ಪಿಎ ಕಿಡ್ನ್ಯಾಪ್ ಪ್ರಕರಣ : ಈಶು – ಬಿಎಸ್ವೈಗೆ ಆರ್‍ಎಸ್‍ಎಸ್ ಬುಲಾವ್

ಈ ಸುದ್ದಿಯನ್ನು ಶೇರ್ ಮಾಡಿ

Eshwarappa-Yadiyurappa

ಬೆಂಗಳೂರು,ಅ.7-ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಆಪ್ತರಾದ ವಿನಯ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಆರ್‍ಎಸ್‍ಎಸ್ ಬುಲಾವ್ ನೀಡಿದೆ. ನಾಳೆ ಬೆಳೆಗ್ಗೆ ಚಾಮರಾಜಪೇಟೆಯ ಕೇಶವ ಕೃಪಾದ ಕಚೇರಿಗೆ ಯಡಿಯೂರಪ್ಪ ಮತ್ತು ಈಶ್ವರಪ್ಪ ಆಗಮಿಸಬೇಕೆಂದು ಆರ್‍ಎಸ್‍ಎಸ್ ಉಸ್ತುವಾರಿ ಸಿ.ಎಸ್.ಮುಕುಂದ್ ಸೂಚಿಸಿದ್ದಾರೆ. ಹೀಗಾಗಿ ನಾಳೆ ಈ ಇಬ್ಬರು ಪ್ರಮುಖರಿಗೆ ಸಂಘ ಪರಿವಾರದ ನಾಯಕರು ಯಾವ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ ಎಂಬುದು ಪಕ್ಷದ ವಲಯದಲ್ಲಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ವಿನಯ್ ಅಪಹರಣ ಪ್ರಕರಣ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿರುವ ಕಾರಣ ಇಬ್ಬರನ್ನು ಮುಖಾಮುಖಿ ಭೇಟಿ ಮಾಡಿಸಿ ವಿವಾದಕ್ಕೆ ತೆರೆ ಎಳೆಯುವ ಸಾಧ್ಯತೆ ಇದೆ.  ಕೆಲ ದಿನಗಳ ಹಿಂದೆ ಈಶ್ವರಪ್ಪ ಆಪ್ತರಾಗಿದ್ದ ವಿನಯ್ ಅಪಹರಣದ ಹಿಂದೆ ಯಡಿಯೂರಪ್ಪ ಆಪ್ತ ಸಂತೋಷ್ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್‍ಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು. ಅಲ್ಲದೆ ಖುದ್ದು ಯಡಿಯೂರಪ್ಪನವರಿಗೂ ಸಹ ಠಾಣೆಗೆ ಬರಬೇಕೆಂದು ನೋಟಿಸ್ ನೀಡಲಾಗಿತ್ತು.

ವಿನಯ್ ಅಪಹರಣಕ್ಕೆ ಯಡಿಯೂರಪ್ಪ ನಿವಾಸದಲ್ಲೇ ಸಂಚು ರೂಪಿಸಲಾಗಿತ್ತು ಎಂಬುದು ತನಿಖೆಯಿಂದ ಗೊತ್ತಾಗಿತ್ತು. ಸಂಜಯನಗರದ ನಿವಾಸದ ಕಾರಿಡಾರ್‍ನಲ್ಲೆ ಸಂತೋಷ್ ಮತ್ತು ಅವರ ಬೆಂಬಲಿಗರು ಅಪಹರಣಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿದೆ.  ಈ ಪ್ರಕರಣ ಈಗಾಗಲೇ ಸಾಕಷ್ಟು ವಿವಾದ ಸೃಷ್ಟಿಸಿರುವ ಕಾರಣ ಮುಂದೆ ಇನ್ನಷ್ಟು ಸ್ವರೂಪ ಪಡೆದುಕೊಳ್ಳದಂತೆ ಉಭಯ ನಾಯಕರ ನಡುವೆ ಸಂಧಾನ ಮೂಡಿಸಲು ಆರ್‍ಎಸ್‍ಎಸ್ ನಾಯಕರು ಮುಂದಾಗಿದ್ದಾರೆ.   ಹೀಗಾಗಿಯೇ ನಾಳೆ ಕೇಶವ ಕೃಪದಲ್ಲಿ ಈಶ್ವರಪ್ಪ -ಯಡಿಯೂರಪ್ಪ ಪರಸ್ಪರ ಮುಖಾಮುಖಿಯಾಗಲಿದ್ದಾರೆ.

Facebook Comments

Sri Raghav

Admin