ಪಶ್ಚಿಮಬಂಗಾಳದಲ್ಲಿ 200 ಕೋಟಿ ರೂ. ಮೌಲ್ಯದ ಸರ್ಪವಿಷ ವಶ, ನಾಲ್ವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Drugs

ಸಿಲಿಗುರಿ, ಅ.16-ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಅರಣ್ಯಾಧಿಕಾರಿಗಳು ಪಶ್ಚಿಮಬಂಗಾಳದ ಜಲಪೈಗುರಿ ಜಿಲ್ಲೆಯ ಫುಲ್ಬರಿ ಪ್ರದೇಶದಲ್ಲಿ ನಾಲ್ವರು ಕಳ್ಳಸಾಗಣೆದಾರರನ್ನು ಬಂಧಿಸಿ, 200 ಕೋಟಿ ರೂ. ಮೌಲ್ಯದ ನಾಗರ ಹಾವು ಮತ್ತು ಕಾಳಿಂಗ ಸರ್ಪ ವಿಷ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.  ಅಪಾದಿತರನ್ನು ಸುಜೋಯ್ ಕುಮಾರ್ ದಾಸ್, ವಿಪುಲ್ ಸರ್ಕಾರ್, ಪಿಂಟು ಬ್ಯಾನರ್ಜಿ ಮತ್ತು ಅಮಲ್ ನುಬಿಯಾ ಎಂದು ಗುರುತಿಸಲಾಗಿದ್ದು, ಇವರು ಅಂತಾರಾಷ್ಟ್ರೀಯ ಕಳ್ಳಸಾಗಣೆ ಜಾಲದ ಸದಸ್ಯರು ಎಂದು ತಿಳಿದುಬಂದಿದೆ.  ಖಚಿತ ಸುಳಿವಿನ ಮೇರೆಗೆ ಅರಣ್ಯ ಅಧಿಕಾರಿಗಳು ನಾಲ್ವರನ್ನು ಬಂಧಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 200 ಕೋಟಿ ರೂ. ಬೆಲೆಬಾಳುವ ಹಾವಿನ ವಿಷವಿದ್ದ ಐದು ಗುಂಡು ನಿರೋಧಕ ಡಬ್ಬಗಳನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳಸಾಗಣೆದಾರರಿಂದ ರಿವಾಲ್ವರ್ ಮತ್ತು ಗುಂಡುಗಳನ್ನು ಸಹ ಜಪ್ತಿ ಮಾಡಲಾಗಿದೆ ಎಂದು ಬೈಕುಂಠಪುರ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ದತ್ತ ಹೇಳಿದ್ದಾರೆ.

ಖರೀದಿದಾರರ ಸೋಗಿನಲ್ಲಿ ಹೋಟೆಲ್‍ಗೆ ತೆರಳಿದ್ದ ಅರಣ್ಯಾಧಿಕಾರಿಗಳು ಈ ಗುಂಪನ್ನು ಬಂಧಿಸುವಲ್ಲಿ ಸಫಲವಾಗಿದೆ ಎಂದು ಅವರು ತಿಳಿಸಿದ್ಧಾರೆ. ಫ್ರಾನ್ಸ್‍ನಿಂದ ಬಾಂಗ್ಲಾದೇಶದ ಮೂಲಕ ದಕ್ಷಿಣ ದೀನಜ್‍ಪುರ್ ಜಿಲ್ಲೆಯ ಬಲೂರ್‍ಘಾಟ್‍ಗೆ ಸರ್ಪ ವಿಷದ ಕಂಟೈನರ್‍ಗಳು ಬಂದಿದ್ದವು. ಈ ಆರೋಪಿಗಳು ಇಂಟರ್‍ನ್ಯಾಷನಲ್ ಸ್ಮಗ್ಲರ್‍ಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಕೂಲಂಕಷ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.  ಹಾವಿನ ಕಾರ್ಕೋಟಕ ವಿಷವನ್ನು ಪಾರ್ಟಿ ಡ್ರಗ್ಸ್ ಎಂಬ ಮಾದಕ ವಸ್ತು ತಯಾರಿಕೆಗೆ ಬಳಸಲಾಗುತ್ತಿದೆ. ಈ ಕಾರಣಕ್ಕಾಗಿಯೇ ಇತ್ತೀಚೆಗೆ ಸರ್ಪಗಳು ಮತ್ತು ಅವುಗಳ ವಿಷಗಳ ಕಳ್ಳಸಾಗಣೆ ಪ್ರಕರಣಗಳು ದೇಶದ ವಿವಿಧೆಡೆ ಹೆಚ್ಚಾಗುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin