ಪೀಣ್ಯ ಬಸ್ ನಿಲ್ದಾಣಕ್ಕೆ ಬಂತು ಮರುಜೀವ, ಮತ್ತೆ ಬಸ್ ಸಂಚಾರ ಆರಂಭ
ಬೆಂಗಳೂರು, ಏ.13- ಕೆಎಸ್ಆರ್ಟಿಸಿಗೆ ನಷ್ಟ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಪೀಣ್ಯ ಬಸ್ ನಿಲ್ದಾಣಕ್ಕೆ ಮರುಜೀವ ನೀಡಿ ಇಂದಿನಿಂದ ಮತ್ತೆ ಬಸ್ ಸಂಚಾರ ಆರಂಭಿಸಲಾಗಿದೆ. ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಉತ್ತರ ಕರ್ನಾಟಕಕ್ಕೆ ತೆರಳುತ್ತಿದ್ದ ಈಶಾನ್ಯ ಮತ್ತು ವಾಯುವ್ಯ ಸಾರಿಗೆ ನಿಗಮದ ಬಸ್ಗಳು ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದಿಂದ ಸಂಚಾರ ಆರಂಭಿಸಿದವು. ಕಳೆದ ನಾಲ್ಕು ವರ್ಷಗಳಿಂದ ಪ್ರಯಾಣಿಕರ ಕೊರತೆ ಕಾರಣದಿಂದ ಬಿಕೋ ಎನ್ನುತ್ತಿದ್ದ ಪೀಣ್ಯ ನಿಲ್ದಾಣವನ್ನು ಮತ್ತೆ ಬಳಸಿಕೊಳ್ಳಲಾಗುತ್ತಿದ್ದು, ಉತ್ತರ ಕರ್ನಾಟಕದ 17 ಜಿಲ್ಲೆಗಳ ಕೆಲವು ಬಸ್ಗಳನ್ನು ಕಾರ್ಯಾಚರಣೆ ಮಾಡಲು ಚಿಂತನೆ ನಡೆಸಿ ಸಂಚಾರ ಆರಂಭಿಸಲಾಗಿದ್ದು, ಇಂದು ಒಟ್ಟು 40 ಬಸ್ಗಳು ಸೇವೆ ಆರಂಭಿಸಿವೆ.
ಬಸವೇಶ್ವರ ಬಸ್ ನಿಲ್ದಾಣದಿಂದ ಅಯ್ಯಪ್ಪದೇವಸ್ಥಾನ- ಜಾಲಹಳ್ಳಿಮೆಟ್ರೋ ನಿಲ್ದಾಣ ಮಾರ್ಗದಲ್ಲಿ ಎರಡು ಮಿಡಿ ಬಸ್ಗಳನ್ನು ಉಚಿತ ಕಾರ್ಯಾಚರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೆಜೆಸ್ಟಿಕ್ನಿಂದ ಹೊರಡುತ್ತಿದ್ದ ಚಿಕ್ಕಮಗಳೂರು, ಹುಬ್ಬಳ್ಳಿ, ಶಿವಮೊಗ್ಗ, ತುಮಕೂರು, ಕೊಪ್ಪಳ, ಚಿತ್ರದುರ್ಗ, ರಾಯಚೂರು, ಹಾಸನ, ಪುತ್ತೂರು, ಮಂಗಳೂರು, ಹೊಸಪೇಟೆ, ಬಳ್ಳಾರಿ, ಗದಗಕ್ಕೆ ತೆರಳುವ ವಿವಿಧ ಡಿಪೋಗಳ ಕೆಎಸ್ಆರ್ಟಿಸಿ ಬಸ್ಗಳು ಪೀಣ್ಯಾ ಬಸ್ ನಿಲ್ದಾಣದಿಂದಲೇ ಕಾರ್ಯಾರಂಭ ಮಾಡಿದೆ.