ಪಾಕ್’ಗೆ ಭಾರತೀಯ ಸೈನಿಕರಿಂದ ದೀಪಾವಳಿ ಶಾಕ್ : ಗಡಿಯಲ್ಲಿ 30ಕ್ಕೂ ಸೈನಿಕರ ಹತ್ಯೆ, ಸೇನಾ ನೆಲೆಗಳ ಧ್ವಂಸ

ಈ ಸುದ್ದಿಯನ್ನು ಶೇರ್ ಮಾಡಿ

Pak-Firing-001

ಜಮ್ಮು, ಅ.30- ಕಾಶ್ಮೀರ ಕಣಿವೆಯ ಗಡಿಯಲ್ಲಿ ಪದೇ ಪದೇ ಪುಂಡಾಟ ನಡೆಸುತ್ತಿರುವ ಪಾಕಿಸ್ತಾನಿ ಪಡೆಗಳಿಗೆ ಬುದ್ಧಿ ಕಲಿಸುವ ನಿಟ್ಟಿನಲ್ಲಿ ನೀಡಿರುವ ಭಾರತೀಯ ಯೋಧರು ಮಿಂಚಿನ ದಾಳಿ ನಡೆಸಿ 30ಕ್ಕೂ ಹೆಚ್ಚು ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಭಾರತ ಯೋಧರ ಈ ದಾಳಿಗೆ ಪಾಕ್ ಸೈನಿಕರು ಬೆಚ್ಚಿ ಬಿದ್ದಿದ್ದಾರೆ.  ವೈರಿ ಪಾಳೆಯದ ಐದಕ್ಕೂ ಹೆಚ್ಚು ಸೇನಾ ನೆಲೆಗಳನ್ನು ಧ್ವಂಸಗೊಳಿಸಿ ಪರಾಕ್ರಮ ಮೆರೆದಿದ್ದಾರೆ. ಭಾರತೀಯ ಪಡೆಗಳ ಮಿಂಚಿನ ಪ್ರತಿ ದಾಳಿಯಲ್ಲಿ 30ಕ್ಕೂ ಹೆಚ್ಚು ಪಾಕ್ ಸೈನಿಕರು ಹತರಾಗಿದ್ದು, ದೊಡ್ಡ ಪ್ರಮಾಣದ ಹಾನಿಯಾಗಿದೆ. ಭಾರತೀಯ ಯೋಧನ ರುಂಡ ಚೆಂಡಾಡಿದ್ದ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವುದಾಗಿ ಶಪಥ ಮಾಡಿದ್ದ ಬಿಎಸ್‍ಎಫ್ ಆದನ್ನು ಅಕ್ಷರಶಃ ಪಾಲಿಸಿ ಗಡಿಯಲ್ಲಿ ಗುಂಡಿನ ಕಿವಿಗಡಚಿಕ್ಕುವ ಮೊರೆತದೊಂದಿಗೆ ದೀಪಾವಳಿಯನ್ನು ಆಚರಿಸಿಕೊಂಡಿದೆ.

ಇದೇ ವೇಳೆ, ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿ ಪಾಕಿಸ್ತಾನ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಿದ್ದು, ಭಾರತೀಯ ಸೇನೆ ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿ ನಿಂತಿದೆ. ಬಿಎಸ್‍ಎಫ್ ಜೊತೆ ಭಾರತೀಯ ವಾಯುಪಡೆ ಮತ್ತು ನೌಕಾ ದಳವೂ ಮುಂದಿನ ಸವಾಲುಗಳನ್ನು ಎದುರಿಸಲು ಯುದ್ಧೋಪಾದಿಯ ಸಿದ್ಧತೆ ನಡೆಸಿದೆ.  ಜಮ್ಮು ಮತ್ತು ಕಾಶ್ಮೀರದ ಆರ್‍ಎಸ್ ಪುರ ಮತ್ತು ಕತುವಾ ವಲಯದಲ್ಲಿ ನಿರಂತರ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಭಾರತದ ಇಬ್ಬರು ಯೋಧರ ಸಾವಿಗೆ ಕಾರಣವಾದ ಪಾಕಿಗಳಿಗೆ ಗಡಿ ನಿಯಂತ್ರಣ ರೇಖೆಯ (ಎಲ್‍ಓಸಿ) ಕೆರನ್ ಸೆಕ್ಟರ್‍ನಲ್ಲಿ ಬಿಎಸ್‍ಎಫ್ ತಕ್ಕ ಉತ್ತರ ನೀಡಿತು. ಭಾರತೀಯ ಯೋಧರು ತಿರುಗಿ ಬಿದ್ದ ಪರಿಣಾಮವಾಗಿ ಪಾಕಿಸ್ತಾನದ ಐದಕ್ಕೂ ಹೆಚ್ಚು ಸೇನಾನೆಲೆಗಳು ನುಚ್ಚುನೂರಾಗಿದ್ದು, ಸುಮಾರು 30ಕ್ಕೂ ಹೆಚ್ಚು ಸೈನಿಕರು ಹತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಯುದ್ಧದ ಕಾರ್ಮೋಡ ದಟ್ಟೈಸುವ ವಾತಾವರಣ ನಿರ್ಮಾಣಗೊಂಡಿದೆ.

ವೈರಿ ಪಡೆಯಲ್ಲಿ ಸಾಕಷ್ಟು ಹಾನಿಯಾಗಿದ್ದು ಭಾರೀ ಸಾವು-ನೋವು ಸಂಭವಿಸಿದೆ.ಕಳೆದ ಮೂರು ದಿನಗಳ ಹಿಂದೆ ಭಾರತದ ಪ್ರತಿದಾಳಿಯಲ್ಲಿ ಪಾಕಿಸ್ತಾನದ 15 ರೇಂಜರ್‍ಗಳು ಕೊಲ್ಲಲ್ಪಟ್ಟಿದ್ದರು ಎಂದು ಬಿಎಸ್‍ಎಫ್ ಉನ್ನತಾಧಿಕಾರಿಗಳು ಹೇಳಿದ್ದಾರೆ.  ಕದನ ವಿರಾಮ ಉಲ್ಲಂಘಿಸಿ ಕಳೆದ ಒಂದು ತಿಂಗಳಿನಿಂದ ಪಾಕಿಸ್ತಾನ ಮುಂದುವರಿಸಿರುವ ಅಪ್ರಚೋದಿತ ದಾಳಿಯಲ್ಲಿ ಏಳು ಯೋಧರು ಮತ್ತು ನಾಲ್ವರು ನಾಗರಿಕರು ಮೃತಪಟ್ಟಿದ್ದು, ಬಿಎಸ್‍ಎಫ್ ಸೈನಿಕರೂ ಸೇರಿದಂತೆ ಅನೇಕರು ಗಾಯಗೊಂಡಿದ್ದಾರೆ.

ತಲೆ ಬಾಗುವುದಿಲ್ಲ :

ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ಮುಂದುವರಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನಾವು ಯಾರಿಗೂ ತಲೆ ಬಾಗುವುದಿಲ್ಲ. ದೇಶದ ರಕ್ಷಣಾ ಪಡೆಗಳು ಪಾಕ್ ಯೋಧರಿಗೆ ತಕ್ಕ ಉತ್ತರ ನೀಡುತ್ತಿವೆ ಎಂದು ಹೇಳಿದ್ದಾರೆ.  ನಮ್ಮ ಯೋಧರು ಗಡಿಯಲ್ಲಿ ಪಹರೆಗೆ ನಿಂತು ದೇಶ ರಕ್ಷಣೆ ಮಾಡುತ್ತಿರುವುದರಿಂದಲೇ ನಾವು ಇಂದು ದೀಪಾವಳಿ ಆಚರಿಸಲು ಸಾಧ್ಯವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಯುದ್ಧೋಪಾದಿಯ ಸಿದ್ದತೆ :

ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಲೇ ಇದೆ.  ನೌಕಾ ಪಡೆಗಳು ಈಗಾಗಲೇ ಅರಬ್ಬೀ ಸಮುದ್ರದ ಪಶ್ಚಿಮ ಭಾಗದಲ್ಲಿ ಗಸ್ತು ತಿರುಗುತ್ತಿವೆ ಮುಂದಿನ ವಾರದಿಂದ ಕವಾಯತು ನಡೆಸಲು ಸಜ್ಜಾಗಿದೆ. ರಕ್ಷಣಾ ಸಚಿವಾಲಯ ಈ ಕವಾಯಿತು ಮತ್ತು ಗಸ್ತು ಕಾರ್ಯಕ್ಕೆ ತುರ್ತು ಅನುದಾನ ಬಿಡುಗಡೆ ಮಾಡಿದ್ದು, ಶಸ್ತ್ರಾಸ್ತ್ರಗಳ ಪರೀಕ್ಷೆ ಮತ್ತು ಪರಿಶೀಲನೆಗೆ ವಿಶೇಷ ಸಮಿತಿಗಳನ್ನು ರಚಿಸಲಾಗಿದೆ.  ಪಶ್ಚಿಮ್ ಲೆಹರ್ (ವೆಸ್ಟ್ರನ್ ವೇವ್ ಅಥವಾ ಪಶ್ಚಿಮ ಅಲೆ) ಹೆಸರಿನಲ್ಲಿ ನೌಕಾಪಡೆ ಕವಾಯತು ನಡೆಸಲಿದೆ. ಇದರ ಅಂಗವಾಗಿ ಈಗಾಗಲೇ 40 ಯುದ್ಧನೌಕೆಗಳು, ಫೈಟರ್ ಜೆಟ್‍ಗಳು, ಜಲಾಂತರ್ಗಾಮಿ ನೌಕೆಗಳು ಸಿದ್ದವಾಗಿವೆ ಎಂದು ರಕ್ಷಣಾ ಇಲಾಖೆ ಉನ್ನತಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಾಕ್ ಸೈನಿಕರಿಗೆ ಸಿಹಿ ಇಲ್ಲ :

ನಿರಂತರ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನದ ಹಗೆತನ ಹಿನ್ನೆಲೆಯಲ್ಲಿ ವಾಘಾ ಗಡಿಯಲ್ಲಿ ಭಾರತೀಯ ಯೋಧರು ಈ ಬಾರಿ ಪಾಕ್ ಸೈನಿಕರಿಗೆ ಸಿಹಿ ಹಂಚಿಲ್ಲ.
ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ಪಾಕಿಸ್ತಾನಿ ಯೋಧರಿಗೆ ಸಿಹಿ ಹಂಚುವ ಸಂಪ್ರದಾಯ ಪಾಲಿಸಲಾಗುತ್ತಿತ್ತು. ಆದರೆ ಈ ರೂಢಿಯನ್ನು ಮುರಿದಿರುವ ಭಾರತೀಯ ಪಡೆಗಳು ಪಾಕಿಸ್ತಾನ ಯೋಧರಿಗೆ ಸಿಹಿ ನೀಡದಿರುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin