ಪಾರದರ್ಶಕ ತೆರಿಗೆ ವ್ಯವಸ್ಥೆ : ಸಚಿವ ಅರುಣ್ ಜೇಟ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

Arun-jeaity';

ನವದೆಹಲಿ,ನ.9-ಕಾಳಧನ, ಭ್ರಷ್ಟಾಚಾರ ಮತ್ತು ಖೋಟಾನೋಟು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಕೈಗೊಂಡಿರುವ 500 ಮತ್ತು 1000 ರೂ.ಗಳ ರದ್ದು ಕ್ರಮದಿಂದ ದೇಶದ ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಂಡುಬರಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಿರೀಕ್ಷಿತ ಕ್ರಮದಿಂದ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಸ್ವಲ್ಪ ಮಟ್ಟಿಗೆ ತೊಂದರೆಯಾಗುತ್ತಿರುವುದು ನಿಜ. ಆದರೆ ಇದು ತಾತ್ಕಾಲಿಕ ಮಾತ್ರ. ನಿಷ್ಠಾವಂತರು ಮತ್ತು ಪ್ರಾಮಾಣಿಕರು ಯಾವುದೇ ರೀತಿಯಲ್ಲಿ ಭಯಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.

ಕಾಳಧನದ ವಿರುದ್ದ ಕ್ರಮ ಕೈಗೊಳ್ಳಲು ಈ ಕಠಿಣ ನಿಲುವು ಕೈಗೊಳ್ಳಲಾಗಿದೆ. ದೀರ್ಘಾವಧಿಯಲ್ಲಿ ಈ ನಿರ್ಧಾರ ಉತ್ತಮ ಫಲಶೃತಿ ನೀಡಲಿದೆ ಎಂದು ಅವರು ವಿಶ್ಲೇಷಿಸಿದರು.  ಅತ್ಯಂತ ಭದ್ರತೆಯ ಮತ್ತು ನಕಲಿ ಮಾಡಲು ಸಾಧ್ಯವಾಗದ ಹೊಸ ನೋಟುಗಳನ್ನು ನಾಳೆಯಿಂದ ಬ್ಯಾಂಕ್‍ನಲ್ಲಿ ವಿನಿಮಯ ಮಾಡಿಕೊಳ್ಳಬಹುದು. ನ.11ರಿಂದ ದೇಶದ ಎಲ್ಲ ಎಟಿಎಂಗಳಲ್ಲಿ ಈ ನೋಟುಗಳು ಚಲಾವಣೆಗೆ ಬರಲಿದೆ ಎಂದು ಜೇಟ್ಲಿ ಹೇಳಿದರು.  ಹಣವನ್ನು ಮನೆಯಲ್ಲಿ ಇಡಬೇಡಿ. ಬ್ಯಾಂಕ್‍ನಲ್ಲಿಡಿ ಎಂದು ಭಾರತೀಯರಲ್ಲಿ ಮನವಿ ಮಾಡಿದ ಜೇಟ್ಲಿ ಪ್ರಾಮಾಣಿಕರಾಗಿದ್ದರೆ ಈ ವ್ಯವಸ್ಥೆಗೆ ಯಾರು ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin