ಪಾಸ್‍ಪೋರ್ಟ್ ಇಲ್ಲದೇ ಪರಾರಿಯಾದ ಉದ್ಯಮಿ ಸೆರೆಗೆ ಸಂಜಯ್ ಭಂಡಾರಿ ಪ್ರತಿತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

Sanjay-Bhandari-01

ನವದೆಹಲಿ, ಡಿ.25-ರಕ್ಷಣಾ ಇಲಾಖೆಯ ಅತ್ಯಂತ ಸೂಕ್ಷ್ಮ ದಾಖಲೆಗಳನ್ನು ಹೊಂದಿರುವ ಹಾಗೂ ಪಾಸ್‍ಪೋರ್ಟ್ ಇಲ್ಲದೇ ಲಂಡನ್‍ಗೆ ಹಾರಿರುವ ಶಸ್ತ್ರಾಸ್ತ್ರ ದಲ್ಲಾಳಿ ಸಂಜಯ್ ಭಂಡಾರಿಯನ್ನು ಸೆರೆಹಿಡಿದು ಭಾರತಕ್ಕೆ ಕರೆತರಲು ತನಿಖಾ ಸಂಸ್ಥೆಗಳು ಪ್ರತಿತಂತ್ರ ರೂಪಿಸಿವೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾಧ್ರಾ ಅವರಿಗೆ ಭಂಡಾರಿ ನಿಕಟವರ್ತಿ ಎಂದು ಹೇಳಲಾಗಿದೆ.  ವಿವಿಧ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ 9,000 ಕೋಟಿ ರೂ.ಗಳಿಗಿಂತ ಹೆಚ್ಚು ಸಾಲ ಎತ್ತುವಳಿಗಳನ್ನು ಮಾಡಿ ಉದ್ದೇಶಪೂರ್ವಕ ಸುಸ್ತಿದಾರನಾಗಿ ಕಳಂಕಿತ ಉದ್ಯಮಿ ವಿಜಯ್ ಮಲ್ಯ ಲಂಡನ್‍ಗೆ ದಿಢೀರ್ ಪಲಾಯನವಾದ ಮಾದರಿಯಲ್ಲೇ ಸಂಜಯ್ ಭಂಡಾರಿ ಹಾರಿದ್ದಾನೆ. ಈ ಪ್ರಕರಣ ಈಗ ರೋಚಕ ತಿರುವು ಪಡೆದುಕೊಳ್ಳುತ್ತಿದೆ.

ಬೇನಾಮಿ ಆಸ್ತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದಾಗ ಲಂಡನ್ ಸೇರಿದಂತೆ ವಿವಿಧೆಡೆ ಬೇನಾಮಿ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಅಲ್ಲದೇ ಈತನ ಪಾಸ್‍ಪೋರ್ಟ್ ಸಹ ಜಫ್ತಿ ಮಾಡಲಾಗಿತ್ತು.  ಆದರೆ, ಪಾಸ್‍ಪೋರ್ಟ್ ಇಲ್ಲದಿದ್ದರೂ ಈತ ರಾತ್ರೋರಾತ್ರಿ ಲಂಡನ್‍ಗೆ ಹಾರಿದ್ದಾದರೂ ಹೇಗೆ ಎಂಬ ಬಗ್ಗೆ ದೆಹಲಿ ಪೊಲೀಸರು, ಜಾರಿ ನಿರ್ದೇಶನಾಲಯದ ಮತ್ತು ಆದಾಯ ತೆರಿಗೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ಧಾರೆ. ಭಂಡಾರಿ ಕಳೆದ ವಾರ ನೇಪಾಳ ಮಾರ್ಗವಾಗಿ ಲಂಡನ್‍ಗೆ ಪರಾರಿಯಾಗಿದ್ದು, ಸಾಕಷ್ಟು ಗೊಂದಲ ಉಂಟಾಗಿದೆ.

ಭಂಡಾರಿ ಪಾಸ್‍ಪೋರ್ಟ್ ನಾವು ವಶಪಡಿಸಿಕೊಂಡಿದ್ದೇವೆ. ಆತನ ಬಳಿ ಅಧಿಕೃತ ಪಾಸ್‍ಪೋರ್ಟ್ ಇಲ್ಲ. ಆದಾಗ್ಯೂ ಆತ ಲಂಡನ್‍ಗೆ ಪರಾರಿಯಾಗಿದ್ದಾನೆ. ಅಂದರೆ ಆತ ಬೇರೆ ಹೆಸರಿನಲ್ಲಿ ನಕಲಿ ಪಾಸ್‍ಪೋರ್ಟ್ ಬಳಸಿದ್ದಾನೆ ಎಂಬುದು ಇದರಿಂದ ದೃಢಪಡುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.  ಈ ಬಗ್ಗೆ ಇಮಿಗ್ರೇಷನ್ ವಿಭಾಗವು ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದೆ. ಆತನನ್ನು ವಶಕ್ಕೆ ತೆಗೆದುಕೊಂಡು ದೇಶಕ್ಕೆ ವಾಪಸ್ ಕರೆತರಲು ಪ್ರಯತ್ನಗಳು ಮುಂದುವರಿದಿವೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin