ಪಾಕ್, ಉಗ್ರರ ವಿರುದ್ಧ ದಾಳಿಗೆ ಭಾರತಕ್ಕೆ ಬರಲಿವೆ ಕಿಲ್ಲರ್ ಡ್ರೋಣ್’ಗಳು

ಈ ಸುದ್ದಿಯನ್ನು ಶೇರ್ ಮಾಡಿ

Drone--01

ನವದೆಹಲಿ, ಏ.20-ಒಂದೆಡೆ ಪಾಕಿಸ್ತಾನ, ಇನ್ನೊಂದೆಡೆ ಚೀನಾ ಮತ್ತೊಂದೆಡೆ ಭಯೋತ್ಪಾದಕರ ಆತಂಕವನ್ನು ಪರಿಣಾಮಕಾರಿಯಾಗಿ ಎದುರಿಸಲು ಭಾರತ, ಅಮೆರಿಕದಿಂದ ಅತ್ಯಾಧುನಿಕ ಆಕ್ರಮಣಕಾರಿ ಡ್ರೋಣ್‍ಗಳನ್ನು ಹೊಂದಲಿದೆ. ಮಾನವರಹಿತ ವೈಮಾನಿಕ ವ್ಯವಸ್ಥೆ ಹಾಗೂ ಕಿಲ್ಲರ್ ಡ್ರೋಣ್‍ಗಳನ್ನು ರಫ್ತು ಮಾಡುವ ತನ್ನ ಹೊಸ ನೀತಿಯನ್ನು ಅಮೆರಿಕ ಪ್ರಕಟಿಸಿದೆ. ಇದರಿಂದಾಗಿ ಭಾರತ ಸೇನೆ ಅಮೆರಿಕದಿಂದ 22 ಪ್ರಿಡೆಟರ್ ಬಿ ಸೀ ಗಾರ್ಡಿಯನ್ ಡ್ರೋಣ್‍ಗಳನ್ನು ಖರೀದಿಸುವ ಬಗ್ಗೆ ಮಾತುಕತೆ ನಡೆಸುತ್ತಿದೆ.

ಈ ಅತ್ಯಾಧುನಿಕ ಆಕ್ರಮಣಕಾರಿ ಡ್ರೋಣ್‍ಗಳು ಕ್ಯಾತೆ ತೆಗೆಯುತ್ತಿರುವ ಪಾಕಿಸ್ತಾನ ಮತ್ತು ಚೀನಾ ವಿರುದ್ಧ ಭೂಮಿ ಮತ್ತು ಸಾಗರ ಮಾರ್ಗದಿಂದ ದಾಳಿ ಕಾರ್ಯಾಚರಣೆಗಳಿಗೆ ಸಶಸ್ತ್ರ ಪಡೆಗಳ ಸಾಮಥ್ರ್ಯ ವೃದ್ಧಿಸುವುದೇ ಅಲ್ಲದೆ, ಬಾಲ ಬಿಚ್ಚುತ್ತಿರುವ ಭಯೋತ್ಪಾದಕರ ನಿಗ್ರಹಕ್ಕೂ ಸಹಕಾರಿಯಾಗಲಿದೆ.
ಭಯೋತ್ಪಾದನೆ ನಿಗ್ರಹ ಉದ್ದೇಶಗಳ ಈಡೇರಿಕೆಗಾಗಿ ತನ್ನ ಮಿತ್ರ ರಾಷ್ಟ್ರಗಳಿಗೆ ಮಾನವರಹಿತ ಡ್ರೋಣ್‍ಗಳನ್ನು ರಫ್ತು ಮಾಡಲು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇತ್ತೀಚೆಗೆ ಹೊಸ ನೀತಿಯನ್ನು ಪ್ರಕಟಿಸಿದರು. ಇದು ಪ್ರಸ್ತುತ ಸಂದರ್ಭದಲ್ಲಿ ಭಾರತಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ.

ಈ ಕಿಲ್ಲರ್ ಡ್ರೋಣ್‍ಗಳು ಭಾರತೀಯ ಸೇನಾ ಪಡೆಗೆ ಸೇರ್ಪಡೆಯಾದರೆ, ಗಡಿ ನಿಯಂತ್ರಣ ರೇಖೆ ಬಳಿ ತಂಟೆ ಮಾಡುತ್ತಿರುವ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಲು ಹಾಗೂ ಭಯೋತ್ಪಾದಕರ ಆಶ್ರಯ ಮತ್ತು ಅಡಗು ತಾಣಗಳನ್ನು(ಲಾಂಚ್ ಪ್ಯಾಡ್) ಧ್ವಂಸ ಮಾಡಲು ಭಾರತಕ್ಕೆ ಸಹಕಾರಿಯಾಗಲಿದೆ. ಅಲ್ಲದೇ ಸಾಗರ ಪ್ರದೇಶಗಳಲ್ಲಿ ವೈರಿ ದೇಶಗಳ ಅತಿಕ್ರಮಣ ತಡೆಗಟ್ಟುವಲ್ಲಿಯೂ ಭಾರತದ ಶಸ್ತಾಸ್ತ್ರ ಕೋಠಿಗೆ ಈ ಡ್ರೋಣ್‍ಗಳನ್ನು ಸೇರ್ಪಡೆ ಮಾಡುವ ಸಂಬಂಧ ಈಗಾಗಲೇ ಮಾತುಕತೆಗಳು ನಡೆಯುತ್ತಿವೆ.

Facebook Comments

Sri Raghav

Admin