ಪಾಠವಾಗಲಿದೆ ವರನಟ ಡಾ.ರಾಜ್ ಬದುಕು

ಈ ಸುದ್ದಿಯನ್ನು ಶೇರ್ ಮಾಡಿ

Rajkumar--0

ಬೆಂಗಳೂರು, ಏ.24 – ಕನ್ನಡ ಕಲಾಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಡಾ.ರಾಜ್‍ಕುಮಾರ್ ಅವರ ಜೀವನದ ಮೌಲ್ಯಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಮುಂಬರುವ ವರ್ಷದಿಂದ ಪಠ್ಯಕ್ರಮದಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಹೇಳಿದರು.  ವರನಟ ಡಾ.ರಾಜ್‍ಕುಮಾರ್ ಅವರ 89ನೆ ಜನ್ಮದಿನಾಚರಣೆ ಅಂಗವಾಗಿ ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್ ಸ್ಮಾರಕಕ್ಕೆ ಭೇಟಿ ನೀಡಿ ಅವರ ಸಮಾಧಿಗೆ ನಮಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಕಲಾಲೋಕದಲ್ಲಿ ಕಂಗೊಳಿಸಿದ ಧೃವತಾರೆ ಡಾ.ರಾಜ್ ಅವರಿಗೆ ಸಲ್ಲುತ್ತದೆ.ಅವರ ಜೀವನ ಆದರ್ಶಗಳೇ ಸಂದೇಶವಾಗಿದೆ. ಕಲಾಲೋಕವನ್ನು ಸಾಕಾರಗೊಳಿಸಿದ ಕೀರ್ತಿಗೆ ಭಾಜನರಾಗಿರುವ ಡಾ.ರಾಜ್‍ಕುಮಾರ್ ಅವರ ಜೀವನ ಮೌಲ್ಯಗಳನ್ನು ಯುವಪೀಳಿಗೆಗೆ ಪರಿಚಯಿಸಲು ಪಠ್ಯಪುಸ್ತಕಗಳಲ್ಲಿ ರಾಜ್ ಕುರಿತ ಪಠ್ಯವನ್ನು ಮುಂದಿನ ವರ್ಷದಿಂದ ಅಳವಡಿಸಲಾಗುವುದು ಎಂದು ಹೇಳಿದರು.   ಸರ್ಕಾರದ ವತಿಯಿಂದ ಹಾಗೂ ವೈಯಕ್ತಿಕವಾಗಿ ಡಾ.ರಾಜ್‍ಕುಮಾರ್ ಅವರ ಹುಟ್ಟುಹಬ್ಬಕ್ಕೆ ಶುಭ ಕೋರುತ್ತೇನೆ. ರಾಜ್‍ಕುಮಾರ್ ಅವರಿಗೆ ದಾದಾ ಫಾಲ್ಕೆ, ಕರ್ನಾಟಕ ರತ್ನ ಸೇರಿದಂತೆ ಎಲ್ಲಾ ರೀತಿಯ ಪ್ರಶಸ್ತಿಗಳು ಬಂದಿವೆ.
ಅವರ ಮೌಲ್ಯಯುತ ಬದುಕನ್ನು ಅನಾವರಣಗೊಳಿಸುವ ಸಂಬಂಧ ಪಠ್ಯಪುಸ್ತಕದಲ್ಲಿ ಅಳವಡಿಸಲಾಗುವುದು. ಕಲಾಸೇವೆಯನ್ನು ಮುಂದುವರೆಸಿಕೊಂಡು ಬರುತ್ತಿರುವ ಅವರ ಮಕ್ಕಳು ಹಾಗೂ ಕುಟುಂಬದವರಿಗೆ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಪರಮೇಶ್ವರ್ ತಿಳಿಸಿದರು.

ಡಾ.ರಾಜ್ ಪುತ್ರ ಶಿವರಾಜ್‍ಕುಮಾರ್ ಮಾತನಾಡಿ, ರಾಜ್‍ಕುಮಾರ್ ಅವರ ಮಕ್ಕಳಾಗಿ ಹುಟ್ಟಿರುವ ನಾವೇ ಧನ್ಯರು. ನಾಡಿನ ಜನ ನಮ್ಮ ತಂದೆಯವರ ಮೇಲೆ ಇಟ್ಟಿರುವ ಅಭಿಮಾನಕ್ಕೆ ನಾವು ಋಣಿಗಳು. ಸರ್ಕಾರ ಅವರ ಮೌಲ್ಯಯುತ ಜೀವನವನ್ನು ಪಠ್ಯದಲ್ಲಿ ಅಳವಡಿಸಲು ಮುಂದಾಗಿರುವ ಕ್ರಮ ಅತ್ಯಂತ ಶ್ಲಾಘನೀಯ.   ಸರ್ಕಾರವೂ ಕೂಡ ಕಲಾವಿದನಿಗೆ ಇಷ್ಟು ದೊಡ್ಡ ಗೌರವ ನೀಡುತ್ತಿರುವುದಕ್ಕೆ ಅವರ ಕುಟುಂಬದವರಾದ ನಾವು ತುಂಬಾ ಆಭಾರಿಯಾಗಿದ್ದೇವೆ ಎಂದು ಹೇಳಿದರು.  ಪುನೀತ್‍ರಾಜ್‍ಕುಮಾರ್ ಮಾತನಾಡಿ, ಅಪ್ಪಾಜಿ ಅವರ ಬದುಕೇ ನಮಗೆ ಸ್ಫೂರ್ತಿಯಾಗಿದೆ. ಅವರ ಶಿಸ್ತು, ಸಂಯಮ, ಯಶಸ್ಸಿಗೆ ಕಾರಣವಾಗಿತ್ತು. ಅದನ್ನು ಅಳವಡಿಸಿಕೊಂಡು ಬೆಳೆಯಲು ನಾವೂ ಕೂಡ ಪ್ರಯತ್ನಿಸುತ್ತಿದ್ದೇವೆ. ಲಕ್ಷಾಂತರ ಅಭಿಮಾನಿಗಳ ಅಭಿಮಾನಕ್ಕೆ ನಾವು ಋಣಿಯಾಗಿದ್ದೇವೆ ಎಂದು ತಿಳಿಸಿದರು.

ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್, ರಾಘವೇಂದ್ರರಾಜ್‍ಕುಮಾರ್, ವಿನಯ್‍ರಾಜ್ ಹಾಗೂ ಡಾ.ರಾಜ್ ಕುಟುಂಬದ ಎಲ್ಲಾ ಪ್ರಮುಖರು ಹಿರಿ-ಕಿರಿಯ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ತಾಂತ್ರಿಕ ವರ್ಗದವರು, ಕಾರ್ಮಿಕರು ಆಗಮಿಸಿ ಡಾ.ರಾಜ್ ಸ್ಮಾರಕಕ್ಕೆ ನಮನ ಸಲ್ಲಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin