ಪಿಎಫ್ಐ, ಎಸ್ಡಿಪಿಐ ಹಾಗೂ ಕೆಎಫ್ಡಿ ಸಂಘಟನೆಗಳ ನಿಷೇಧಕ್ಕೆ ರಾಜ್ಯ ಸರ್ಕಾರ ಗಂಭೀರ ಚಿಂತನೆ
ಬೆಂಗಳೂರು,ಜ.5-ರಾಜ್ಯದಲ್ಲಿ ಪದೇ ಪದೇ ಅಶಾಂತಿ, ಕೋಮುಗಲಭೆ ಸೃಷ್ಟಿಯಾಗಲು ಕಾರಣ ಎಂದು ಹೇಳಲಾಗುತ್ತಿರುವ ಪಿಎಫ್ಐ, ಎಸ್ಡಿಪಿಐ ಹಾಗೂ ಕೆಎಫ್ಡಿ ಸಂಘಟನೆಗಳ ಚಟುವಟಿಕೆಗಳಿಗೆ ನಿಷೇಧ ಹೇರಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯ ಹೊರಭಾಗದ ಕಾಟಿಪಳ್ಳದಲ್ಲಿ ಬಿಜೆಪಿ ಕಾರ್ಯಕರ್ತ ದಿಲೀಪ್ ರಾವ್ ಹತ್ಯೆಗೈದಿದ್ದರ ಹಿಂದೆ ಇಂತಹ ಮೂಲಭೂತ ಸಂಘಟನೆಗಳ ಕೈವಾಡವಿದೆ ಎಂಬ ಆರೋಪ ಕೇಳಿಬರುತ್ತಿದೆ.
ಈ ಹಿಂದೆ ಕರಾವಳಿ ತೀರಭಾಗ ಸೇರಿದಂತೆ ರಾಜಧಾನಿ ಬೆಂಗಳೂರು, ಮೈಸೂರು, ಮಡಿಕೇರಿ, ಕುಶಾಲ್ನಗರ, ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ , ಧಾರವಾಡ ಸೇರಿದಂತೆ ಮತ್ತಿತರ ಕಡೆ ನಡೆದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹಲ್ಲೆ, ಹತ್ಯೆ ಹಾಗೂ ಕೋಮುಗಲಭೆಯಲ್ಲಿ ಈ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಸಾರ್ವಜನಿಕರ ಅನುಮಾನವನ್ನು ಪುಷ್ಟೀಕರಿಸುವಂತೆ ಬೆಂಗಳೂರಿನಲ್ಲಿ ನಡೆದಿದ್ದ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್, ಮೈಸೂರಿನ ಮಾಕಳ ರವಿ, ಮಡಿಕೇರಿಯ ಕೊಟ್ಟಪ್ಪ ಸೇರಿದಂತೆ ನಿರ್ದಿಷ್ಟ ಸಂಘಟನೆಯ ಕಾರ್ಯಕರ್ತರ ಹತ್ಯೆಯಲ್ಲಿ ಇದೇ ಸಂಘಟನೆಗಳ ಕೆಲ ಮುಖಂಡರನ್ನು ಈಗಾಗಲೇ ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ಕರ್ನಾಟಕ ಹಾಗೂ ಕೇರಳ ಗಡಿಭಾಗಕ್ಕೆ ಹೊಂದಿಕೊಂಡಿರುವ ಕಾಸರಗೋಡು, ಕಣ್ಣೂರು ಸೇರಿದಂತೆ ಸುತ್ತಮುತ್ತಲ ಭಾಗಗಳಲ್ಲಿ ಪಿಎಫ್ಐ, ಎಸ್ಡಿಪಿಐ ಹಾಗೂ ಕೆಎಫ್ಡಿ ಸಂಘಟನೆಗಳ ಕಾರ್ಯಕರ್ತರು ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಕೆಲ ಪ್ರಕರಣಗಳಿಂದ ಸಾಬೀತಾಗಿತ್ತು. ಅಲ್ಲದೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಕೂಡ ಈ ಮೂರು ಸಂಘಟನೆಗಳು ಐಸಿಸ್ ಸೇರಿದಂತೆ ಪಾಕ್ ಮೂಲದ ಕೆಲ ಭಯೋತ್ಪಾದನಾ ಸಂಘಟನೆಗಳ ಜೊತೆ ಕೈ ಜೋಡಿಸಿವೆ ಎಂದು ಶಂಕಿಸಿತ್ತು.
ಕರ್ನಾಟಕ ಮತ್ತು ಕೇರಳದಲ್ಲಿ ನಡೆದಿರುವ ಹತ್ಯೆಗಳು ಒಂದೇ ಮಾದರಿಯಾಗಿವೆ. ಅಂದರೆ ನಿರ್ದಿಷ್ಟ ಸಂಘಟನೆಗಳ ವೃತ್ತಿಪರರೇ ಇಂತಹ ಕೃತ್ಯಗಳನ್ನು ನಡೆಸಲು ಸಾಧ್ಯ ಎಂಬುದು ಪೊಲೀಸರ ವಾದ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಹತ್ಯೆ ಪ್ರಕರಣಗಳನ್ನೇ ಮುಂದಿಟ್ಟುಕೊಂಡು ಹಿಂದುತ್ವಕ್ಕೆ ಮೊರೆ ಹೋದರೆ, ತನ್ನ ಬುಡ ಅಲುಗಾಡಬಹುದೆಂಬ ಆತಂಕ ಕಾಂಗ್ರೆಸ್ಗೆ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಮೂರು ಸಂಘಟನೆಗಳ ಚಟವಟಿಕೆಗಳಿಗೆ ನಿಷೇಧ ಹೇರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ. ಈ ಸಂಬಂಧ ಗೃಹ ಸಚಿವ ರಾಮಲಿಂಗಾರೆಡ್ಡಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಈಗಾಗಲೇ ಒಂದು ದಿನ ಸುತ್ತಿನ ಮಾತುಕತೆ ನಡೆಸಿದ್ದಾರೆ.
ಬಿಜೆಪಿ ಹಾಗೂ ಸಂಘಪರಿವಾರದವರು ಮೂರು ಸಂಘಟನೆಗಳಿಗೆ ನಿಷೇಧ ಹೇರುವಂತೆ ಪದೇ ಪದೇ ಅಬ್ಬರಿಸುತ್ತಿದ್ದರು. ಕಾಂಗ್ರೆಸ್ ಮೂಲಭೂತವಾದಿಗಳಿಗೆ ಮೃದು ಧೋರಣೆ ಅನುಸರಿಸುತ್ತಿದೆ ಎಂಬುದು ಅವರ ಆರೋಪವಾಗಿತ್ತು. ಈ ಆಪಾದನೆಯಿಂದ ಹೊರಬರಲು ದೃಢ ನಿರ್ಧಾರಕ್ಕೆ ಬಂದಿರುವ ಸಿದ್ದರಾಮಯ್ಯ ನಿಷೇಧ ಹೇರುವ ಮೂಲಕ ದಿಟ್ಟ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.