ಪಾರ್ಕಿಂಗ್ ವಿಚಾರವಾಗಿ ರೌಡಿಗಳಿಂದ ಯುವಕನ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

Murdr02

ಬೆಂಗಳೂರು,ಆ.29-ಪಾರ್ಕಿಂಗ್ ವಿಚಾರವಾಗಿ ರೌಡಿ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮಲ್ಲೇಶ್ವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕಾಶನಗರದ ನಿವಾಸಿ ಧರ್ಮ(36) ಕೊಲೆಯಾದ ಯುವಕನಾಗಿದ್ದು, ಯಲಹಂಕದಲ್ಲಿ ಬೈಕ್ ಗ್ಯಾರೇಜ್ ಇಟ್ಟುಕೊಂಡಿದ್ದನು. ಘಟನೆ ವಿವರ: ಡಾ.ರಾಜ್ಕುಮಾರ್ ರಸ್ತೆಯಲ್ಲಿರುವ ಭೈರವೇಶ್ವರ ಹೋಟೆಲ್ಗೆ ಅಣ್ಣ ಕರ್ಣನ ಜೊತೆ ರಾತ್ರಿ 11 ಗಂಟೆಯಲ್ಲಿ ಧರ್ಮ ಊಟಕ್ಕೆ ಬಂದಿದ್ದು, ಊಟ ಮುಗಿಸಿ ಬೀಡಾ ತಿನ್ನುತ್ತಿದ್ದಾಗ ರೌಡಿಗಳ ಗುಂಪೊಂದು ಇವರ ಬಳಿ ಬಂದು ಪಾರ್ಕಿಂಗ್ ವಿಚಾರವಾಗಿ ಜಗಳ ತೆಗೆದಿದೆ.

ಈ ಜಗಳದಿಂದ ಮಾತಿಗೆ ಮಾತು ಬೆಳೆದಾಗ ರೌಡಿಗಳು ಧರ್ಮನ ಮೇಲೆ ಹಲ್ಲೆ ಮಾಡಿದ್ದು , ಗಾಯಗೊಂಡ ಈತನನ್ನು ಆಟೋದಲ್ಲಿ ಅಣ್ಣ ಕರ್ಣ ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿಕೊಂಡು ಹೋಗುತ್ತಿದ್ದರು. ಇಷ್ಟಕ್ಕೆ ಸುಮ್ಮನಾಗದ ರೌಡಿಗಳು ಇವರನ್ನು ಹಿಂಬಾಲಿಸಿ ಅಡ್ಡಹಾಕಿ ಚಾಕುವಿನಿಂದ ಧರ್ಮನಿಗೆ ಮನಬಂದಂತೆ ಇರಿದು ಇದನ್ನು ತಡೆಯಲು ಬಂದ ಅಣ್ಣ ಕರ್ಣನಿಗೂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.   ಇತ್ತ ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಧರ್ಮ ಸಾವನ್ನಪ್ಪಿದ್ದಾನೆ. ಸುದ್ದಿ ತಿಳಿದ ಮಲ್ಲೇಶ್ವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ತನಿಖೆ ಕೈಗೊಂಡಿದ್ದು , ಘಟನಾ ಸ್ಥಳಕ್ಕೆ ಡಿಸಿಪಿ ಸುರೇಶ್ ಆಗಮಿಸಿ ಪರಿಶೀಲಿಸಿದ್ದಾರೆ.  ರೌಡಿಗಳಿಂದ ಹಲ್ಲೆಗೊಳಗಾದ ಕರ್ಣ ವೃತ್ತಿಯಲ್ಲಿ ಚಾಲಕನಾಗಿದ್ದು , ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಕೊಲೆಯಾಗಿರುವ ಧರ್ಮ ಈ ಹಿಂದೆ ಶ್ರೀರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

► Follow us on –  Facebook / Twitter  / Google+

 

Facebook Comments

Sri Raghav

Admin