ಪಿಎಸ್‍ಐ ಮೇಲೆ ಫೈರಿಂಗ್ ಮಾಡಿದ ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಫಿನಿಷ್..?

ಈ ಸುದ್ದಿಯನ್ನು ಶೇರ್ ಮಾಡಿ

Dharmaraj-Bijapur-Murderer

ಹುಬ್ಬಳ್ಳಿ, ಅ.30- ಭೀಮಾ ತೀರದ ಹಂತಕ ಸಂತತಿಯ ಕೊನೆ ಕೊಂಡಿ ಕಳಚಿ ಬಿತ್ತೇ..? ಹೌದು ಎನ್ನುತ್ತಿವೆ ಪೊಲೀಸ್ ಮೂಲಗಳು. ಇಂದು ಮುಂಜಾನೆ ಪೊಲೀಸರು ಮತ್ತು ಹಂತಕರ ನಡುವಿನ ಗುಂಡಿನ ಚಕಮಕಿಯಲ್ಲಿ ಧರ್ಮರಾಜ್ ಚಡಚಣನ ಎದೆಗೆ ಎರಡು ಗುಂಡುಗಳು ನೆಟ್ಟಿದ್ದು, ಆತ ಬದುಕುಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಘಟನೆಯಲ್ಲಿ ಪಿಎಸ್‍ಐ ಗೋಪಾಲ್ ಹಳ್ಳೂರ್‍ಗೂ ಗುಂಡು ತಗುಲಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭೀಮಾ ತೀರದ ಹಂತಕರ ಕೊನೆ ಕೊಂಡಿ ಎಂದೇ ಬಿಂಬಿಸಲಾಗಿದ್ದ ಧರ್ಮರಾಜ್ ಚಡಚಣ ಪ್ರಾಣಭಯದಿಂದ ಅಲೆಮಾರಿಯಾಗಿ ಜೀವನ ಸಾಗಿಸುತ್ತಿದ್ದು, ಕೊಂಕಣಗಾಂವ್‍ನಲ್ಲಿರುವ ತನ್ನ ಜಮೀನಿನಲ್ಲಿ ತನ್ನದೇ ಆದ ಭದ್ರ ಕೋಟೆ ಕಟ್ಟಿಕೊಂಡು ನೆಲೆಸಿದ್ದ.

ಈತನನ್ನು ಮುಟ್ಟಬೇಕಾದರೆ ಆತನ ಕಟ್ಟಾ ಬೆಂಬಲಿಗರಾದ ನಾಲ್ಕು ಸುತ್ತಿನ ಕೋಟೆ ಭೇದಿಸಿ ಒಳಹೋಗಬೇಕಾಗಿತ್ತು.  ಆತನ ಭದ್ರಕೋಟೆಯಲ್ಲಿ ಮಾರಕಾಸ್ತ್ರಗಳಿವೆ ಎಂಬ ಮಾಹಿತಿ ಪಡೆದ ಚಡಚಣ ಠಾಣೆಯ ಪಿಎಸ್‍ಐ ಗೋಪಾಲ್ ಹಳ್ಳೂರ್ ಇಂದು ಮುಂಜಾನೆ ಏಕಾಏಕಿ ಧರ್ಮರಾಜ್ ಚಡಚಣನ ಅಡಗುತಾಣದ ಮೇಲೆ ಏಕಾಏಕಿ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಚಡಚಣ ಬೆಂಬಲಿಗರ ನಡುವೆ ಗುಂಡಿನ ಚಕಮಕಿ ನಡೆಯಿತು. ಘಟನೆಯಲ್ಲಿ ಪಿಎಸ್‍ಐ ಗೋಪಾಲ್ ಅವರಿಗೆ ಗುಂಡು ತಗುಲಿ ಗಾಯಗೊಂಡರು. ಆದರೆ ಬುಲೆಟ್‍ಪ್ರೂಫ್ ಜಾಕೆಟ್ ಧರಿಸಿದ್ದ ಗೋಪಾಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Dharmaraj-Chadachana-01

ಪೊಲೀಸರು ಹಾರಿಸಿದ ಎರಡು ಗುಂಡು ಧರ್ಮರಾಜ್ ಚಡಚಣ ಅವರ ಎದೆ ಭೇದಿಸಿದ್ದು, ಆತ ಬದುಕುಳಿಯುವ ಸಾಧ್ಯತೆಗಳು ಕ್ಷೀಣಿಸಿವೆ. ತೀವ್ರವಾಗಿ ಗಾಯಗೊಂಡಿರುವ ಚಡಚಣನನ್ನು ವಿಜಯಪುರದ ಬ್ಲೀಡ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ.  ಹಂತಕ ಧರ್ಮರಾಜ್, ಪುತ್ರಪ್ಪ ಸಾಹುಕಾರ್ ಭೈರಗೊಂಡ ಹಾಗೂ ಫಯಾಜ್ ಮುಸ್ತಿನ್ ಕೊಲೆಯಲ್ಲಿ ಭಾಗಿಯಾಗಿ ಜೈಲು ಸೇರಿ ಕೆಲ ದಿನಗಳ ಹಿಂದಷ್ಟೆ ಜಾಮೀನಿನ ಮೇಲೆ ಹೊರಬಂದಿದ್ದ. ಭೈರಗೊಂಡನ ಕಡೆಯವರು ತನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಮೇರೆಗೆ ಜೀವ ಭಯದಿಂದ ತನ್ನ ಜಮೀನಿನಲ್ಲೇ ಬೆಂಬಲಿಗರ ಭದ್ರ ಕೋಟೆ ನಿರ್ಮಿಸಿಕೊಂಡಿದ್ದ ಧರ್ಮರಾಜ್ ಚಡಚಣ. ಅಂತಹ ಹಂತಕ ಪೊಲೀಸರ ಗುಂಡಿಗೆ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ.

ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟರೆ ಭೀಮಾ ತೀರದಲ್ಲಿ ಪದೇ ಪದೇ ಹರಿಯುವ ನೆತ್ತರಿನ ಅಧ್ಯಾಯ ಕೊನೆಗೊಳ್ಳಲಿದೆ ಎಂದೇ ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಗುಂಡಿನ ದಾಳಿ ನಡೆದಿರುವ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜನೆ ಮಾಡಲಾಗಿದೆ.  ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‍ಕುಮಾರ್ ಜೈನ್, ಹೆಚ್ಚುವರಿ ಎಸ್‍ಪಿ ಶಿವಕುಮಾರ್ ಗುಣಾರೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin