ಪಿಎಫ್ಐ ಸಂಘಟನೆ ನಿಷೇಧಕ್ಕೆ ಕೇಂದ್ರ ಸರ್ಕಾರ ಸಿದ್ದತೆ
ಬೆಂಗಳೂರು, ಜ.13-ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ನ ಅಸ್ತ್ರಕ್ಕೆ ಕೇಂದ್ರ ಸರ್ಕಾರ ಪ್ರತ್ಯಾಸ್ತ್ರ ಬಳಸಲು ಮುಂದಾಗಿದೆ. ಕೆಲವು ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಹಾಗೂ ಕೋಮುಗಲಭೆಯಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯ(ಪಿಎಫ್ಐ) ಸಂಘಟನೆಯನ್ನು ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ರಾಜ್ಯ ಸರ್ಕಾರ ಪಿಎಫ್ಐ, ಎಸ್ಡಿಪಿಐ, ಭಜರಂಗದಳ ಮತ್ತು ಶ್ರೀರಾಮಸೇನೆಯ ಸಂಘಟನೆಗಳನ್ನು ನಿಷೇಧ ಹೇರಲು ತೀರ್ಮಾನಿಸಿತ್ತು. ಈಗಾಗಲೇ ಗೃಹ ಇಲಾಖೆ ಅಧಿಕಾರಿಗಳು ಈ ಸಂಘಟನೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಿದ್ದತೆ ನಡೆಸಿತ್ತು. ಇದರ ಸುಳಿವು ಅರಿತಿರುವ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಶಿಫಾರಸ್ಸು ಮಾಡುವ ಮೊದಲೇ ಪಿಎಫ್ಐ ಸಂಘಟನೆಯನ್ನು ನಿಷೇಧಿಸಲು ಮುಂದಾಗಿದೆ. ಈ ಸಂಘಟನೆ ಭಯೋತ್ಪಾದನೆ ಚಟುವಟಿಕೆ ಹಾಗೂ ನಿರ್ದಿಷ್ಟ ಸಂಘಟನೆಯ ಕಾರ್ಯಕರ್ತರ ಹತ್ಯೆ, ವಿಶ್ವದ ಅಪಾಯಕಾರಿ ಭಯೋತ್ಪಾದಕ ಸಂಘಟನೆ, ಐಸಿಸ್ ಉಗ್ರರ ಜೊತೆ ಕೈ ಜೋಡಿಸಿರುವ ಹಿನ್ನೆಲೆಯಲ್ಲಿ ನಿಷೇಧಕ್ಕೆ ಮುಂದಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ಇದೆ. ಕೇಂದ್ರ ಚುನಾವಣಾ ಆಯೋಗ ಮಾರ್ಚ್ ತಿಂಗಳಿನಲ್ಲಿ ಚುನಾವಣಾ ದಿನಾಂಕವನ್ನು ನಿಗದಿಪಡಿಸಲಿದೆ. ಆಯೋಗ ದಿನಾಂಕ ಘೋಷಿಸಿದರೆ ಅಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ಹೀಗಾಗಿ ಆಯೋಗ ದಿನಾಂಕ ನಿಗದಿಪಡಿಸುವ ಮೊದಲೇ ಕೇಂದ್ರ ಸರ್ಕಾರ ಪಿಎಫ್ಐಗೆ ಮೂಗುದಾರ ಹಾಕಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ನಿಷೇಧಕ್ಕೆ ಶಿಫಾರಸ್ಸು:
ಇನ್ನು ಪಿಎಫ್ಐ ಸಂಘಟನೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಕೇಂದ್ರ ಗೃಹ ಇಲಾಖೆಗೆ ಶಿಫಾರಸು ಮಾಡಿತ್ತು. ಕೇರಳದ ಕಣ್ಣನೂರು, ಕಾಸರಗೋಡು, ತಿರುವನಂತಪುರಂ, ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಕಾರವಾರ, ಶಿವಮೊಗ್ಗ , ಚಿಕ್ಕಮಗಳೂರು ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಈ ಸಂಘಟನೆ ಕೋಮುಗಲಭೆ, ಭಯೋತ್ಪಾದನೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ ಎಂದು ವರದಿ ನೀಡಲಾಗಿತ್ತು. ಈ ಹಿಂದೆ ನಿಷೇಧಕ್ಕೊಳಪಟ್ಟಿದ್ದ ಸಿಮಿ ಸಂಘಟನೆಯ ಪ್ರತಿರೂಪದಂತಿರುವ ಎಸ್ಎಫ್ಐ ಮೂಲಭೂತ ಸಂಘಟನೆಯಾಗಿದ್ದು, ಮುಂದೊಂದು ದಿನ ದೇಶದ ಆಂತರಿಕ ಭದ್ರತೆಗೆ ಸವಾಲಾಗಿ ಪರಿಣಮಿಸಬಹುದು ಎಂದು ಎನ್ಐಎ ವರದಿಯಲ್ಲಿ ಉಲ್ಲೇಖ ಮಾಡಿತ್ತು.
ಪ್ರತ್ಯೇಕ ಕಾಶ್ಮೀರಕ್ಕಾಗಿ ಹೋರಾಟ ಮಾಡುತ್ತಿರುವ ಕೆಲವು ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆಗಳ ಜೊತೆ ಪಿಎಫ್ಐ ಕೈ ಜೋಡಿಸಿರುವ ಸಾಧ್ಯತೆ ಇದೆ. ಕೆಲವು ಕುಖ್ಯಾತ ಭಯೋತ್ಪಾದಕರಿಗೆ ಈ ಸಂಘಟನೆಗಳ ಸದಸ್ಯರು ಸಾಥ್ ನೀಡಿದ್ದಾರೆ ಎಂಬುದನ್ನು ಪತ್ತೆ ಮಾಡಲಾಗಿತ್ತು. ಎನ್ಐಎ ನೀಡಿರುವ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರ ಪಿಎಫ್ಐನ್ನು ನಿಷೇಧಿಸಲು ಚಿಂತನೆ ನಡೆಸಿದೆ. ಕೆಲ ದಿನಗಳ ಹಿಂದೆ ಕರಾವಳಿ ಜಿಲ್ಲೆಯ ಸಂಭವಿಸಿದ ದಿಲೀಪ್ ರಾವ್, ಪರೇಸ್ ಮೇಸ್ತ, ರುದ್ರೇಶ್, ಕುಟ್ಟಪ್ಪ ಸೇರಿದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರ ಹತ್ಯೆಯಲ್ಲಿ ಪಿಎಫ್ಐ ಸಂಘಟನೆಯ ಕಾರ್ಯಕರ್ತರ ಕೈವಾಡವಿರುವುದು ತನಿಖೆಯಿಂದ ಸಾಬೀತಾಗಿತ್ತು.
ಬೆಂಗಳೂರಿನ ಶಿವಾಜಿನಗರದಲ್ಲಿ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯಲ್ಲಿ ಬಂಧನಕ್ಕೊಳಪಟ್ಟ ಕಾರ್ಯಕರ್ತರು ಇದೇ ಸಂಘಟನೆಗೆ ಸೇರಿದ್ದವರು. ಇತ್ತೀಚೆಗಷ್ಟೆ ನ್ಯಾಯಾಲಯ ಇವರನ್ನು ಆರೋಪಿಗಳೆಂದು ತೀರ್ಪು ನೀಡಿದ್ದು ಸದ್ಯದಲ್ಲೇ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ. ಕೆಲ ದಿನಗಳ ಹಿಂದೆ ಬಿಜೆಪಿ ಸಂಸದರು ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಪಿಎಫ್ಐ ಸಂಘಟನೆಯನ್ನು ನಿಷೇಧಿಸುವಂತೆ ಮನವಿ ಮಾಡಿದ್ದರು. ಇತ್ತ ರಾಜ್ಯ ಸರ್ಕಾರ ಪಿಎಫ್ಐ, ಎಸ್ಡಿಪಿಐ, ಭಜರಂಗದಳ ಹಾಗೂ ಶ್ರೀರಾಮಸೇನೆಯನ್ನು ನಿಷೇಧಿಸಲು ಸಜ್ಜಾಗುತ್ತಿರುವಂತೆ ಕೇಂದ್ರ ಸರ್ಕಾರ ಮೊದಲೇ ನಿಷೇಧಾಸ್ತ್ರಕ್ಕೆ ಮುಂದಾಗಿದೆ. ಈ ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಿಮಿ ಸಂಘಟನೆಗೆ ನಿಷೇಧ ಹೇರಿದ್ದರು.