ಪಿಯು ಉಪನ್ಯಾಸಕರ ಬೇಸಿಗೆ ರಜೆಯ ಮಜಾಕ್ಕೆ ಬ್ರೇಕ್ ಹಾಕಿದ ರಾಜ್ಯ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

PUC-dsgasfdhgdfh

ಬೆಂಗಳೂರು, ಏ.15- ಬೇಸಿಗೆ ರಜೆಯ ಮಜಾ ಅನುಭವಿಸಲು ಸಿದ್ಧರಾಗಿದ್ದ ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಭಾರೀ ನಿರಾಸೆ ಮೂಡಿಸಿದೆ.  ಕಲಾ ವಿಭಾಗದ ಉಪನ್ಯಾಸಕರನ್ನು ಹೊರತುಪಡಿಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕರು ಮೇ 5 ರಿಂದ 20ರವರೆಗೆ ಕಡ್ಡಾಯವಾಗಿ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂದು ಪದವಿಪೂರ್ವ ಶಿಕ್ಷಣ ಮಂಡಳಿ ಸೂಚನೆ ನೀಡಿದೆ. ಈಗಾಗಲೇ ಈ ಪ್ರಸ್ತಾಪವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದ್ದು, ಉಪನ್ಯಾಸಕರಿಗೆ ಕೌಶಲ್ಯ ವೃದ್ಧಿಸಿಕೊಳ್ಳುವುದು ಹಾಗೂ ಇಂದಿನ ಪರಿಸ್ಥಿತಿಗನುಗುಣವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ತರಬೇತಿ ಶಿಬಿರಗಳನ್ನು ಆಯೋಜಿಸುತ್ತಿದ್ದೇವೆ. ಇದಕ್ಕೆ ಅನುಮತಿ ನೀಡಬೇಕೆಂದು ಮನವಿ ಮಾಡಲಾಗಿದೆ.

ಒಂದು ವೇಳೆ ಸರ್ಕಾರ ಅನುಮತಿ ನೀಡಿದರೆ ಮೇ 5 ರಿಂದ 20ರವರೆಗೆ ಜಿಲ್ಲಾಮಟ್ಟದಲ್ಲಿ ಉಪನ್ಯಾಸಕರಿಗೆ ಹಿರಿಯ ಪ್ರಾಂಶುಪಾಲರು, ಸಹಾಯಕ ಪ್ರಾಧ್ಯಾಪಕರು, ಪ್ರಾಧ್ಯಾಪಕರು, ಶಿಕ್ಷಣ ತಜ್ಞರಿಂದ ತರಬೇತಿ ಕಾರ್ಯಕ್ರಮಗಳು ನಡೆಯಲಿವೆ. ಸಾಮಾನ್ಯವಾಗಿ ಪ್ರತಿವರ್ಷ ಮೇ 1 ರಿಂದ ಜೂನ್ 1ರವರೆಗೆ ಉಪನ್ಯಾಸಕರಿಗೆ ಬೇಸಿಗೆ ರಜೆ ಸಿಗುತ್ತಿತ್ತು. ಬರೋಬ್ಬರಿ ಎರಡು ತಿಂಗಳು ತಮ್ಮ ಕುಟುಂಬದ ಸದಸ್ಯರ ಜೊತೆ ಸಮಯ ಕಳೆಯುತ್ತಿದ್ದರು. ಇದಕ್ಕೆ ಕಡಿವಾಣ ಹಾಕಿರುವ ಶಿಕ್ಷಣ ಇಲಾಖೆ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕರಿಗೆ ತರಬೇತಿಯ ಶಿಕ್ಷೆ ನೀಡಲು ಮುಂದಾಗಿದೆ.

ಈಗಾಗಲೇ ತರಬೇತಿ ನೀಡುವ ಸಂಬಂಧ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ರಾಜ್ಯದಲ್ಲಿ 4524 ಸರ್ಕಾರಿ ಹಾಗೂ 1703 ಖಾಸಗಿ ಅನುದಾನಿತ ವಿಜ್ಞಾನ ಉಪನ್ಯಾಸಕರಿದ್ದರೆ, ವಾಣಿಜ್ಯ ವಿಭಾಗದಿಂದ ಸರಿಸುಮಾರು 8 ಸಾವಿರ ಉಪನ್ಯಾಸಕರು ಬೋಧನೆ ಮಾಡುತ್ತಿದ್ದಾರೆ.  ಯಾವ ಯಾವ ಕಾಲೇಜುಗಳಲ್ಲಿ ವಾರ್ಷಿಕ ಫಲಿತಾಂಶ ಹಿನ್ನಡೆಯಾಗಿರುತ್ತದೆಯೋ ಅಂತಹ ಕಡೆ ವಿಶೇಷ ಉಪನ್ಯಾಸಕರಿಂದ ತರಬೇತಿ ನೀಡಿ ಫಲಿತಾಂಶದ ಪ್ರಮಾಣವನ್ನು ಹೆಚ್ಚಿಸುವುದು ಇದರ ಉದ್ದೇಶ.

ಈಗಾಗಲೇ 1204 ಸರ್ಕಾರಿ, 797 ಅನುದಾನಿತ, 2823 ಖಾಸಗಿ ಅನುದಾನಿತ, 12 ಮಹಾನಗರ ಪಾಲಿಕೆ ಕಾಲೇಜುಗಳು, 162 ಸಂಯುಕ್ತಾ ಪದವಿಪೂರ್ವ ಕಾಲೇಜುಗಳಿಗೆ ತರಬೇತಿ ನೀಡಲು ಸರ್ಕಾರ ನಿರ್ಧರಿಸಿದೆ.

ವಿರೋಧ :

ಸರ್ಕಾರದ ಈ ಕ್ರಮಕ್ಕೆ ಕೆಲವು ಉಪನ್ಯಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ವರ್ಷಪೂರ್ತಿ ನಾವು ಬೋಧನೆ ಮಾಡಿರುತ್ತೇವೆ. ಎರಡು ತಿಂಗಳು ನಮ್ಮ ಕುಟುಂಬದ ಸದಸ್ಯರ ಜೊತೆ ಸಮಯ ಕಳೆಯಬೇಕೆಂಬ ಅಭಿಲಾಷೆ ಇರುತ್ತದೆ. ಇದ್ದಕ್ಕಿದ್ದಂತೆ ತರಬೇತಿ ಕಾರ್ಯಕ್ರಮಗಳಿಗೆ ಹಾಜರಾಗಬೇಕೆಂದು ಅಧಿಸೂಚನೆ ಹೊರಡಿಸಿದರೆ ಇದನ್ನು ಹೇಗೆ ಪಾಲಿಸುವುದು ಎಂಬ ಪ್ರಶ್ನೆಯನ್ನು ಕೆಲವು ಉಪ್ನಯಾಸಕರು ಮುಂದಿಟ್ಟಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin