ಪಶ್ಚಿಮಬಂಗಾಳದಲ್ಲಿ 70 ಕೋಟಿ ರೂ. ಮೌಲ್ಯದ ಸರ್ಪವಿಷ ವಶ : ಇಬ್ಬರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

West-Bengal

ಸಿಲಿಗುರಿ (ಪಶ್ಚಿಮ ಬಂಗಾಳ) ಮೇ 26-ದೇಶದ ವಿವಿಧ ಭಾಗಗಳಲ್ಲಿ ಸರ್ಪ ವಿಷ ಕಳ್ಳಸಾಗಣೆ ದಂಧೆ ಅವ್ಯಾಹತವಾಗಿ ಮುಂದುವರಿಯುತ್ತಿದೆ. ಪಶ್ಚಿಮಬಂಗಾಳದ ಸಿಲಗುರಿ ಪಟ್ಟಣದಲ್ಲಿ 70 ಕೋಟಿ ರೂ.ಗಳ ಹಾವಿನ ವಿಷವನ್ನು ಗಡಿ ಭದ್ರತಾ ಪಡೆ (ಬಿಎಸ್‍ಎಫ್) ವಶಪಡಿಸಿಕೊಂಡಿದ್ದು, ಈ ಸಂಬಂಧ ಇಬ್ಬರು ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಮೂರು ದಿನಗಳ ಹಿಂದೆ ಒಬ್ಬನನ್ನು ಬಂಧಿಸಿ 15 ಕೋಟಿ ರೂ. ಮೌಲ್ಯದ ಸರ್ಪ ವಿಷವನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದರು. ಈ ಎರಡೂ ಪ್ರಕರಣಗಳಿಂದ ವ್ಯವಸ್ಥಿತ ದಂಧೆ ಸಕ್ರಿಯವಾಗಿರುವುದು ಸಾಬೀತಾಗಿದೆ. ಬಂಧಿತ ಆರೋಪಿಗಳಿಂದ ಎರಡು ಗಾಜಿನ ಜಾಡಿಗಳಲ್ಲಿದ್ದ ಸರ್ಪ ವಿಷವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್‍ಎಸ್ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.ಕ್ಯಾನ್ಸರ್ ಚಿಕಿತ್ಸೆಗೆ ಮತ್ತು ಇತರ ವೈದ್ಯಕೀಯ ಉದ್ದೇಶಗಳಿಗೆ ಹಾವಿನ ವಿಷವು ಪ್ರಯೋಜನಕಾರಿ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಪ್ರಯೋಗಾಲಯಗಳು ಇಂಥ ಹಾವಿನ ವಿಷ ಅಗತ್ಯವಾಗಿ ಬೇಕಾಗಿರುವುದರಿಂದ ವಿವಿಧ ದೇಶಗಳ ಪ್ರಯೋಗಾಲಯಗಳು ಇದಕ್ಕಾಗಿ ದುಬಾರಿ ಬೆಲೆ ನೀಡುತ್ತಿವೆ. ಇದರಿಂದಾಗಿ ವಿಷ ಸಂಗ್ರಹಿಸಲು ಸರ್ಪಗಳನ್ನು ಮಾರಾಟ ಮಾಡುವ ಕ್ರೂರ ಬೇಟೆಗಾರರು ಮತ್ತು ವಿಷ ಕಳ್ಳಸಾಗಣೆದಾರರು ಹುಟ್ಟಿಕೊಂಡಿರುವುದು ಪೆÇಲೀಸ್ ಮತ್ತು ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಪಶ್ಚಿಮ ಬಂಗಾಳದ ದಿಜಾನ್‍ಪುರ್‍ನ ಕುಷ್ಮಂಡಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಮೇ 22ರಂದು ಸುಬೆಬ್ ಟಿಗ್ಗ ಎಂಬ ಕಳ್ಳಸಾಗಣೆದಾರರನ್ನು ಬಿಎಸ್‍ಎಫ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ 15 ಕೋಟಿ ರೂ. ಮೌಲ್ಯದ ಸರ್ಪ ವಿಷವನ್ನು ವಶಪಡಿಸಿಕೊಂಡಿದ್ದರು.   ಕಾರ್ಕೋಟಕ ಸರ್ಪಗಳ ವಿಷಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರಕ್ಕಿಂತಲೂ ಅಧಿಕ ಬೆಲೆ ಇದ್ದು, ಅನೇಕ ಭಾಗಗಳಲ್ಲಿ ವಿಷ ಸಂಗ್ರಹವು ಒಂದು ಲಾಭದಾಯಕ ದಂಧೆಯಾಗಿ ಮಾರ್ಪಡುತ್ತಿದೆ. ಇದೇ ಕಾರಣಕ್ಕಾಗಿ ನೂರಾರು ವಿಷ ಸರ್ಪಗಳನ್ನು ಕೊಂದು ಹಾಕುವ ನಿರ್ದಯಿ ಕಳ್ಳಸಾಗಣೆದಾರರು ಸಕ್ರಿಯವಾಗಿದ್ದಾರೆ.

ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದಲ್ಲಿ ಈ ದಂಧೆ ಮುಂದುವರಿದಿದ್ದು, ನಾಗರಹಾವು, ಕೊಳಕಮಂಡಲ, ಮತ್ತು ಕಾಳಿಂಗಸರ್ಪದಂಥ ವಿಷಜಂತುಗಳನ್ನು ಬೇಟೆಯಾಗಿ ಕೊಲ್ಲಲಾಗುತ್ತಿದೆ. ಹೊಸದಾಗಿ ಬೆಳಕಿಗೆ ಬಂದಿರುವ ಅಂಶವೆಂದರೆ. ಐನೂರು ಮಿಲಿ ಲೀಟರ್‍ನಷ್ಟು ವಿಷ ಸಂಗ್ರಹಿಸಲು ನೂರು ಸರ್ಪಗಳನ್ನು ಕೊಲ್ಲಬೇಕಾಗುತ್ತದೆ.!

200 ಕೋಟಿ ರೂ. ವಿಷ ಪತ್ತೆ :

ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಅರಣ್ಯಾಧಿಕಾರಿಗಳು ಪಶ್ಚಿಮಬಂಗಾಳದ ಜಲಪೈಗುರಿ ಜಿಲ್ಲೆಯ ಫುಲ್ಬರಿ ಪ್ರದೇಶದಲ್ಲಿ ಅಕ್ಫೋಬರ್‍ನಲ್ಲಿ ನಾಲ್ವರು ಕಳ್ಳಸಾಗಣೆದಾರರನ್ನು ಬಂಧಿಸಿ, 200 ಕೋಟಿ ರೂ. ಮೌಲ್ಯದ ಸರ್ಪ ವಿಷ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಘಟನೆಗೂ ಬೆಂಗಳೂರಿನ ಸ್ನೇಕ್ ಮಾಫಿಯಾಗೂ ಸಂಬಂಧವಿದೆಯೇ ಎಂಬ ಅನುಮಾನ ಹುಟ್ಟುಹಾಕಿದೆ.   ಸುಜೋಯ್ ಕುಮಾರ್ ದಾಸ್, ವಿಪುಲ್ ಸರ್ಕಾರ್, ಪಿಂಟು ಬ್ಯಾನರ್ಜಿ ಮತ್ತು ಅಮಲ್ ನುಬಿಯಾ ಎಂದು ಗುರುತಿಸಲಾಗಿತ್ತು, ಇವರು ಅಂತಾರಾಷ್ಟ್ರೀಯ ಕಳ್ಳಸಾಗಣೆ ಜಾಲದ ಸದಸ್ಯರು.
ಖಚಿತ ಸುಳಿವಿನ ಮೇರೆಗೆ ಅರಣ್ಯ ಅಧಿಕಾರಿಗಳು ನಾಲ್ವರನ್ನು ಬಂಧಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 200 ಕೋಟಿ ರೂ. ಬೆಲೆಬಾಳುವ ಹಾವಿನ ವಿಷವಿದ್ದ ಐದು ಗುಂಡು ನಿರೋಧಕ ಡಬ್ಬಗಳನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳಸಾಗಣೆದಾರರಿಂದ ರಿವಾಲ್ವರ್ ಮತ್ತು ಗುಂಡುಗಳನ್ನು ಸಹ ಜಪ್ತಿ ಮಾಡಲಾಗಿದೆ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ದತ್ತ ಹೇಳಿರುವುದು ಸ್ನೇಕ್ ಮಾಫಿಯಾದ ಕಬಂಧ ಬಾಹುಗಳು ಕರ್ನಾಟಕದತ್ತ ಚಾಚಿರುವ ಅನುಮಾನಕ್ಕೆ ಎಡೆ ಮಾಡಿಕೊಟ್ಟಿವೆ.

ಖರೀದಿದಾರರ ಸೋಗಿನಲ್ಲಿ ಹೋಟೆಲ್ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ನಾಲ್ವರು ಆರೋಪಿಗಳು ಬಂಧಿಸಿದರು. ಈ ಆರೋಪಿಗಳು ಇಂಟರ್‍ನ್ಯಾಷನಲ್ ಸ್ಮಗ್ಲರ್‍ಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಕೂಲಂಕಷ ತನಿಖೆ ನಡೆಯುತ್ತಿದೆ. ಫ್ರಾನ್ಸ್ ಮೂಲಕ ಬಾಂಗ್ಲಾದೇಶಕ್ಕೆ ಬಂದ ಈ ಕಂಟೈನರ್ ಪಶ್ಚಿಮಬಂಗಾಳದ ಮೂಲಕ ಕರ್ನಾಟಕ ಸೇರಿದಂತೆ ದೇಶದ ಇತರ ಭಾಗಗಳಿಗೆ ಕಳ್ಳಸಾಗಣೆಯಾಗಲಿತ್ತು ಎಂಬ ಅಂಶ ಕೂಡ ಬೆಳಕಿಗೆ ಬಂದಿತ್ತು.
ಹಾವಿನ ಕಾರ್ಕೋಟಕ ವಿಷವನ್ನು ಪಾರ್ಟಿ ಡ್ರಗ್ಸ್ ಎಂಬ ಮಾದಕ ವಸ್ತು ತಯಾರಿಕೆಗೂ ಬಳಸಲಾಗುತ್ತಿದೆ. ಈ ಕಾರಣಕ್ಕಾಗಿಯೇ ಇತ್ತೀಚೆಗೆ ಸರ್ಪಗಳು ಮತ್ತು ಅವುಗಳ ವಿಷಗಳ ಕಳ್ಳಸಾಗಣೆ ಪ್ರಕರಣಗಳು ದೇಶದ ವಿವಿಧೆಡೆ ಹೆಚ್ಚಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin