೆ ಸಲಹೆ ಮಾಡಲಿದೆ.   ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕು ಎಂಬ ಕರ್ನಾಟಕ ಜನತೆಯ ಆರು ದಶಕಗಳ ಕೂಗು ಕೆಲವೇ ದಿನಗಳಲ್ಲಿ ಈಡೇರುವ ಸಂಭವವಿದೆ.

Facebook Comments

Sri Raghav

Admin