ಪಾಕ್ ಮೇಲೆ ಎರಗಿದ ಭಾರತ : ಎಲ್‍ಒಸಿಯಲ್ಲಿ ಸೇನಾಪಡೆಗಳಿಂದ ಹಠಾತ್ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Attack

ನವದೆಹಲಿ, ಸೆ.29- ಅಮಾಯಕರ ರಕ್ತಪಾತಕ್ಕೆ ಪ್ರತ್ಯುತ್ತರವಾಗಿ ದಿಟ್ಟ ಪ್ರತಿಕ್ರಿಯೆ ನೀಡಿರುವ ಭಾರತೀಯ ಸೇನಾಪಡೆಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‍ಒಸಿ) ನಿನ್ನೆ ರಾತ್ರಿ ಹಠಾತ್ ದಾಳಿಗಳನ್ನು (ಸರ್ಜಿಕಲ್ ಸ್ಟ್ರೈಕ್ಸ್) ನಡೆಸಿ ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿದ್ದು, ಅನೇಕ ಉಗ್ರಗಾಮಿಗಳನ್ನು ಕೊಂದು ಹಾಕಿವೆ. ಈ ಮಹತ್ವದ ಸೇನಾ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರ ಶಿಬಿರಗಳು ಬಹುತೇಕ ನಿರ್ನಾಮಗೊಂಡಿದ್ದು, ಅಪಾರ ಪ್ರಮಾಣದ ಸಾವು-ನೋವು ಮತ್ತು ನಷ್ಟ ಉಂಟಾಗಿದ್ದು, ಉಗ್ರರಲ್ಲಿ ನಡುಕ ಹುಟ್ಟಿಸಿದೆ.
ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ರಣವೀರ್‍ಸಿಂಗ್ ರಾಜಧಾನಿ ನವದೆಹಲಿಯಲ್ಲಿ ಇಂದು ತುರ್ತು ಪತ್ರಿಕಾಗೋಷ್ಠಿ ನಡೆಸಿ, ಭಯೋತ್ಪಾದಕರ ಶಿಬಿರಗಳನ್ನು ಗುರಿಯಾಗಿರಿಸಿಕೊಂಡು ನಿನ್ನೆ ರಾತ್ರಿ ನಡೆಸಿದ ಮಹತ್ವದ ಈ ಕ್ಷಿಪ್ರ ಹಠಾತ್ ಸೇನೆ ದಾಳಿ ಬಗ್ಗೆ ವಿವರ ನೀಡಿದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು ಸಹ ಈ ಕುರಿತು ಮಾಹಿತಿ ಒದಗಿಸಿದರು. [ ಇದನ್ನೂ ಓದಿ :   ‘ಉರಿ’ ಪ್ರತೀಕಾರ : ಪಾಕ್ ಉಗ್ರರ ನೆಲೆಗಳನ್ನು ಹುಡುಕಿ ಹೊಡೆದ ಭಾರತೀಯ ಸೇನೆ    ]

ಭಯೋತ್ಪಾದಕರು ಭಾರತದ ಒಳಗೆ ನುಸುಳುವುದಕ್ಕಾಗಿ ರಚಿಸಿಕೊಂಡಿದ್ದ ಶಿಬಿರಗಳು ಮತ್ತು ನೆಲೆಗಳನ್ನು ಭಾರತೀಯ ಯೋಧರು ನುಚ್ಚುನೂರು ಮಾಡಿದ್ದಾರೆ. ಈ ದಾಳಿಯಲ್ಲಿ ಭಾರೀ ಸಂಖ್ಯೆಯ ಭಯೋತ್ಪಾದಕರು ಹತರಾಗಿದ್ದು, ಉಗ್ರರ ಪಾಳಯಕ್ಕೆ ದೊಡ್ಡ ಪ್ರಮಾಣದ ಪೆಟ್ಟು ಬಿದ್ದಿದೆ ಎಂದು ಲೆಫ್ಟಿನೆಂಟ್ ಜನರಲ್ ಸಿಂಗ್ ವಿವರಿಸಿದರು.  ಕಾಶ್ಮೀರ ಮತ್ತು ಇತರ ಪ್ರಮುಖ ನಗರಗಳ ಮೇಲೆ ಭಯಾನಕ ದಾಳಿಗಳನ್ನು ನಡೆಸುವುದಕ್ಕಾಗಿ ಭಾರತದೊಳಗೆ ನುಸುಳಲು ಎಲ್‍ಒಸಿ ಬಳಿ ಭಾರೀ ಸಂಖ್ಯೆಯ ಉಗ್ರಗಾಮಿಗಳು ಸಜ್ಜಾಗಿದ್ದಾರೆಂಬ ಬೇಹುಗಾರಿಕೆ ಸುಳಿವು ಭಾರತೀಯ ಸೇನಾಪಡೆಗೆ ಲಭಿಸಿದ ನಂತರ ಈ ಭಾರೀ ಸೇನಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಮ್ಯಾನ್ಮಾರ್‍ನಲ್ಲಿ ಉಗ್ರಗಾಮಿಗಳನ್ನು ಸದೆಬಡಿಯಲು ಕೈಗೊಂಡ ಕಾರ್ಯಾಚರಣೆ ಮಾದರಿಯಲ್ಲೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಈ ದಾಳಿ ನಡೆದಿದೆ.

ಗಡಿ ನಿಯಂತ್ರಣ ರೇಖೆಯಲ್ಲಿ ಭಯೋತ್ಪಾದಕರ ನೆಲೆಗಳನ್ನು ಸಂಪೂರ್ಣ ಧ್ವಂಸಗೊಳಿಸಲಾಗಿದೆ. ಉಗ್ರರ ಸದ್ದಡಗಿಸುವ ರೀತಿಯಲ್ಲಿ ನಡೆದ ಹಠಾತ್ ದಾಳಿಗಳಲ್ಲಿ ಭಯೋತ್ಪಾದಕರ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ನಾಮಾವಶೇಷವಾಗಿವೆ ಎಂದು ಲೆ.ಜ.ರಣವೀರ್‍ಸಿಂಗ್ ವಿವರಿಸಿದರು. ಯಾವುದೇ ರೀತಿಯ ಆಕ್ರಮಣ ಎದುರಿಸಲು ಭಾರತೀಯ ಸೇನಾಪಡೆಗಳು ಸರ್ವಸನ್ನದ್ಧವಾಗಿವೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಭಯೋತ್ಪಾದಕರನ್ನು ಗಣನೀಯವಾಗಿ ದಮನ ಮಾಡಲಾಗಿದ್ದು, ಮುಂದೆ ಮತ್ತೆ ಇದೇ ರೀತಿಯ ದಾಳಿ ನಡೆಸುವ ಯೋಜನೆ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಅವರು ಹೇಳಿದರು.

ಗಡಿ ನಿಯಂತ್ರಣ ರೇಖೆ ಬಳಿ ಉಗ್ರರ ಹುಟ್ಟಡಗಿಸಲು ನಡೆದ ಮಹತ್ವದ ಸೇನಾ ಕಾರ್ಯಾಚರಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಮಾಜಿ ಪ್ರಧಾನಿ ಡಾ.ಮನಮೋಹನ್‍ಸಿಂಗ್ ಅವರಿಗೆ ಮಾಹಿತಿ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ್ ಮಫ್ತಿ ಅವರಿಗೆ ಸಹ ಈ ಬಗ್ಗೆ ತಿಳಿಸಲಾಗಿದೆ.
ಗೃಹ ಸಚಿವ ರಾಜನಾಥ್‍ಸಿಂಗ್ ಅವರು ಪಂಜಾಬ್, ಪಶ್ಚಿಮ ಬಂಗಾಳ, ಒಡಿಶಾ ಮುಖ್ಯಮಂತ್ರಿಗಳು, ಸಿಪಿಐ(ಎಂ) ನಾಯಕ ಸೀತಾರಾಮ್ ಯೆಚೂರಿ ಮತ್ತು ಕಾಂಗ್ರೆಸ್ ನಾಯಕ ಗುಲಾಂನಬಿ ಆಜಾದ್ ಅವರಿಗೆ ಈ ಸೇನಾ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದರು. ಭಯೋತ್ಪಾದಕರ ಮೇಲೆ ಹಠಾತ್ ದಾಳಿ ನಡೆದ ನಂತರ ಮುಂಬೈ ಷೇರು ಪೇಟೆಯಲ್ಲಿ ಭಾರೀ ಇಳಿಕೆ ಕಂಡುಬಂದಿತು. ಸಂವೇದಿ ಸೂಚ್ಯಂಕ 555 ಪಾಯಿಂಟ್‍ಗಳಿಗೆ ಮತ್ತು ನಿಫ್ಟಿ 170 ಪಾಯಿಂಟ್‍ಗಳಿಗೆ ಕುಸಿದಿವೆ.

ಉರಿದು ಹೋದ ಪಾಕ್:
ಭಾರತ ಸೇನೆಯ ಹಠಾತ್ ಕಾರ್ಯಾಚರಣೆಯನ್ನು ಪಾಕಿಸ್ತಾನ ಖಂಡಿಸಿದ್ದು, ಗಡಿ ನಿಯಂತ್ರಣ ರೇಖೆ ಬಳಿ ಭಾರತ ಅಪ್ರಚೋದಿತ ದಾಳಿ ನಡೆಸಿದೆ ಎಂದು ಪ್ರತಿಕ್ರಿಯಿಸಿದೆ.
ಆದರೆ, ಭಾರತದ ಸೇನಾ ಕಾರ್ಯಾಚರಣೆ ಸುದ್ದಿಯನ್ನು ಪಾಕಿಸ್ತಾನ ಸೇನೆ ತಳ್ಳಿಹಾಕಿದೆ. ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿರುವುದಾಗಿ ಭಾರತ ಹೇಳುತ್ತಿರುವುದು ಸುಳ್ಳು ಎಂದು ಪಾಕ್ ಸೇನೆ ತಿಳಿಸಿದೆ.

ಸಂಜೆ ಸರ್ವಪಕ್ಷಗಳ ಸಭೆ

ಉರಿ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಪ್ರತಿದಾಳಿಯನ್ನು ಆರಂಭಿಸಿದೆ. ಬುಧವಾರ ರಾತ್ರಿಯಿಂದಲೇ ಉಗ್ರರ ಕ್ಯಾಂಪ್ ಗಳ ಮೇಲೆ ಸೇನೆ ದಾಳಿ ನಡೆಸಿದ್ದು, ಅನೇಕ ಕ್ಯಾಂಪ್ ಗಳು ಧ್ವಂಸವಾಗಿವೆ. ಈ ನಿಟ್ಟಿನಲ್ಲಿ ಚರ್ಚೆ ನಡೆಸಲು ಇಂದು ಸಂಜೆ ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿದೆ. ಬುಧವಾರ ಮಧ್ಯರಾತ್ರಿ 12.30 ರಿಂದ 4.30 ರ ಸುಮಾರಿಗೆ ಭಾರತೀಯ ಸೇನೆಯ ವಿಶೇಷ ತಂಡ ಈ ದಾಳಿ ನಡೆಸಿದೆ. ಗಡಿ ನಿಯಂತ್ರಣ ರೇಖೆ(LoC) ಬಳಿ ಇರುವ ಉಗ್ರರ ಕ್ಯಾಂಪ್ ಗಳನ್ನು ಗುರಿಯನ್ನಾಗಿಸಿ ದಾಳಿ ನಡೆಸಲಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಮಾಹಿತಿ ನೀಡಿದ್ದಾರೆ.

ಸುಮಾರು 500 ಮೀಟರ್ ನಿಂದ 2 ಕಿ.ಮೀ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಗಿದೆ. ಈ ಕುರಿತು ಪಾಕಿಸ್ತಾನಕ್ಕೂ ಮಾಹಿತಿ ನೀಡಲಾಗಿದೆ. ಭಯೋತ್ಪಾದನೆ ಹತ್ತಿಕ್ಕುವಲ್ಲಿ ಪಾಕಿಸ್ತಾನ ಕೂಡಾ ನೆರವಾಗಬೇಕಿದೆ ಎಂದು ರಣಬೀರ್ ಸಿಂಗ್ ಹೇಳಿದರು. ಈ ಬಗ್ಗೆ ಮುಂದಿನ ಕಾರ್ಯಾಚರಣೆ ಹೇಗೆ ನಡೆಯಬೇಕು ಎಂಬುದನ್ನು ಚರ್ಚಿಸಲು ಗುರುವಾರ ಸಂಜೆ 4 ಗಂಟೆಗೆ ಸರ್ವ ಪಕ್ಷಗಳ ಸಭೆ ನಡೆಸಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin