ಪಶು ಆಹಾರ ಸೇವಿಸಿದ ಒಂದೇ ಗಂಟೆಯಲ್ಲಿ 2 ಹಸುಗಳು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಮಾಗಡಿ, ಮೇ 18- ಪಶು ಆಹಾರ ಸೇವಿಸಿದ ಒಂದೇ ಗಂಟೆಯಲ್ಲಿ ಎರಡು ಸೀಮೆ ಹಸುಗಳು ಮೃತಪಟ್ಟಿರುವ ಘಟನೆ ಕುದೂರು ಹೋಬಳಿಯ ವೀರಾಪುರ ಕಾಡುಗೊಲ್ಲರಹಟ್ಟಿಯಲ್ಲಿ ನಡೆದಿದೆ.

ನೀಲಮ್ಮ ಗೋಪಾಲಯ್ಯ ಎಂಬುವವರಿಗೆ ಸೇರಿದ ಎರಡು ಹಸುಗಳು ನಿನ್ನೆ ಸಂಜೆ ಎಸ್‍ಎಂಎಸ್ ಆಗ್ರೋ ಇಂಡಸ್ಟ್ರೀಸ್ ವತಿಯಿಂದ ತಯಾರಾಗಿರುವ ಎಸ್‍ಎಸ್ ಪಶು ಆಹಾರವನ್ನು ಹಸುಗಳಿಗೆ ಹಾಕಿದ್ದರು. ಆಹಾರ ತಿಂದ ಒಂದು ಗಂಟೆಯೊಳಗೆ ಹಸುಗಳ ಹೊಟ್ಟೆ ಊದಿಕೊಂಡು ಒದ್ದಾಡಿ ಮೃತಪಟ್ಟಿವೆ ಎಂದು ಹೇಳಲಾಗಿದೆ.

ಸುಮಾರು 1.50 ಲಕ್ಷ ಸಾಲ ಮಾಡಿ ಈ ಹಸುಗಳನ್ನು ಖರೀದಿಸಿದ್ದೆವು. ಇವು ಮೃತಪಟ್ಟಿರುವುದು ಆತಂಕ ತಂದಿದೆ ಎಂದು ನೀಲಮ್ಮ ಕಣ್ಣೀರು ಹಾಕಿದ್ದಾರೆ. ಪಶು ಆಹಾರ ಮೂಟೆಯಲ್ಲಿ ಉತ್ಪಾದನೆ ದಿನಾಂಕ ನಮೂದಿಸಿಲ್ಲ ಮತ್ತು ಅವಧಿ ಮೀರಿದ ಮಾಹಿತಿಯೂ ಇಲ್ಲ.

ಕಳಪೆ ಪ್ರಮಾಣದ ಆಹಾರ ವಿತರಣೆಯಿಂದಲೇ ಈ ಘಟನೆ ನಡೆದಿದೆ.  ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪರಿಹಾರ ನೀಡಬೇಕೆಂದು ತಾಲೂಕು ಪಶುಪಾಲನಾ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ. ಕುದೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಲಾಗಿದೆ.

Facebook Comments