ಬಿಬಿಎಂಪಿ ಮಾಲೀಕತ್ವದಲ್ಲಿ ಕ್ರಿಕೆಟ್ ಕ್ರೀಡಾಂಗಣ ಸ್ಥಾಪನೆ : ಮೇಯರ್ ಸಂಪತ್‍ರಾಜ್

ಈ ಸುದ್ದಿಯನ್ನು ಶೇರ್ ಮಾಡಿ

Mayor-Samaat-Raj

ಬೆಂಗಳೂರು, ಜ.31- ಪಾಲಿಕೆ ಮಾಲೀಕತ್ವದ ಕ್ರಿಕೆಟ್ ಕ್ರೀಡಾಂಗಣ ಸ್ಥಾಪಿಸಲಾಗುವುದು ಎಂದು ಮೇಯರ್ ಸಂಪತ್‍ರಾಜ್ ಇಂದಿಲ್ಲಿ ಭರವಸೆ ನೀಡಿದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೇಯರ್ ಕಪ್ ಕ್ರಿಕೆಟ್ ಪಂದ್ಯಾವಳಿಯ ಪೂರ್ವಭಾವಿ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.  ಕೆಂಪೇಗೌಡ ದಿನಾಚರಣೆ ಸಂದರ್ಭದಲ್ಲಿ ಬಿಬಿಎಂಪಿ ಸದಸ್ಯರು, ನೌಕರರು ಹಾಗೂ ಮಾಧ್ಯಮ ಮಿತ್ರರ ತಂಡಗಳ ನಡುವೆ ಸ್ನೇಹಪೂರ್ವಕ ಮೇಯರ್ ಕಪ್ ಪಂದ್ಯಾವಳಿ ಆಯೋಜಿಸಿಕೊಂಡು ಬರಲಾಗುತ್ತಿದೆ.

ಆದರೆ, ನಮ್ಮ ಈ ಪಂದ್ಯ ನಡೆಯಲು ಸೂಕ್ತ ಕ್ರೀಡಾಂಗಣ ದೊರೆಯದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿ ದೂರ ಮಾಡಬೇಕು ಎಂಬ ಉದ್ದೇಶದಿಂದ ಆಯುಕ್ತ ಮಂಜುನಾಥ್ ಪ್ರಸಾದ್ ಅವರೊಂದಿಗೆ ಚರ್ಚಿಸಿ ಪಾಲಿಕೆ ವ್ಯಾಪ್ತಿಯಲ್ಲಿರುವ ಕ್ರೀಡಾಂಗಣವನ್ನು ಗುರುತಿಸಿ ಅದನ್ನು ಅತ್ಯುತ್ತಮ ಕ್ರಿಕೆಟ್ ಕ್ರೀಡಾಂಗಣವಾಗಿ ರೂಪಿಸುವಂತೆ ಸೂಚನೆ ನೀಡಿದ್ದೇನೆ ಎಂದರು.  ಈ ಬಾರಿಯ ಬಜೆಟ್‍ನಲ್ಲಿ ಪಾಲಿಕೆ ಮಾಲೀಕತ್ವದ ಕ್ರಿಕೆಟ್ ಕ್ರೀಡಾಂಗಣ ಸ್ಥಾಪನೆಗೆ ಅಗತ್ಯವಿರುವಷ್ಟು ಹಣ ಮೀಸಲಿರಿಸುವಂತೆ ಮನವಿ ಮಾಡಿಕೊಳ್ಳಲಾಗಿದ್ದು, ಆದಷ್ಟು ಶೀಘ್ರ ಕ್ರಿಕೆಟ್ ಕ್ರೀಡಾಂಗಣ ಸ್ಥಾಪನೆ ಮಾಡಲಾಗುವುದು ಎಂದು ಭರವಸೆ ನೀಡಿದರು.  ಕ್ರೀಡಾಂಗಣ ಸ್ಥಾಪನೆಯಾದ ನಂತರ ಉದಯೋನ್ಮುಖ ಕ್ರಿಕೆಟಿಗರಿಗೆ ತರಬೇತಿ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಮಾತ್ರವಲ್ಲ, ಕ್ರೀಡಾಂಗಣವನ್ನು ಇತರ ಸಂಘ-ಸಂಸ್ಥೆಗಳಿಗೆ ಬಾಡಿಗೆ ನೀಡುವ ಮೂಲಕ ಆದಾಯ ವೃದ್ಧಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಹಲವಾರು ಬಿಬಿಎಂಪಿ ಸದಸ್ಯರು ಅತ್ಯುತ್ತಮವಾಗಿ ಕ್ರಿಕೆಟ್ ಆಡುತ್ತಾರೆ. ನೌಕರ ವರ್ಗದವರಲ್ಲೂ ಉತ್ತಮ ಆಟಗಾರರಿದ್ದಾರೆ. ಎರಡೂ ತಂಡಗಳು ಸಮಬಲದಿಂದ ಕೂಡಿವೆ. ಆದರೂ ಈ ಬಾರಿ ಬಿಬಿಎಂಪಿ ಸದಸ್ಯರ ತಂಡವೇ ಗೆಲುವು ಸಾಧಿಸಲಿದೆ ಎಂದು ಸಂಪತ್‍ರಾಜ್ ವಿಶ್ವಾಸ ವ್ಯಕ್ತಪಡಿಸಿದರು.

Facebook Comments

Sri Raghav

Admin