ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ : ಯಾವುದೇ ತನಿಖೆಗೂ ಸಿದ್ಧ ಎಂದ ರೇಣುಕಾಚಾರ್ಯ

ಈ ಸುದ್ದಿಯನ್ನು ಶೇರ್ ಮಾಡಿ

Renukacharyaಬೆಂಗಳೂರು, ಆ.3- ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ತಮ್ಮ ಕೈವಾಡವಿದ್ದರೆ ಸಿಐಡಿ ಸೇರಿದಂತೆ ಯಾವುದೆ ತನಿಖೆ ಎದುರಿಸಲು ಸಿದ್ಧನಿದ್ದೇನೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವಂತಹ ಕೀಳುಮಟ್ಟದ ರಾಜಕಾರಣವನ್ನು ನಾನು ಮಾಡಿಲ್ಲ. ಸಿಐಡಿ ತನಿಖೆ ಸೇರಿದಂತೆ ಸರ್ಕಾರ ಯಾವುದೇ ತನಿಖೆಗೆ ಆದೇಶಿಸಿದರೂ ನಾನು ಎದುರಿಸಲು ಸಿದ್ಧನಿದ್ದೇನೆ. ವಿಸ್ತೃತ ತನಿಖೆ ನಡೆಸುವಂತೆ ಸ್ವತಃ  ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಹಾಗೂ ಸಿಐಡಿ ತನಿಖಾ ತಂಡದ ಮುಖ್ಯಸ್ಥರಿಗೆ ಪತ್ರ ಬರೆಯುವುದಾಗಿ ಪತ್ರಿಕಾಗೋಷ್ಠಿಯಲ್ಲಿಂದು ಅವರು ತಿಳಿಸಿದರು.ಈ ಹಿಂದೆ ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗ ಸ್ವತಃ ನಾನೇ ಅಂದಿನ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರನ್ನು ಭೇಟಿ ಮಾಡಿ ತನಿಖೆ ನಡೆಸುವಂತೆ ಮನವಿ ಮಾಡಿದ್ದೆ. ಈ ಪ್ರಕರಣ ದಲ್ಲಿ ನನ್ನ ಹೆಸರು ಕೇಳಿ ಬಂದಿರುವುದು ನನಗೆ ಆಶ್ಚರ್ಯ ತಂದಿದೆ ಎಂದರು.  ನನ್ನ ರಾಜಕೀಯ ಏಳಿಗೆ ಸಹಿಸದೆ ಕೆಲವರು ಉದ್ದೇಶಪೂರ್ವಕವಾಗಿಯೇ ಇದರಲ್ಲಿ ನನ್ನನ್ನು ಸಿಲುಕಿಸುವ ಷಡ್ಯಂತ್ರ ನಡೆಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರಯ್ಯಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. 30 ಬಾರಿಯಲ್ಲ, ಒಂದೇ ಒಂದು ಬಾರಿಯೂ ನಾನು ಅವರಿಗೆ ದೂರವಾಣಿ ಕರೆ ಮಾಡಿಲ್ಲ. ನನ್ನ ಮೊಬೈಲ್‍ಅನ್ನು ತನಿಖೆಗೆ ಒಳಪಡಿಸಲಿ ಎಂದು ಒತ್ತಾಯಿಸಿದರು.

ಸರ್ಕಾರಕ್ಕೆ ಎಚ್ಚರಿಕೆ:

ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಧಾರವಾಡ ಜಿಲ್ಲೆಯ ನರಗುಂದ ಹಾಗೂ ಯಮನೂರಿ ನಲ್ಲಿ ಪೊಲೀಸರು  ರೈತರು, ಮಹಿಳೆಯರ ಮೇಲೆ ನಡೆಸಿದ ದೌರ್ಜನ್ಯ ಪ್ರಕರಣಕ್ಕೆ ಗೃಹ ಸಚಿವರೆ ನೇರ ಹೊಣೆ ಎಂದು ರೇಣುಕಾ ಚಾರ್ಯ ಹೇಳಿದರು.ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು  ಲಾಠಿಚಾರ್ಜ್ ಮಾಡಿ ಅಮಾನುಷವಾಗಿ ವರ್ತಿಸಿದ್ದಾರೆ. ಇದರ ನೈತಿಕ ಹೊಣೆ ಹೊತ್ತು ಗೃಹ ಸಚಿವರು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು. ಸರ್ಕಾರ ಇದೇ ರೀತಿ ರೈತರ ಮೇಲೆ ದಬ್ಬಾಳಿಕೆ ನಡೆಸಿದರೆ ಜನ ಕಾಂಗ್ರೆಸ್ ಸರ್ಕಾರವನ್ನು ಮನೆಗೆ ಕಳುಹಿಸಲಿದ್ದಾರೆ ಎಂದು ಹೇಳಿದರು.ಅಬಕಾರಿ ಸಚಿವ ಎಚ್.ವೈ.ಮೇಟಿ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ರೇಣುಕಾಚಾರ್ಯ ಗ್ರಾಮೀಣ ಭಾಗದ ಜನರಿಗೆ ಈ ರೀತಿ ಹೇಳಿರುವುದು ಸರಿಯಲ್ಲ ಎಂದು ತಿಳಿಸಿದರು.

 

► Follow us on –  Facebook / Twitter  / Google+

 ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

 

 

Facebook Comments

Sri Raghav

Admin