‘ಪೂರ್ಣ ಸತ್ಯ’ನ ಸಂಗೀತ ಸವಾರಿ

ಈ ಸುದ್ದಿಯನ್ನು ಶೇರ್ ಮಾಡಿ

poorna

ಬೆಳ್ಳಿ ಪರದೆ ಮೇಲೆ ಗುರುತಿಸಿಕೊಳ್ಳಲು ಬಹಳಷ್ಟು ಶ್ರಮ ಪಡಲೇಬೇಕು. ಅದಕ್ಕೆ ಅನುಗುಣವಾಗಿ ಅದೃಷ್ಟವೂ ಇರಬೇಕು. ಇವೆಲ್ಲವೂ ಒಗ್ಗೂಡಿದಾಗ ಮಾತ್ರ ಯಶಸ್ಸಿನ ದಾರಿ ಕಾಣಲು ಸಾಧ್ಯ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತ ಸುಮಾರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ನಟನಾಗಿ, ಖಳನಟನಾಗಿ ನಟಿಸಿರುವ ನಟ, ಪತ್ರಕರ್ತ ಯತಿರಾಜ್ ಪೂರ್ಣ ಸತ್ಯ ಎಂಬ ಚಿತ್ರವನ್ನು ನಿರ್ಮಿಸಿ ನಿರ್ದೇಶನ ಮಾಡಿದ್ದಾರೆ. ಪೂರ್ಣಸತ್ಯ ಚಿತ್ರದ ಕಥೆ-ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ರಚಿಸಿ ನಿರ್ದೇಶನ ಮಾಡಿದ್ದಾರೆ. ಜತೆಗೆ ಚಿತ್ರದ ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಮೂರು ಪಾತ್ರಗಳು ಕಾಣಿಸಿಕೊಳ್ಳಲಿದ್ದು, ಯತಿರಾಜ್, ಗೌತಮಿ ಗೌಡ ಹಾಗೂ ಎಂ.ಡಿ.ಕೌಶಿಕ್ ಅಭಿನಯಿಸಿದ್ದಾರೆ.

ಸಮಾಗಮ ಕ್ರಿಯೇಷನ್ಸ್ ಬ್ಯಾನರ್‍ನಡಿ ತಯಾರಾಗಿರುವ ಈ ಸಿನಿಮಾ ಹೊಸಥರದ ಕಂಟೆಂಟ್ ಹೊಂದಿರುವ ಚಿತ್ರವಾಗಿದ್ದು, ರೆಗ್ಯುಲರ್ ಸಿನಿಮಾಗಳಿಗಿಂತ ಹೊಸತನದ ಚಿತ್ರಕಥೆ ಇದರಲ್ಲಿದೆ. ಬಿ.ಎಲ್.ಬಾಬು ಚಿತ್ರಕ್ಕೆ ಕ್ಯಾಮೆರಾ ಹಿಡಿದರೆ, ಮಾರುತಿ ಮೀರಜ್‍ಕರ್ ಅವರು ಎರಡು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರಕ್ಕೆ ಮಲೆನಾಡಿನ ತೀರ್ಥಹಳ್ಳಿ, ಸಕಲೇಶಪುರದ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.  ಚಿತ್ರಕ್ಕೆ ಸೆನ್ಸಾರ್‍ನವರು ಯು/ಎ ಪ್ರಮಾಣ ಪತ್ರ ನೀಡಿದ್ದಾರೆ. ಬದುಕಿನಲ್ಲಿ ಜಿಗುಪ್ಸೆಗೊಂಡ ನಾಯಕ ಆತ್ಮಹತ್ಯೆಗೆ ಶರಣಾಗಲು ದೂರದ ಸ್ಥಳಕ್ಕೆ ಹೋಗುತ್ತಾನೆ.

ಅಲ್ಲಿ ಅಪರಿಚಿತ ಗೆಳಯನೊಬ್ಬ ಸಿಕ್ಕಾಗ ಆತನೊಂದಿಗೆ ತನ್ನ ಮನದ ವೇದನೆಯನ್ನು ಹೇಳಿದಾಗ, ಮಿತ್ರನ ಭೋದನೆಯ ಮಾತುಗಳು ನಾಯಕನ ಕಣ್ಣು ತೆರೆಸುತ್ತವೆ. ಪರಿಚಯ, ಪ್ರೇಮ, ಮದುವೆ, ಸರಸ, ವಿರಸ ಇವೆಲ್ಲ ಸನ್ನಿವೇಶಗಳು ಅದ್ಬುತವಾಗಿ ಈ ಚಿತ್ರದಲ್ಲಿ ಮೂಡಿಬಂದಿದೆ. ಆನಂದ್ ಆಡಿಯೋ ಹೊರತಂದಿರುವ ಈ ಚಿತ್ರದ ಹಾಡುಗಳ ಸಿಡಿಯನ್ನು ನಿರ್ಮಾಪಕ ಬೆಂ.ಕೋ.ಶ್ರೀ. ಅನಾವರಣಗೊಳಿಸಿದರು. ನಟ ಯತಿರಾಜ್ ಅವರ ಗೆಳತನವನ್ನು ನೆನಪು ಮಾಡಿಕೊಳ್ಳುತ್ತ ಮಾತನಾಡಿದ ಅವರು, ಮೈಕ್ ಎನ್ನುವುದು ತುಂಬ ಕೆಟ್ಟದ್ದು. ಇದರಿಂದ ಎಷ್ಟೋ ಅನಾಹುತಗಳು ಜರುಗುತ್ತವೆ. ಅದರಂತೆ ನಾನು ಸಹ ಮೈಕ್‍ನಲ್ಲಿ ನೀಡಿದ ಆಶ್ವಾಸನೆಯಂತೆ ಮಂದಾಕಿನಿ ಸಿನಿಮಾ ನಿರ್ಮಾಣ ಮಾಡಿದ್ದೆ. ಅದರ ಪರಿಣಾಮವನ್ನೂ ಕಂಡೆ. ಗೆಳೆಯ ಯತಿರಾಜ್ ಕೂಡ ಮೊದಲು ನನ್ನೊಂದಿಗೆ ಸಿನಿಮಾ ಮಾಡಬೇಕಿತ್ತು. ಪೇಪರ್ ಎಂಬ ಶೀರ್ಷಿಕೆಯನ್ನು ಕೂಡ ಇಟ್ಟಿದ್ದೆವು. ಕಾರಣಾಂತರಗಳಿಂದ ಚಿತ್ರ ಮಾಡಲು ಆಗಲಿಲ್ಲ. ಮುಂದೆ ನೋಡೋಣ. ವಿಧಿ ಯಾವ ರೀತಿ ಕರೆದುಕೊಂಡು ಹೋಗುತ್ತದೆ ಎಂಬುದನ್ನು.

ಒಟ್ಟಿನಲ್ಲಿ ಒಂದು ಉತ್ತಮ ಚಿತ್ರ ಮಾಡಿದ್ದಾರೆ. ಇವರಿಗೆ ಯಶಸ್ಸು ಸಿಗಲಿ ಎಂದು ಶುಭ ಕೋರಿದರು. ಇದೇ ಸಂದರ್ಭದಲ್ಲಿ ನಟ- ನಿರ್ದೇಶಕ ಯತಿರಾಜ್ ಮಾತನಾಡಿ, ನನಗೆ ನನ್ನ ಕುಟುಂಬ ಬೆನ್ನೆಲುಬಾಗಿ ನಿಂತಿದೆ. ಅದೇ ರೀತಿ ನನ್ನ ಚಿತ್ರೋದ್ಯಮದ ಗೆಳೆಯರು ಹಾಗೂ ಆತ್ಮೀಯ ಸ್ನೇಹಿತರ ಸಹಕಾರ ಕೂಡ ನಾನು ಈ ಚಿತ್ರ ನಿರ್ದೇಶನ ಮಾಡಲು ದಾರಿಯಾಯಿತು. ಒಟ್ಟಿನಲ್ಲಿ ನನ್ನ ಎಲ್ಲ ಪತ್ರಿಕಾ ಮಿತ್ರರು ಹಾಗೂ ಸ್ನೇಹಿತರಿಗೆ ನನ್ನ ಚಿತ್ರದ ಧ್ವನಿ ಸುರುಳಿ ಹಾಗೂ ಚಿತ್ರ ನೋಡಲು ಬಂದವರಿಗೆ ನನ್ನ ಧನ್ಯವಾದ ಅರ್ಪಿಸುತ್ತೇನೆ ಎಂದರು. ಹಾಗೆಯೇ ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಿದ ಬೆಂ.ಕೋ.ಶ್ರೀರವರಿಗೆ ಗೌರವ ಡಾಕ್ಟರೇಟ್ ಬಂದಿದ್ದಕ್ಕೆ ಪುಟ್ಟದೊಂದು ಸನ್ಮಾನ ಕೂಡ ವೇದಿಕೆ ಮೇಲೆ ಮಾಡಲಾಯಿತು. ನಂತರ ಮಾಧ್ಯಮದವರಿಗೆ ಚಿತ್ರ ಪ್ರದರ್ಶನವನ್ನು ಕೂಡ ಏರ್ಪಡಿಸಿದ್ದರು.

Facebook Comments

Sri Raghav

Admin