ಪುತ್ರ ರಾಕೇಶ್ ಹೆಸರಲ್ಲಿ ಯಕೃತ್ ಕಸಿಯೋಜನೆ ಜಾರಿಗೆ ಸಿದ್ದರಾಮಯ್ಯ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

Siddu

ಬೆಂಗಳೂರು,ಆ.15- ಇತ್ತೀಚೆಗೆ ನಿಧನರಾದ ತಮ್ಮ ಪುತ್ರ ರಾಕೇಶ್ ಸಿದ್ಛ್ದರಾಮಯ್ಯ ಅವರ ಹೆಸರಿನಲ್ಲಿ ಖಾಸಗಿ ಫೌಂಡೇಶನ್ ಅಥವಾ ಸರ್ಕಾರದ ವತಿಯಿಂದ ಯಕೃತ್ ಕಸಿಯೋಜನೆಯನ್ನು ಜಾರಿಗೊಳಿಸುವ ಸಂಬಂಧ ಗಂಭೀರ ಚಿಂತನೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ಛ್ದರಾಮಯ್ಯ ಹೇಳಿದರು. ನಗರದ ಮೆಜೆಸ್ಟಿಕ್ ಬಳಿ ಇರುವ ಸಂಗೋಳ್ಳಿ ರಾಯಣ್ಣ ಪ್ರತಿಮೆಗೆ 218ನೇ ಜನ್ಮ ದಿನಾಚರಣೆ ಅಂಗವಾಗಿ ಮಾಲಾರ್ಪಣೆ ಮಾಡಿದ ನಂತರ ವಾಟಾಳ್ ನಾಗರಾಜ್ ಅವರ ಮನವಿಗೆ ಪ್ರತಿಕ್ರಿಯೆ ನೀಡಿದರು.  ತಮ್ಮ ಪುತ್ರ ರಾಕೇಶ್ ಅವರ ಸಾವಿನ ಸಂದರ್ಭದಲ್ಲಿ ನಾಡಿನ ಜನತೆ ನಮಗೆ ಧೈರ್ಯ ತುಂಬಿದ್ದÀರು. ನಮ್ಮ ದುಃಖದಲ್ಲಿ ಭಾಗಿಯಾಗಿದ್ದರು. ಇದಕ್ಕಾಗಿ ತುಂಬು ಹೃದಯದ ಕೃತಜ್ಞತೆ ಹೇಳುತ್ತೇನೆ. ವಾಟಾಳ್ ಅವರು ರಾಕೇಶ್ ಹೆಸರಿನಲ್ಲಿ ರಾಜ್ಯ ಸರ್ಕಾರದಿಂದ ಯಕೃತ್ ಕಸಿ ಯೋಜನೆ ಜಾರಿಗೊಳಿಸುವಂತೆ ಸಲಹೆ ನೀಡಿದ್ದಾರೆ.

ಸರ್ಕಾರದಿಂದ ಸಾಧ್ಯವಾಗದೇ ಇದ್ದರೆ ರಾಕೇಶ್ ಫೌಂಡೇಶನ್ ಸ್ಥಾಪಿಸಿ ಅದರಿಂದಲಾದರೂ ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತವಾಗಿ ಯಕೃತ್ ಕಸಿ ಯೋಜನೆಯನ್ನು ಜಾರಿಗೊಳಿಸುವಂತೆ ಹೇಳಿದ್ದಾರೆ. ಅವರ ಸಲಹೆಗಳನ್ನು ಗಂಭೀರವಾಗಿ ಪರಿಶೀಲಿಸಲಾಗುವುದು. ಈ ಯೋಜನೆಯನ್ನು ಯಾವ ಹಂತದಲ್ಲಿ ಜಾರಿಗೊಳಿಸಬೇಕೆಂಬುದರ ಬಗ್ಗೆ ಚರ್ಚೆ ನಡೆಸಿ ನಿರ್ಧರಿಸುವುದಾಗಿ ಹೇಳಿದರು.  ಮುಂದುವರಿದು ಮಾತನಾಡಿದ ಸಿಎಂ, ಮಹದಾಯಿ, ಕಳಸಾಬಂಡೂರಿ ಯೋಜನೆಗಾಗಿ ಹೋರಾಟ ನಡೆಸಿದ ರೈತರ ಮೇಲಿನ ಮೊಕದ್ದಮೆಗಳನ್ನು ದೋಷಾರೋಪಪಟ್ಟಿ ಸಲ್ಲಿಕೆಯಾದ ನಂತರ ಹಿಂಪಡೆಯಲಾಗುವುದು. ಈಗಾಗಲೇ ಇವರ ಬಿಡುಗಡೆಗೆ ರಾಜ್ಯ ಸರ್ಕಾರ ಸಹಕರಿಸಿದೆ. ಜಾಮೀನು ಅರ್ಜಿಗೆ ಯಾವುದೇ ತಕರಾರು ವ್ಯಕ್ತಪಡಿಸದೇ ಇದ್ದುದರಿಂದ 187 ಮಂದಿ ಬಿಡುಗಡೆಯಾಗಿದ್ದಾರೆ. ಯಾವುದೇ ಪ್ರಕರಣಗಳು ತನಿಖೆ ಹಂತದಲ್ಲಿದ್ದಾಗ ಅವುಗಳನ್ನು ಹಿಂಪಡೆಯಲು ಸಾಧ್ಯವಿಲ್ಲ. ಹೀಗಾಗಿ ಪೊಲೀಸರು ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ ನಂತರ ಪ್ರಕರಣಗಳನ್ನು ಹಿಂಪಡೆಯುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಸಂಗೊಳ್ಳಿ ರಾಯಣ್ಣ ಅವರ ಗುಣಗಾನ ಮಾಡಿದ ಮುಖ್ಯಮಂತ್ರಿ ಅವರು, ಬೆಂಗಳೂರಿನ ಮೆಟ್ರೊಗೆ ಸಂಗೊಳ್ಳಿ ರಾಯಣ್ಣ ಅವರ ಹೆಸರನ್ನು ನಾಮಕರಣ ಮಾಡುವುದಾಗಿ ಹೇಳಿದರು.
ಸಂಗೊಳ್ಳಿ ರಾಯಣ್ಣ ದೇಶಕಂಡ ಅಪ್ರತಿಮ ಸ್ವತಂತ್ರ ಸೇನಾನಿ. ಸ್ವಾತಂತ್ರ್ಯ ಲಭಿಸಬೇಕು, ಬ್ರಿಟಿಷರ ಆಡಳಿತದಿಂದ ಮುಕ್ತಿಸಿಗಬೇಕು, ಪ್ರತಿಯೊಬ್ಬರೂ ಸ್ವತಂತ್ರ ಜೀವಿಗಳಾಗಬೇಕೆಂದು ರಾಯಣ್ಣ ಕನಸು ಕಂಡಿದ್ದರು. ಇದಕ್ಕಾಗಿ ಗೊರಿಲ್ಲಾ ಮಾದರಿಯ ಯುದ್ಧ ಸಾರಿದ್ದರು. ಬ್ರಿಟಿಷರು ರಾಯಣ್ಣನನ್ನು ಕಂಡು ಬೆಚ್ಚಿಬಿದ್ದಿದ್ದರು. ಆದರೆ, ನಮ್ಮವರೇ ಕುತಂತ್ರದಿಂದ ರಾಯಣ್ಣನನ್ನು ಹಿಡಿದುಕೊಟ್ಟರು. ಇಲ್ಲದೇ ಹೋಗಿದ್ದರೆ ಎಂದಿಗೂ ಅವರು ಬ್ರಿಟಿಷರಿಗೆ ಶರಣಾಗುತ್ತಿರಲಿಲ್ಲ. ಸ್ವತಂತ್ರಕ್ಕಾಗಿ ಹೋರಾಡಿ ಹುತಾತ್ಮರಾದ ರಾಯಣ್ಣ ನಾಡಿಗೆ ಸ್ಪೂರ್ತಿ ಎಂದು ಹೇಳಿದರು.
ಅವರ ಹೆಸರನ್ನು ಈಗಾಗಲೇ ಬೆಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡಲಾಗಿದೆ. ಮೆಟ್ರೋ ನಿಲ್ದಾಣಕ್ಕೂ ನಾಮಕರಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಅವರು, ರಾಕೇಶ್ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಯಕೃತ್ ಕಸಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿದರು. ಸರ್ಕಾರದ ವತಿಯಿಂದಲೇ ಸಂಗೊಳ್ಳಿ ರಾಯಣ್ಣ ಜನ್ಮ ದಿನಾಚರಣೆ ಆಚರಿಸಬೇಕು ಎಂದು ಅವರು ಮನವಿ ಪತ್ರ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಸ್ವೀಕರಿಸಿದರು. ಮಹದಾಯಿ ಹೋರಾಟಗಾರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಒಂದು ವಾರದೊಳಗಾಗಿ ಹಿಂಪಡೆಯುವಂತೆ ಇದೇ ವೇಳೆ ಸಲಹೆ ನೀಡಿದರು. ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ಕೃಷ್ಣಮೂರ್ತಿ, ಮಾಜಿ ಶಾಸಕ ಕೃಷ್ಣಪ್ಪ, ಮಾಜಿ ಮೇಯರ್ ಹುಚ್ಚಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin