ಪಹಣಿ ನೋಂದಣಿ ಸ್ಥಗಿತದಿಂದ ರೈತರಿಗೆ ತೊಂದರೆ : ಸಚಿವ ಕಾಗೋಡು ತಿಮ್ಮಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

kagodu
ಬೆಂಗಳೂರು, ಫೆ.7- ರೈತರಿಗೆ ನೀಡುವ ಪಹಣಿ ಪತ್ರಗಳಲ್ಲಿ ಸುಧಾರಿತ ತಂತ್ರಾಂಶ ಹೊಂದಾಣಿಕೆಯಾಗದೆ ಇರುವುದರಿಂದ ಹೊಸ ಪಹಣಿ ಪತ್ರ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿರುವುದರಿಂದ ರೈತರಿಗೆ ತೊಂದರೆಯಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿಧಾನ ಪರಿಷತ್‍ನಲ್ಲಿ ತಿಳಿಸಿದರು. ಬಿಜೆಪಿ ಸದಸ್ಯ ಮಹಂತೇಶ್ ಕವಟಗಿ ಮಠ್ ಪ್ರಶ್ನೋತ್ತರ ಕಲಾಪದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಹಣಿ ಪತ್ರ ಸುಧಾರಿತ ತಂತ್ರಾಂಶ ವ್ಯವಸ್ಥೆಯಡಿ ಅಭಿವೃದ್ಧಿಪಡಿಸಲು ವಿಳಂಬವಾಗುತ್ತಿದೆ. 2001-02ನೆ ಸಾಲಿನಲ್ಲಿ ಭೂಮಿ ತಂತ್ರಾಂಶವನ್ನು ಆ ಕಾಲದಲ್ಲಿ ಲಭ್ಯವಿದ್ದ 32 ಬೀಟ್ ಅನುಗುಣವಾಗಿ ಎನ್‍ಐಸಿ ಸಂಸ್ಥೆಯವರು ಅಭಿವೃದ್ಧಿಪಡಿಸಿದ್ದು, ತಂತ್ರಾಂಶದ ನಿರ್ವಹಣೆ ಮತ್ತು ಬದಲಾವಣೆಯನ್ನು ಎನ್‍ಐಸಿ ಸಂಸ್ಥೆ ಸ್ಥಗಿತಗೊಳಿಸಿರುತ್ತದೆ. ಆದ್ದರಿಂದ ನಮ್ಮ ಭೂಮಿ ನೂತನ ತಂತ್ರಾಂಶ ಅಭಿವೃದ್ಧಿಪಡಿಸಲು ತೀರ್ಮಾನಿಸಿ ಟೆಂಡರ್ ಮೂಲಕ ಖಾಸಗಿ ಸಂಸ್ಥೆಗಳಿಗೆ ನೀಡಲಾಗಿದ್ದು, ಖಾಸಗಿ ಸಂಸ್ಥೆ ಮತ್ತು ಸರ್ಕಾರದ ನಡುವೆ ಕೆಲವು ವಿವಾದಗಳು ಉದ್ಭವವಾದ ಹಿನ್ನೆಲೆಯಲ್ಲಿ ಭೂಮಿ ಉಸ್ತುವಾರಿ ಕೋಶದ ವತಿಯಿಂದ ನೂತನ ತಂತ್ರಜ್ಞಾನ ಬಳಸಿ ಹೊಸ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ.

ಈ ಎಲ್ಲ ಕಾರಣಗಳಿಂದ ವಿಳಂಬವಾಗಿರುತ್ತದೆ. ತಾಂತ್ರಿಕ ದೋಷಗಳನ್ನು ಕೂಡಲೇ ಸರಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡಲಾಗುವುದು. ದಿನನಿತ್ಯದ ವ್ಯವಹಾರಗಳಿಗೆ ರೈತರು ಪಹಣಿಗಳನ್ನು ಪಡೆಯಲು ಭೂಮಿ ಕಿಯೋಸ್ಕರ್, ಅಟಲ್ ಜಿ ಜನ ಸ್ನೇಹಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರದಲ್ಲಿ ಆನ್‍ಲೈನ್ ಮೂಲಕ ಹಣ ಪಾವತಿಸಿ ಪಡೆಯಬಹುದಾಗಿದೆ.

Facebook Comments

Sri Raghav

Admin