‘ಪಾಸಿಬಲ್’

ಈ ಸುದ್ದಿಯನ್ನು ಶೇರ್ ಮಾಡಿ

FILIM2
ಇತ್ತೀಚಿನ ದಿನಗಳಲ್ಲಿ ಹೊಸಪ್ರತಿಭೆಗಳ ಮೂಲಕ ಉತ್ತಮ ಪ್ರಯತ್ನಗಳು ನಡೆಯುತ್ತಿವೆ ಎನ್ನುವುದಕ್ಕೆ ಈಗ ಬರುತ್ತಿರುವ ಚಿತ್ರಗಳೇ ಉದಾಹರಣೆ. ಅದರಲ್ಲೂ ಯುವಜನಾಂಗದ ಕಥೆಯನ್ನು ಆಧರಿಸಿ ನಿರ್ಮಾಣವಾಗುತ್ತಿರುವ ಚಿತ್ರಗಳನ್ನು ಕನ್ನಡ ಪ್ರೇಕ್ಷಕ ಹೆಚ್ಚಾಗಿ ಇಷ್ಟಪಡುತ್ತಿದ್ದಾನೆ. ಅದೇ ಹಾದಿಯಲ್ಲಿ ನಿರ್ಮಾಣವಾಗಿರುವಂಥ ಚಿತ್ರ ಪಾಸಿಬಲ್. ತಾನೊಬ್ಬ ಪೊಲೀಸ್ ಇನ್ಸ್‍ಪೆಕ್ಟರ್ ಆಗಬೇಕೆಂಬ ಕನಸು ಕಟ್ಟಿಕೊಂಡಿದ್ದ ಯುವಕನೊಬ್ಬ ತನ್ನ ಗುರಿಯನ್ನು ಸಾಧಿಸುವ ಹಾದಿಯಲ್ಲಿ ಏನೆಲ್ಲಾ ತೊಡಕುಗಳನ್ನು ಎದುರಿಸಬೇಕಾಯಿತು, ಕೊನೆಗೆ ಆತ ತನ್ನ ಕನಸನ್ನು ಈಡೇರಿಸಿಕೊಳ್ಳುವಲ್ಲಿ ಸಫಲನಾದನೇ ಅಥವಾ ಇಲ್ವೇ ಎಂಬುದನ್ನು ರೋಚಕವಾಗಿ ಬೆಳ್ಳಿತೆರೆಯ ಮೇಲೆ ನಿರೂಪಿಸಿರುವ ಚಿತ್ರವೇ ಪಾಸಿಬಲ್.

ಈ ಚಿತ್ರದ ಪ್ರಥಮಾರ್ಧ ಒಂದು ಲವ್‍ಸ್ಟೋರಿ ಕ್ಯಾರಿ ಆಗಿದ್ದರೆ, ದ್ವಿತೀಯಾರ್ಧದಲ್ಲಿ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಶೈಲಿಯಲ್ಲಿ ಕಥೆ ಸಾಗುತ್ತದೆ. ಒಂದು ರೋಚಕವಾದ ಎಂಡಿಂಗ್‍ನ್ನು ಕೊಡುವ ಪ್ರಯತ್ನವನ್ನು ನಿರ್ದೇಶಕ ರಾಜ್ ಅವರು ಈ ಚಿತ್ರದಲ್ಲಿ ಮಾಡಿದ್ದಾರೆ. ಬಹುತೇಕ ಹೊಸಬರ ತಂಡವೇ ಸೇರಿ ನಿರ್ಮಿಸಿರುವ ಪಾಸಿಬಲ್ ಎಂಬ ಹೆಸರಿನ ಈ ಚಿತ್ರಕ್ಕೆ ಯುವನಿರ್ದೇಶಕ ರಾಜ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈಗಾಗಲೇ ಹಲವಾರು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿರುವ ಸೂರ್ಯ ಈ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್ ಹಾಗೂ ರೇಖಾದಾಸ್ ಅವರ ಪುತ್ರಿ ಶ್ರಾವ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ, ನಿರ್ಮಾಪಕ ಟಿ.ಆರ್. ಮಂಜುನಾಥ್ ಮತ್ತು ನಿರ್ದೇಶಕ ರಾಜ್ ಇಬ್ಬರು ಇಂಜಿನಿಯರ್‍ಗಳೇ. ಈ ಚಿತ್ರದಲ್ಲಿ ಒಟ್ಟು 10 ಜನ ಹೊಸ ಪ್ರತಿಭೆಗಳೇ ಸೇರಿಕೊಂಡು ತಮ್ಮ ಶ್ರಮವನ್ನು ಈ ಚಿತ್ರದಲ್ಲಿ ಹಾಕಿರುವುದು ಗಮನಿಸಬೇಕಾದ ಅಂಶವಾಗಿದೆ.

ಸ್ಯಾಂಡಲ್‍ವುಡ್ ಅಂಗಳಕ್ಕೆ ಹೊಸದಾಗಿ ಪಾದಾರ್ಪಣೆ ಮಾಡುತ್ತಿರುವ ಇವರೆಲ್ಲ ಚಿತ್ರರಂಗದಲ್ಲಿ ಏನಾದರೂ ಸಾಧಿಸಬೇಕೆಂಬ ತುಡಿತವುಳ್ಳ ಉತ್ಸಾಹಿಗಳು. ಚಿತ್ರದ ನಿರ್ಮಾಪಕರುಗಳಾದ ಟಿ.ಆರ್. ಮಂಜುನಾಥ್, ಟಿ.ಎಂ. ಕಾಂತರಾಜು, ನಿರ್ದೇಶಕ ರಾಜ್, ನಾಯಕನಟ ಸೂರ್ಯ, ಸಾಹಿತಿಗಳಾದ ಎನ್.ಸ್ವರಾಜ್, ಬಿ.ಎಸ್. ಮೋಹನ್, ಗಾಯಕ ಚನ್ನಪ್ಪ ಹುದ್ದಾರ್, ಸಂಗೀತ ನಿರ್ದೇಶಕ ದಿನೇಶ್‍ಕುಮಾರ್, ಸಂಕಲನಕಾರ ಎಸ್.ರಘು, ನಟ ಪವನ್ ಹಾಗೂ ಛಾಯಾಗ್ರಾಹಕ ಪ್ರಮೋದ್ ಇವರೆಲ್ಲಾ ಈ ಚಿತ್ರದ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಕನ್ನಡ ವೀಕ್ಷಕರಿಗೆ ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಶೋಭ್‍ರಾಜ್, ಮೋಹನ್ ಜುನೇಜ, ರಾಮಕೃಷ್ಣ, ಜಹಾಂಗೀರ್, ಶ್ವೇತ ಮೊದಲಾದ ಕಲಾವಿದರು ಈ ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ. ರಾಜ್ಯಾದ್ಯಂತ ಈ ಚಿತ್ರವು ಈ ವಾರ ಸುಮಾರು 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬೆಳ್ಳಿ ಪರದೆ ಮೇಲೆ ರಾರಾಜಿಸಲಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin