ಪುಟ್ಟ ಮಕ್ಕಳ ಪ್ರಾಣ ತಿನ್ನುವ ಅಂಟುರೋಗ ನಾಯಿಕೆಮ್ಮು, ಇರಲಿ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

cough

–  ಚಿಕ್ಕರಸು

ಸಾಮಾನ್ಯವಾಗಿ ಒಂದು ವರ್ಷದಿಂದ ಹತ್ತು ವರ್ಷದವರೆಗಿನ ಮಕ್ಕಳಿಗೆ ಹಲವು ರೋಗಗಳು ಕಾಡುವುದು ಸ್ವಾಭಾವಿಕ. ಅದರಲ್ಲೂ ಸ್ವಚ್ಚತೆ ಇಲ್ಲದ ಕಡೆಗಳಲ್ಲಂತೂ ಮಕ್ಕಳು ನಿರಂತರವಾಗಿ ಈ ಅಂಟುರೋಗಗಳಿಂದ ನರಳುತ್ತಲೇ ಇರುತ್ತಾರೆ. ಮಳೆಗಾಲ, ಬೇಸಿಗೆ, ಚಳಿಗಾಲ ಎನ್ನದೆ ಕಾಡುವ ಹಲವು ರೋಗಗಳ ಪೈಕಿ ಕೆಮ್ಮು ಪ್ರಮುಖವಾದದು. ಆಹಾರದಲ್ಲಿ , ಕುಡಿಯುವ ನೀರಿನಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಈ ಕೆಮ್ಮು ಮಕ್ಕಳನ್ನು ಬಾಧಿಸುತ್ತದೆ. ಔಷಧ ಹಾಕಿದರೂ ಕೂಡ ಕೆಲವೊಮ್ಮೆ ಈ ಕೆಮ್ಮು ಕಾಡುವುದುಂಟು. ಕೆಮ್ಮುಗಳಲ್ಲಿ ನಾನಾ ಬಗೆ ಇರುತ್ತದೆ. ಕೆಲವು ರೀತಿಯ ಕೆಮ್ಮು ಏನಾದರೂ ಔಷಧ ಸೇವಿಸಿದ ತಕ್ಷಣ ಕಡಿಮೆಯಾಗುತ್ತದೆ. ಆದರೆ ಇನ್ನು ಕೆಲವು ಕಾಡುವುದೇ ಹೆಚ್ಚು. ಅಂಥವುಗಳಲ್ಲಿ ನಾಯಿ ಕೆಮ್ಮು ಕೂಡ ಒಂದು.

ನಾಯಿ ಕೆಮ್ಮು:

ಹಸುಳೆಯನ್ನು ತೀವ್ರವಾಗಿ ಪೀಡಿಸುವ ರೋಗಗಳಲ್ಲಿ ನಾಯಿಕೆಮ್ಮ ಒಂದಾಗಿದೆ. ನಾಯಿ ಕೆಮ್ಮಿಗೆ ಕಾರಣವಾದ ರೋಗಾಣು ಬರಿಗಣ್ಣಿಗೆ ಗೋಚರಿಸದು. ಏಕೆಂದರೆ ಅದು ಅತ್ಯಂತ ಸೂಕ್ಷ್ಮ ಜೀವಾಣು. ಅದರ ಹೆಸರು ¾¾ಬಾರ್ಡೆಟ್ ಮತ್ತು ಗೆಂಗವು ಎಂಬ ವೈದ್ಯಕೀಯ ವಿಜ್ಞಾನಿಗಳು 1906ರಲ್ಲಿ ಪ್ರಪ್ರಥಮವಾಗಿ ಈ ರೋಗಾಣುಗಳನ್ನು ಪ್ರತ್ಯೇಕವಾಗಿ ಗುರುತಿಸಿ ಅದರ ಸ್ವರೂಪವನ್ನು ವಿವರಿಸಿದರು. ಆದುದರಿಂದಲೇ ಆ ವಿಜ್ಞಾನಿಗಳ ಹೆಸರನ್ನೇ ಈ ರೋಗಾಣುವಿಗೆ ಇಡಲಾಗಿದೆ. ಮಿಣಿ ಜೀವಶಾಸ್ತ್ರ ಪ್ರಕಾರ ಇವು `ಗ್ರಾಮ್ ನೆಗೆಟಿವ್’ ಗುಂಪಿಗೆ ಸೇರಿದ್ದು, ಇವು ದೇಹದ ಮೇಲೆ ದಾಳಿ ನಡೆಸಲು ಆಯ್ಕೆ ಮಡುವ ವಿಶೇಷ ಭಾಗಗಳೆಂದರೆ, ಶ್ವಾಸನಾಳ ಮತ್ತು ಅದರ ಕವಲುಗಳು. ಪ್ರಾರಂಭಿಕವಾಗಿ ರೋಮಗಳಿಂದ ಪ್ರವೇಶಿಸಿ ಕ್ರಮೇಣವಾಗಿ ಜೀವಕೋಶಗಳನ್ನು ಆಕ್ರಮಿಸಿಕೊಂಡು ಹಾನಿಯನ್ನುಂಟು ಮಾಡುತ್ತವೆ. ಈ ಪದರಗಳಲ್ಲಿ ರೋಗಾಣುಗಳು ವೃದ್ದಿಯಾಗಿ ಎರಡು ಬಗೆಯ ವಿಷ ದ್ರವ್ಯಗಳನ್ನು ಸ್ರವಿಸಿ, ಆ ಮೂಲಕ ರೋಗಿಗಳಿಗೆ ಧಕ್ಕೆಯನ್ನುಂಟು ಮಾಡುತ್ತವೆ. ರೋಗಾಣವು ಶರೀರ ಪ್ರವೇಶಿಸಿದ ನಂತರ ರೋಗ ಪ್ರಕಟವಾಗುವುದಕ್ಕೆ 7ರಿಂದ 10 ದಿನಗಳ ಕಾಲ ಹಿಡಿಯುತ್ತದೆ.

ನಾಯಿ ಕೆಮ್ಮು ಎರಡು ಬಗೆಗಳಲ್ಲಿ ಹರಡುತ್ತದೆ:

1. ನೇರ ಸಂಪರ್ಕದಿಂದ, 2. ಪರೋಕ್ಷ ಸಂಪರ್ಕದಿಂದ. ರೋಗಿಯ ಗಂಟಲು, ಮೂಗು ಹಾಗೂ ಶ್ವಾಸನಾಳಗಳಲ್ಲಿ ವಾಸಿಸುವ ರೋಗಾಣುಗಳು ರೋಗಿ ಸೀನುವಾಗ, ಕೆಮ್ಮುವಾಗ ಹೊರಬರುವ ಕಫದ ತುಂತುರುಗಳಿಂದ ಆರೋಗ್ಯವಂತ ಮಕ್ಕಳ ಮೇಲೆ ಸಿಡಿದು ರೋಗದ ಸೋಂಕು ಅಂಟಿಕೊಳ್ಳುತ್ತದೆ. ಈ ರೋಗಾಣುಗಳು ಗಾಳಿಯಲ್ಲಿ ಪಸರಿಸಿ ಆರೋಗ್ಯವಂತರಿಗೂ ಅಂಟಿಕೊಂಡು ಅವರಲ್ಲೂ ಈ ರೋಗವನ್ನು ಉಂಟು ಮಾಡುತ್ತದೆ. ಇದು ಸಾಂಕ್ರಾಮಿಕ ರೋಗವಾಗಿದ್ದು ಬಹು ಬೇಗ ಒಬ್ಬರಿಂದೊಬ್ಬರಿಗೆ ಹರಡುತ್ತದೆ.

ನಾಯಿ ಕೆಮ್ಮು ಗ್ರಾಮೀಣ ಪ್ರದೇಶಗಳಿಗಿಂತ ನಗರಗಳಲ್ಲಿ ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ರೋಗಕ್ಕೆ ಸಮಶೀತೋಷ್ಣ ವಲಯದಲ್ಲಿ ಪೂರಕ ವಾತಾವರಣವಿರುತ್ತದೆ. ಉಷ್ಣ ವಲಯಗಳಲ್ಲಿ ಇದರ ಹಾವಳಿ ಅಪರೂಪ. ಈ ಪ್ರದೇಶಗಳಲ್ಲಿ ರೋಗ ಬಂದರೂ ಅದರ ತೀವ್ರತೆ ಕಡಿಮೆಯಾಗಿರುತ್ತದೆ. ಶೀತದ ಹವೆಯಲ್ಲಿ ಸಾಂಕ್ರಾಮಿಕವಾಗಿ ಬರುವುದುಂಟು.

ನಾಯಿ ಕೆಮ್ಮಿನ ಹಂತಗಳು :
ಬಾಲಾವ್ಯವಸ್ಥೆಯಲ್ಲಿ ಕಾಡುವ ಕಾಯಿಲೆಗಳಲ್ಲಿ ಅತೀವ ಕಿರಿಕಿರಿ ಮತ್ತು ಹಿಂಸೆ ಕೊಡುವ ಕಾಯಿಲೆ ಎಂದರೆ ನಾಯಿ ಕೆಮ್ಮು. ಇದು ದಿಢೀರ್ ಸಂಭವಿಸಿ ತೀವ್ರ ಸ್ವರೂಪದಲ್ಲಿ ವಿಷಮಿಸುತ್ತದೆ. ಇದು ಆರು ವಾರಗಳಿಂದ ಎಂಟು ವಾರಗಳಷ್ಟು ದೀರ್ಘಕಾಲ ಮಕ್ಕಳನ್ನು ಪೀಡಿಸುತ್ತದೆ.

ಮೊದಲ ಹಂತ:
ನಾಯಿಕೆಮ್ಮಿನ ಮೊದಲ ಹಂತದ ಚಿಹ್ನೆಗಳು ಹೀಗಿರುತ್ತವೆ… ಜ್ವರ, ನೆಗಡಿ, ಸೀನು, ಮೂಗಿನಲ್ಲಿ ಸೋರುವಿಕೆ, ಕಣ್ಣಿನಲ್ಲಿ ನೀರು ಸುರಿಯುವುದು, ಗಂಟಲು ಕೆರೆತ, ಒಣಕೆಮ್ಮು, ಈ ಹಂತದಲ್ಲಿ ಕೆಮ್ಮು ಬರುತ್ತಿದ್ದರೂ ಅದನ್ನು ನಾಯಿಕೆಮ್ಮು ಎಂದು ಹೇಳಲಾಗುವುದಿಲ್ಲ. ಈ ಅವಧಿ ಒಂದು ವಾರದಿಂದ ಎರಡು ವಾರದವರೆಗೆ ಇರುತ್ತದೆ. ಇತರರಿಗೆ ರೋಗ ಹರಡುವುದು ಸಾಮಾನ್ಯವಾಗಿ ಈ ಹಂತದಲ್ಲಿಯೇ.

ಎರಡನೇ ಹಂತ:
ಎರಡನೇ ಹಂತವನ್ನು ರೋಗ ಕಾಲೂರುವ ಹಂತವೆಂದು ಕರೆಯಬಹುದು. ಈ ಹಂತದಲ್ಲಿಯೇ ರೋಗವು ತೀವ್ರ ಹಂತಕ್ಕೆ ತಲುಪುತ್ತದೆ. ಒಮ್ಮೊಮ್ಮೆ ಒಂಟಿಯಾಗಿ ಬರುತ್ತಿದ್ದ ಕೆಮ್ಮು ಒಮ್ಮಿಂದೊಮ್ಮೆಲೇ ಅತ್ಯಂತ ರಭಸದಿಂದ ಮುನ್ನುಗ್ಗಿ ಬರುತ್ತದೆ. ಇದರ ಸಮಯವೂ ಕೂಡ ಹೆಚ್ಚು. ಈ ಗುಂಪಿನ ಕೆಮ್ಮು ಮತ್ತೆ ಮತ್ತೆ ಆವರ್ತಿಸುವುದು. ಯಾವುದೇ ಪ್ರಚೋದನೆಗೆ ಒಳಪಡೆದೆಯೇ ಕೆಮ್ಮು ತಾನಾಗಿಯೇ ಬರುವುದು.
ಕೆಮ್ಮಿನ ಸರಣಿ ಬಂದ ನಂತರ
*ಮುಖವೆಲ್ಲ ಕೆಂಪಾಗುವುದು
*ಕಣ್ಣಿನ ಗುಡ್ಡೆ ಉಬ್ಬಿ ಹೊರಗಡೆ ಬಂದಂತಿರುವುದು
*ಕಣ್ಣಿನ ಪೂರೆಯ ಅಡಿಯಲ್ಲಿ ರಕ್ತಸ್ರಾವ
*ತೀವ್ರ ಬಳಲಿಕೆ
*ಮೂಗು, ಬಾಯಿ, ಕಿವಿಗಳಿಂದ ರಕ್ತ ಮಿಶ್ರಿತ ಲೋಳೆ ಬರುವುದು
*ಕಫದಲ್ಲಿ ರಕ್ತಸ್ರಾವ
*ಪ್ರಜ್ಞೆ ತಪ್ಪುವುದೂ ಉಂಟು.
ರಾತ್ರಿ ಸಮಯದಲ್ಲಿ ಇದು ಅತ್ಯಂತ ತ್ರಾಸು ನೀಡುತ್ತದೆ. ಈ ಲಕ್ಷಣಗಳನ್ನು ಗಮನಿಸಿದರೆ ಇದು ನಾಯಿಕೆಮ್ಮು ಎಂದು ನಿರ್ಧರಿಸಬಹುದು.
ಮೂರನೇ ಹಂತ
ಮೂರನೇ ಹಂತವನ್ನು ಚೇತರಿಕೆ ಹಂತವೆಂದು ಕರೆಯಬಹುದು. ಈ ಹಂತದಲ್ಲಿ ಮಗುವಿಗೆ ಕಡಿಮೆಯಾಗಿ ಹೂ ಎಂಬ ಶಬ್ದವು ಮಾಯವಾಗಿ, ಕೆಮ್ಮಿನ ಸಂಖ್ಯೆಯೂ ಕಡಿಮೆಯಾಗುತ್ತದೆ. ಜ್ವರವೂ ಕೂಡ ಕಡಿಮೆಯಾಗುತ್ತದೆ.

ಪರಿಣಾಮ:

ಶ್ವಾಸಕೋಶದ ತೊಡಕುಗಳು, ನ್ಯುಮೋನಿಯಾ ಹಾಗೂ ಬ್ರಾಂಕೋನ್ಯುಮೋನಿಯಾ, ಹೃದಯದ ಕಾರ್ಯ ವೈಫಲ್ಯ, ಕೆಮ್ಮಿನಲ್ಲಿ ಹರ್ನಿಯಾ ಮತ್ತು ಪ್ರೊಲ್ಯಾಪ್ಸ್ ರೆಕ್ಟಮ್, ಕಣ್ಣಿನ ಅಕ್ಷಿಪಟಲ ಕಳಚಿಕೊಳ್ಳುವುದು, ಮೂತ್ರ ಕೋಶದ ಸೋಂಕು, ಮೂತ್ರದಲ್ಲಿ ಸಕ್ಕರೆಯ ಅಂಶ ಹೆಚ್ಚು ಹೋಗುವುದು, ತೀವ್ರತರದ ಅಪೌಷ್ಟಿಕತೆ ಹಾಗೂ ಕರುಳಿನ ಉರಿಯೂತ ಮುಂತಾದವುಗಳಿಗೆ ಇದು ಗುರಿ ಮಾಡುತ್ತದೆ.  ಔಷಧಿಯಾಗಿ ಟೆಟ್ರಾಸೈಕ್ಲಿನ್ ಮತ್ತು ಕ್ಲೋರಂ ಫೆನಿಕಾಲ್ ಬಳಕೆಯಲ್ಲಿವೆ. ಇವುಗಳು ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲಾಗದಿದ್ದರೂ ಬ್ರಾಂಕೊನ್ಯುಮೋನಿಯಾ, ನ್ಯುಮೋನಿಯಾ ಮುಂತಾದ ಹಲವಾರು ತೊಡಕುಗಳನ್ನು ತಪ್ಪಿಸುತ್ತದೆ.

ರೋಗದ ಚಿಕಿತ್ಸೆಯಲ್ಲಿ ರೋಗವು ಇತರರಿಗೆ ಹರಡದಂತೆ ಎಚ್ಚರಿಕೆ ವಹಿಸುವುದು ಮಹತ್ವದ ಹೊಣೆಗಾರಿಕೆಯಾಗಿದೆ. ಸುಮಾರು ಒಂದು ತಿಂಗಳವರೆಗೂ ರೋಗಿಯನ್ನು ಪ್ರತ್ಯೇಕಿಸಿಡಬೇಕು.  ಇವರ ಸಂಪರ್ಕಕ್ಕೆ ಯಾವುದೇ ಮಕ್ಕಳು ಬರದಂತೆ ನೋಡಿಕೊಳ್ಳುವುದು ಮುಖ್ಯ. ಈ ಕಾಯಿಲೆಗೆ ಕೂಸುಗಳು ಬಲಿಯಾಗುವುದಕ್ಕೆ ಮುನ್ನ ರೋಗ ಬರದಂತೆ ತಡೆಯುವುದು ಬಹಳ ಮುಖ್ಯ. ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಸಾಮಾನ್ಯವಾಗಿ ಉಚಿತವಾಗಿ ದೊರೆಯುವಂತಹ ನಾಯಿಕೆಮ್ಮು ವಿರುದ್ಧದ ಲಸಿಕೆಯನ್ನು 2ನೇ, 3ನೇ ಹಾಗೂ 4ನೇ ತಿಂಗಳಲ್ಲಿ ಹಾಕಿಸುವುದು ಮಕ್ಕಳಿಗೆ/ಮಗುವಿಗೆ ಶ್ರೀರಕ್ಷೆಯಾಗುತ್ತದೆ.   ಪ್ರಾಣಾಂತಿಕ ಕಾಯಿಲೆಗಳಾದ ಡಿಫ್ತೀರಿಯಾ, ನಾಯಿಕೆಮ್ಮು, ಧನುರ್ವಾಯು ಈ ಮೂರು ರೋಗಗಳಿಂದ ಮಕ್ಕಳನ್ನು ರಕ್ಷಿಸುವುದು ಬಹಳ ಮುಖ್ಯ. ಕಾಲ ಕಾಲಕ್ಕೆ ಸರಿಯಾಗಿ ತಪ್ಪದೇ ಲಸಿಕೆಗಳನ್ನು ಕೊಡಿಸಿ ಮಕ್ಕಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ತಂದೆ-ತಾಯಿಯರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿಯೂ ಹೌದು ! ಮಕ್ಕಳ ಬಾಲ್ಯದ ಬದುಕು ಮುದುಡಿ ಹೋಗದಿರಲಿ.

ಪ್ರಮುಖ ಚಿಹ್ನೆಗಳು : 

ಮಗುವಿಗೆ ಯಾವುದೇ ರೀತಿಯ ಉದ್ವಿಗ್ನತೆ, ನಿರಾಸೆಯುಂಟಾಗಿ ಅಳು ಪ್ರಾರಂಭಿಸಿದಾಗ
ಆಹಾರ ಸೇವಿಸಲು ಪ್ರಾರಂಭವಾದಾಗ
ವೈದ್ಯರು ಗಂಟಲು ಪರೀಕ್ಷೆ ಮಾಡಲು ಪ್ರಯತ್ನಿಸಿದಾಗ ಕೆಮ್ಮು ಆರಂಭವಾಗಬಹುದು.
ಬಹಳ ರಭಸದಿಂದ ಕೆಮ್ಮು ಬಂದು ಮುಗಿಯುತ್ತಿರುವಾಗಲೇ ಮತ್ತೊಮ್ಮೆ ಬರಗೊಡಗುತ್ತದೆ
ಕೆಮ್ಮಿನ ರಭಸಕ್ಕೆ ಮಗು ತತ್ತರಿಸುತ್ತದೆ
ಕೆಮ್ಮು ಸಾಲಾಗಿ ಬಂದ ನಂತರ ಮಗು ತೆರೆದ ಬಾಯಿ, ಚಾಚಿದ ನಾಲಿಗೆ ಇಟ್ಟು , ಕಷ್ಟದಿಂದ ಶ್ವಾಸಕೋಶದ ಕಫವನ್ನೆಲ್ಲ ಹೊರಗೆ ಹಾಕುತ್ತದೆ
ಎದೆಯಲ್ಲಿರುವ ಗಾಳಿಯನ್ನೆಲ್ಲ ಹೊರಹಾಕಲು ಪ್ರಯತ್ನಿಸುತ್ತದೆ
ಈ ಪ್ರಕ್ರಿಯೆಯಲ್ಲಿ ತುಟಿಯೆಲ್ಲ ನೀಲಿಯಾಗಿ ಮುಖವೆಲ್ಲ ಬೆವರಿ ಇನ್ನೇನು ಉಸಿರು ನಿಂತೇ ಹೋಯಿತು ಎಂಬಂತಾ ಗುತ್ತದೆ.
ತಕ್ಷಣ ಮಗು ಹೂ ಎಂಬ ಶಬ್ದದೊಂದಿಗೆ ದೀರ್ಘ ಉಸಿರನ್ನು ಎಳೆದುಕೊಂಡು ಸ್ವಲ್ಪ ಸಮಾಧಾನಪಡುತ್ತದೆ.
ಚಿಕಿತ್ಸಾ ಕ್ರಮಗಳು : 

ರೋಗ ಚಿಕಿತ್ಸೆಯಲ್ಲಿ ಮುಖ್ಯವಾಗಿ ಶುಶ್ರೂಷೆಗೇ ಹೆಚ್ಚು ಪ್ರಾಧ್ಯಾನ್ಯತೆ ನೀಡಬೇಕು.
ಇದನ್ನು ಪೂರ್ಣವಾಗಿ ಗುಣಪಡಿಸಬಲ್ಲ ಯಾವುದೇ ಔಷಧಿಯಿಲ್ಲ.
ನಿರ್ಮಲವಾದ ಗಾಳಿ ಅವಶ್ಯಕ.
ಸಣ್ಣ ಪ್ರಮಾಣದಲ್ಲಿ ಆಹಾರವನ್ನು ಆಗಾಗ ಕೊಡುತ್ತಿರಬೇಕು. ಆಗ ವಾಂತಿಯಾಗುವ ಪ್ರಮೇಯ ಕಡಿಮೆ.
ಮಗುವಿಗೆ ಅಧಿಕ ಒತ್ತಾಸೆ ಹಾಗೂ ಸಾಂತ್ವನದ ಅವಶ್ಯಕತೆ ಹೆಚ್ಚಿರುತ್ತದೆ.
ನಾಯಿಕೆಮ್ಮು ರೋಗವು ಆರ್ಥಿಕವಾಗಿ ಹಿಂದುಳಿದ ವರ್ಗದಲ್ಲಿಯೂ ಅಪೌಷ್ಟಿಕತೆ, ರಿಕೆಟ್ಸ್ , ಕ್ಷಯರೋಗ ಮತ್ತಿತರ ಶ್ವಾಸಕೋಶದ ಕಾಯಿಲೆಗಳಿಂದ ನರಳುತ್ತಿರುವವರಲ್ಲೂ ಹೆಚ್ಚಾಗಿ ಕಂಡುಬರುತ್ತದೆ.
ಒಂದು ವರ್ಷದಿಂದ ಮೂರು ವರ್ಷದ ಮಕ್ಕಳು ಈ ರೋಗಕ್ಕೆ ಮೊದಲ ಆಯ್ಕೆ.
12 ತಿಂಗಳೊಳಗಿನ ಮಕ್ಕಳ ಮೇಲೆ ಈ ರೋಗ ದಾಳಿ ಮಾಡಿದಾಗ ಅವರ ಪ್ರಾಣಕ್ಕೆ ಸಂಚಕಾರ.
ನಾಯಿ ಕೆಮ್ಮಿನಿಂದ ಸಾಯುವವರ ಒಟ್ಟು ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡರೆ ಶೇ.25 ಮಂದಿ ಈ ವಯೋಮಾನದಲ್ಲಿಯೇ ಬರುತ್ತಾರೆ. ಈ ಸಮಸ್ಯೆ ಪ್ರಬುದ್ದರಲ್ಲೂ ಕಾಣಬರುತ್ತದೆ. ಅಪರೂಪಕ್ಕೆ 60 ವರ್ಷದವರು ಹಾಗೂ 80 ವರ್ಷದವರೂ ಈ ರೋಗಕ್ಕೆ ಗುರಿಯಾಗಿರುವ ನಿದರ್ಶನಗಳಿವೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳ ಮೇಲೆ ಇದರ ಒಲವು ಹೆಚ್ಚು.

Facebook Comments

Sri Raghav

Admin