ಪಾರ್ಟಿ ಫಂಡ್ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣು

ಈ ಸುದ್ದಿಯನ್ನು ಶೇರ್ ಮಾಡಿ

Election-Commission

ನವದೆಹಲಿ, ಮೇ 21-ರಾಜಕೀಯ ಪಕ್ಷಗಳಿಗೆ ವಾಮ ಮಾರ್ಗದ ಮೂಲಕ ಕೋಟ್ಯಂತರ ರೂಪಾಯಿ ದೇಣಿಗೆಗಳು ಸಂಗ್ರಹವಾಗುತ್ತಿವೆ ಎಂಬ ವ್ಯಾಪಕ ಆರೋಪಗಳ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ರಾಜಕೀಯ ಪಕ್ಷಗಳು ಸಂಗ್ರಹಿಸುವ ದೇಣಿಗೆಗಳು ಹಾಗೂ ಅವುಗಳನ್ನು ವೆಚ್ಚ ಮಾಡುವ ರೀತಿಗಳ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಹೆಚ್ಚಿನ ಮಾಹಿತಿ ಬಯಸಿದೆ.   ಪಾರದರ್ಶಕತೆಗಾಗಿ ಪಾರ್ಟಿ ಫಂಡ್ ಮೇಲೆ ಆಯೋಗ ಹದ್ದಿನ ಕಣ್ಣಿನ ನಿಗಾ ಇಟ್ಟಿರುವುದರಿಂದ ರಾಷ್ಟ್ರೀಯ ಪಕ್ಷಗಳೂ ಸೇರಿದಂತೆ ಪ್ರಾದೇಶಿಕ ಪಕ್ಷಗಳಿಗೆ ಈಗ ಹೊಸ ಪೀಕಲಾಟ ಶುರುವಾಗಿದೆ. ಕಾನೂನು ಕುರಿತ ಸಂಸದೀಯ ಸ್ಥಾಯಿ ಸಮಿತಿ ಮುಂದೆ ಕೇಂದ್ರ ಚುನಾವಣಾ ಆಯೋಗವು ಈ ಸಂಬಂಧ ಲಿಖಿತ ರೂಪದಲ್ಲಿ ಕೆಲವೊಂದು ಮಹತ್ವದ ಸಲಹೆ ಮತ್ತು ಅಭಿಪ್ರಾಯಗಳನ್ನು ಸಲ್ಲಿಸಿದೆ.ಚುನಾವಣೆಗಳಲ್ಲಿ ರಾಜ್ಯದಿಂದ (ಸರ್ಕಾರದಿಂದ) ಹಣ ನೀಡಿಕೆಗೆ ತನ್ನ ಬೆಂಬಲ ಇಲ್ಲ ಎಂದು ಸ್ಪಷ್ಟವಾಗಿ ಹೇಳಿರುವ ಆಯೋಗವು, ಬದಲಿಗೆ ರಾಜಕೀಯ ಪಕ್ಷಗಳು ಯಾವ ರೀತಿ ಹಣ ವೆಚ್ಚ ಮಾಡುತ್ತವೆ ಎಂಬ ವಿಷಯದ ಬಗ್ಗೆ ಮೂಲಭೂತ ಸುಧಾರಣೆಗಳನ್ನು ತರಲು ತಾನು ಬಯಸಿರುವುದಾಗಿ ಸಂಸದೀಯ ಸಮಿತಿಗೆ ತಿಳಿಸಿದೆ.  ಚುನಾವಣೆಗಳಲ್ಲಿ ರಾಜ್ಯದಿಂದ ಹಣ ನೀಡಿಕೆ ಪದ್ದತಿಯು ಸಮಪರ್ಕವಾಗಿಲ್ಲ. ಚುನಾವಣೆಗಳನ್ನು ಎದುರಿಸಲು ತನ್ನ ಪಕ್ಷ ಮತ್ತು ಅಭ್ಯರ್ಥಿಗಳಿಗೆ ಆಡಳಿತದಲ್ಲಿರುವ ಸರ್ಕಾರದಿಂದಲೇ ಹಣ ನೀಡುವ ವ್ಯವಸ್ಥೆ ಇದೆ. ಈ ಉದ್ದೇಶಕ್ಕಾಗಿ ಖಾಸಗಿ ಮತ್ತು ಪಕ್ಷದ ದೇಣಿಗೆ ಕ್ರೋಡೀಕರಣ ವಿಧಾನದಲ್ಲಿ ಪಾರದರ್ಶಕತೆ ಕಂಡುಬರುತ್ತಿಲ್ಲ. ಈ ವ್ಯವಸ್ಥೆಯಲ್ಲಿ ಬದಲಾವಣೆ ಆಗುವ ಅಗತ್ಯವಿದೆ ಎಂದು ಆಯೋಗ ತಿಳಿಸಿದೆ.

ರಾಜ್ಯದಿಂದ (ಸರ್ಕಾರದಿಂದ) ಒದಗಿಸಲಾಗುವ ಹಣವನ್ನು ಪಕ್ಷ ಮತ್ತು ಅಭ್ಯರ್ಥಿಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ದುರುಪಯೋಗ ಮಾಡಿಕೊಳ್ಳುವುದಕ್ಕೆ ಹಾಗೂ ತನ್ನ ಸ್ವಂತಕ್ಕೆ ಬಳಸಿಕೊಳ್ಳುವುದಕ್ಕೆ ಕಡಿವಾಣ ಹಾಕಲು ಸೂಕ್ತ ವ್ಯವಸ್ಥೆ ಇಲ್ಲ. ಇದು ಸಾಧ್ಯವಾಗದ ಕಾರಣ ಇದಕ್ಕೆ ತನ್ನ ವಿರೋಧವಿದೆ ಎಂದು ಆಯೋಗ ಸಮಿತಿಗೆ ಸ್ಪಷ್ಟಪಡಿಸಿದೆ.

ಈ ವಿಷಯದಲ್ಲಿ ಉದ್ಭವಿಸಿರುವ ವಾಸ್ತವ ಸಮಸ್ಯೆಗಳನ್ನು ಇತ್ಯಥಗೊಳಿಸಬೇಕಾದ ಅಗತ್ಯವಿದೆ. ರಾಜಕೀಯ ಪಕ್ಷಗಳು ಸಂಗ್ರಹಿಸುವ ದೇಣಿಗೆಗಳು ಹಾಗೂ ಅವುಗಳನ್ನು ವೆಚ್ಚ ಮಾಡುವ ರೀತಿಗಳಲ್ಲಿ ಮೂಲಭೂತ ಸುಧಾರಣೆಯಾಗಬೇಕಿದೆ. ಇದರಿಂದ ಈ ಸೂಕ್ಷ್ಮ ಸಂಗತಿಗಳ ಬಗ್ಗೆ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯ ಎಂಬುದು ಆಯೋಗದ ಅಭಿಮತವಾಗಿದೆ.   ವಿದ್ಯುನ್ಮಾನ ಮತ ಯಂತ್ರಗಳು (ಇವಿಎಂಗಳು), ಮತ ಪತ್ರ ದೃಢೀಕರಣ ಯತ್ರಗಳು ಹಾಗೂ ಚುನಾವಣಾ ಸುಧಾರಣೆ ಕುರಿತು ಮಹತ್ವದ ವಿಷಯಗಳ ಬಗ್ಗೆ ಕಾನೂನು ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಕೂಲಂಕಷವಾಗಿ ಪರಿಶೀಲಿಸುತ್ತಿದೆ.

ಚುನಾವಣೆ ಸುಧಾರಣೆಗಳ ಕುರಿತು ಸಮಿತಿಯು ಶುಕ್ರವಾರ ಚುನಾವಣಾ ಆಯೋಗ ಮತ್ತು ಕಾನೂನು ಸಚಿವಾಲಯದ ಉನ್ನತಾಧಿಕಾರಿಗಳೊಂದಿಗೆ ಗಹನವಾದ ಚರ್ಚೆ ನಡೆಸಿದೆ.   ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಅಮ್ ಆದ್ಮಿ ಪಾರ್ಟಿ (ಎಎಪಿ) ಬೋಗಸ್ ಕಂಪನಿಗಳ ಮೂಲಕ ಹಾಗೂ ಹವಾಲ ಮಾರ್ಗದಲ್ಲಿ ಕೋಟ್ಯಂತರ ರೂಪಾಯಿ ದೇಣಿಗೆ ಸಂಗ್ರಹಿಸಿದೆ ಎಂದು ಉಚ್ಚಾಟಿತ ಸಚಿವ ಕಪಿಲ್ ಮಿಶ್ರಾ ಕೆಲವು ದಾಖಲೆ ಪತ್ರಗಳೊಂದಿಗೆ ಗಂಭೀರ ಆರೋಪ ಮಾಡಿ ಸಿಬಿಐಗೆ ದೂರು ನೀಡಿದ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಪಾರ್ಟಿ ಫಂಡ್ ವಿಷಯ ಈಗ ಚುನಾವಣೆ ಆಯೋಗದ ಮುಖ್ಯ ವಿಚಾರವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin