ಪುನಃ ಸಂಪುಟ ಸೇರಿದ ಕೆ.ಜೆ.ಜಾರ್ಜ್ : ಸರಳ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

KJG-1

ಬೆಂಗಳೂರು, ಸೆ.26- ಡಿವೈಎಸ್‍ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದ ಹಿರಿಯ ಮುಖಂಡ ಕೆ.ಜೆ.ಜಾರ್ಜ್ ಇಂದು ಪುನಃ ಸಂಪುಟಕ್ಕೆ ಸೇರ್ಪಡೆಯಾದರು. ಈ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೂರೂವರೆ ವರ್ಷಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟ ಭರ್ತಿಯಾಗಿದೆ.  ರಾಜಭವನದ ಗಾಜಿನ ಅರಮನೆಯಲ್ಲಿ ಬೆಳಗ್ಗೆ 10.15ಕ್ಕೆ ನಡೆದ ಸರಳ ಸಮಾರಂಭದಲ್ಲಿ ಜಾರ್ಜ್‍ಗೆ ರಾಜ್ಯಪಾಲ ವಿ.ಆರ್.ವಾಲಾ ಅವರು ಅಧಿಕಾರ ಗೌಪ್ಯತೆ ಬೋಧಿಸಿದರು. ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಜಾರ್ಜ್‍ಗೆ ಈ ಹಿಂದೆ ಇದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೇ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.

ಕೇವಲ ಐದು ನಿಮಿಷಗಳಲ್ಲಿ ನಡೆದ ಈ ಸರಳ ಸಮಾರಂಭದಲ್ಲಿ ಜಾರ್ಜ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಿ.ಕೆ.ಶಿವಕುಮಾರ್, ರೋಷನ್ ಬೇಗ್, ರಾಮಲಿಂಗಾರೆಡ್ಡಿ, ಡಾ.ಜಿ.ಪರಮೇಶ್ವರ್, ಎಚ್.ಎಸ್.ಮಹದೇವ ಪ್ರಸಾದ್, ತನ್ವೀರ್‍ಸೇಠ್, ಪ್ರಿಯಾಂಕ ಖರ್ಗೆ, ರಮೇಶ್‍ಕುಮಾರ್, ಸಂಸದರಾದ ಕೆ.ಎಚ್.ಮುನಿಯಪ್ಪ, ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಶಾಸಕರಾದ ಮುನಿರತ್ನ, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜು, ವಿಧಾನ ಪರಿಷತ್ ಸದಸ್ಯರಾದ ರಿಜ್ವಾನ್ ಅರ್ಷದ್, ಭೈರತಿ ಸುರೇಶ್ ಸೇರಿದಂತೆ ಅಪಾರ ಸಂಖ್ಯೆಯ ಬೆಂಬಲಿಗರು ಸಾಕ್ಷಿಯಾದರು.

ಕಳೆದ ಜುಲೈ 18ರಂದು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಲುಕಿಕೊಂಡು ಸಚಿವ ಸ್ಥಾನ ಕಳೆದುಕೊಂಡಿದ್ದರು. ಮಡಿಕೇರಿಯ ವಿನಾಯಕ ಲಾಡ್ಜ್‍ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಗಣಪತಿ ತಮ್ಮ ಸಾವಿಗೆ ಹಿಂದಿನ ಗೃಹ ಸಚಿವ ಕೆ.ಜೆ.ಜಾರ್ಜ್, ಲೋಕಾಯುಕ್ತ ಎಡಿಜಿಪಿ ಪ್ರಣವ್ ಮೊಹಾಂತಿ ಹಾಗೂ ಗುಪ್ತಚರ ವಿಭಾಗದ ಎಡಿಜಿಪಿ ಎ.ಎನ್.ಪ್ರಸಾದ್ ಕಾರಣ ಎಂದು ಸ್ಥಳೀಯ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಗಂಭೀರ ಆರೋಪ ಮಾಡಿದ್ದರು. ಇದನ್ನೇ ಅಸ್ತ್ರವನ್ನಾಗಿಟ್ಟುಕೊಂಡಿದ್ದ ಪ್ರತಿಪಕ್ಷಗಳು ಸಚಿವ ಜಾರ್ಜ್ ತಲೆದಂಡಕ್ಕೆ ಪಟ್ಟು ಹಿಡಿದಿದ್ದವು. ಇದೇ ವೇಳೆ ಅಧಿವೇಶನ ನಡೆಯುತ್ತಿದ್ದರಿಂದ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ರಾಜೀನಾಮೆ ನೀಡುವವರೆಗೂ ಕಲಾಪ ನಡೆಸಲು ಅವಕಾಶ ನೀಡಿರಲಿಲ್ಲ.

ಇನ್ನೊಂದೆಡೆ ಎಂ.ಕೆ.ಗಣಪತಿ ಕುಟುಂಬದ ಸದಸ್ಯರು ಮಡಿಕೇರಿಯ ಟೌನ್ ಪೆÇಲೀಸ್ ಠಾಣೆಗೆ ದೂರು ನೀಡಿ ಜಾರ್ಜ್ ಸೇರಿದಂತೆ ಮೂವರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದರು. ಆದರೆ, ಪೊ ಲೀಸರು ಹಿಂದೇಟು ಹಾಕಿದ ಕಾರಣ ಜಿಲ್ಲಾ ನ್ಯಾಯಾಲಯಕ್ಕೆ ದೂರು ನೀಡಲಾಗಿತ್ತು. ದೂರು ಸ್ವೀಕರಿಸಿದ್ದ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಅನ್ನಪೂರ್ಣೇಶ್ವರಿಯವರು ಜಾರ್ಜ್, ಎ.ಎನ್.ಪ್ರಸಾದ್ ಹಾಗೂ ಪ್ರಣವ್ ಮೊಹಾಂತಿ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಪೊ ಲೀಸರಿಗೆ ಸೂಚನೆ ಕೊಟ್ಟಿದ್ದರು. ಅತ್ತ ನ್ಯಾಯಾಲಯ ಎಫ್‍ಐಆರ್ ದಾಖಲಿಸಲು ಆದೇಶ ಹೊರಡಿಸುತ್ತಿದ್ದಂತೆ ಜಾರ್ಜ್ ತಮ್ಮ ಸ್ಥಾನಕ್ಕೆ ವಿಧಿಯಿಲ್ಲದೆ ರಾಜೀನಾಮೆ ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಇತ್ತೀಚೆಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‍ಶೀಟ್) ಸಲ್ಲಿಸಿತ್ತು.

KJG-3

ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್, ಎ.ಎನ್.ಪ್ರಸಾದ್ ಹಾಗೂ ಪ್ರಣವ್ ಮೊಹಾಂತಿ ಕೈವಾಡ ಇಲ್ಲ ಎಂದು ಕ್ಲೀನ್‍ಚಿಟ್ ನೀಡಿತ್ತು.  ಇತ್ತೀಚೆಗೆ ನವದೆಹಲಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಸಂಪುಟದಲ್ಲಿ ಖಾಲಿ ಇರುವ ಒಂದು ಸ್ಥಾನಕ್ಕೆ ಜಾರ್ಜ್ ಅವರನ್ನು ತೆಗೆದುಕೊಳ್ಳುವ ಬಗ್ಗೆ ಪಕ್ಷದ ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್‍ಗಾಂಧಿ ಹಾಗೂ ರಾಜ್ಯ ಉಸ್ತುವಾರಿ ದಿಗ್ವಿಜಯ್‍ಸಿಂಗ್ ಜತೆ ಮಾತುಕತೆ ನಡೆಸಿ ಒಪ್ಪಿಗೆ ಪಡೆದಿದ್ದರು.

ರಾರಾಜಿಸಿದ ಫ್ಲಕ್ಸ್‍ಬೋರ್ಡ್:

ಸಚಿವ ಕೆ.ಜೆ.ಜಾರ್ಜ್ ಇಂದು ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರ ಸಂಭ್ರಮ ಮೇರೆ ಮೀರಿತ್ತು. ರಾಜಭವನದ ಸುತ್ತಮುತ್ತ, ವಿಧಾನಸೌಧದ ಅಕ್ಕಪಕ್ಕದ ರಸ್ತೆಗಳಲ್ಲಿ ಜಾರ್ಜ್ ಅವರ ಆಳೆತ್ತರದ ಕಟೌಟ್‍ಗಳು ರಾರಾಜಿಸುತ್ತಿದ್ದವು. ಮತ್ತೊಂದೆಡೆ ರಾಜಭವನದ ಸಮೀಪ ಅವರ ಕಟೌಟ್‍ಗೆ ಅಭಿಮಾನಿಗಳು ಕ್ಷೀರಾಭಿಷೇಕ ಮಾಡಿದರು.

 

ಮಾಧ್ಯಮದವರಿಗೆ ನಿರಾಕರಣೆ:

ಸಾಮಾನ್ಯವಾಗಿ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಜಭವನಕ್ಕೆ ಮಾಧ್ಯಮದವರನ್ನು ಮೊದಲಿನಿಂದಲೂ ಆಹ್ವಾನಿಸುವ ಸಂಪ್ರದಾಯವಿತ್ತು. ಆದರೆ, ಇದೇ ಮೊದಲ ಬಾರಿಗೆ ಮಾಧ್ಯಮದವರನ್ನು ಹೊರಗಿಟ್ಟು ಕಾರ್ಯಕ್ರಮ ನೆರವೇರಿಸಲಾಯಿತು.  ಮಾಧ್ಯಮದವರಿಗೆ ಮಾಹಿತಿಯ ಅನುಕೂಲಕ್ಕಾಗಿ ರಾಜಭವನದ ಹೊರಭಾಗದಲ್ಲಿ ಎಲ್‍ಇಡಿ ಪರದೆ ಅಳವಡಿಸಲಾಗಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin