ಪೂರ್ವ ಭಾಗದಿಂದ ಭಾರತದ ಮೇಲೆ ದಾಳಿಗೆ ಐಎಸ್ ಸ್ಕೆಚ್ : ಬಹಿರಂಗವಾಯ್ತು ವಿಧ್ವಂಸಕ ಕುತಂತ್ರ..!

ಈ ಸುದ್ದಿಯನ್ನು ಶೇರ್ ಮಾಡಿ

ISIS01

ಕೋಲ್ಕತಾ, ಜ.3- ಭಾರತದ ಮೇಲೆ ಭಯಾನಕ ದಾಳಿ ನಡೆಸಲು ಸಮಯ ಸಾಧಿಸುತ್ತಿರುವ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕರ ಹೊಸ ವಿಧ್ವಂಸಕ ಕೃತ್ಯ ಕುತಂತ್ರದ ಸ್ಪೋಟಕ ಮಾಹಿತಿ ಬಹಿರಂಗಗೊಂಡಿದೆ. ದೇಶದ ಪೂರ್ವ ಭಾಗದಿಂದ ಆಕ್ರಮಣ ನಡೆಸಲು ಐಎಸ್ ಸಜ್ಜಾಗಿದೆ ಎಂಬ ವರ್ತಮಾನ ಬಾಂಗ್ಲಾದೇಶದ ಬಂಧಿತ ಕುಪ್ರಸಿದ್ಧ ಭಯೋತ್ಪಾದಕ ಮಹಮದ್ ಮೊಸಿಯುದ್ದೀನ್ ಅಲಿಯಾಸ್ ಮುಸಾ ವಿಚಾರಣೆಯಿಂದ ಬೆಳಕಿಗೆ ಬಂದಿದೆ.  ಢಾಕಾದ ಬೇಕರಿ ಮೇಲೆ ದಾಳಿ ನಡೆಸಲು ಕಾರಣವಾದ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ) ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಐಎಸ್ ಉಗ್ರಗಾಮಿಗಳಿಗೆ ನೆರವು ನೀಡುತ್ತಿದೆ ಎಂಬ ಸಂಗತಿ ಸಹ ಬಯಲಾಗಿದೆ.

ಪಶ್ಚಿಮಬಂಗಾಳದ ಬುದ್ರ್ವಾನ್‍ನಲ್ಲಿ ಕಳೆದ ವರ್ಷ ಜುಲೈನಲ್ಲಿ ಜೆಎಂಬಿ ಮುಖಂಡರಲ್ಲಿ ಒಬ್ಬನಾಗಿದ್ದ ಹಾಗೂ ಐಎಸ್ ಉಗ್ರಗಾಮಿ ಸಂಘಟನೆಗೆ ಬೆಂಬಲ ನೀಡುತ್ತಿದ್ದ ಮುಸಾನನ್ನು ಬಂಧಿಸಲಾಗಿತ್ತು. ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅನೇಕ ಸ್ಫೋಟಕ ಮಾಹಿತಿಗಳು ಬೆಳಕಿಗೆ ಬರುತ್ತಿವೆ. ಭಾರತದ ಪೂರ್ವ ಭಾಗದಿಂದ ದೇಶದ ಒಳನುಸುಳಿ ಭಾರೀ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಐಎಸ್ ಉಗ್ರರು ಗಂಭೀರ ಪರಿಶೀಲನೆ ಮತ್ತು ಸಿದ್ಧತೆಯಲ್ಲಿ ತೊಡಗಿದ್ದಾರೆ ಎಂದು ಆತ ಸುಳಿವು ನೀಡಿದ್ದಾನೆ.  ಕೋಲ್ಕತಾದ ಮದರ್ ಹೌಸ್‍ನಲ್ಲಿನ ವಿದೇಶಿಯರು ಮತ್ತು ಶ್ರೀನಗರದ ವಿದೇಶಿ ಪ್ರವಾಸಿಗರ ಮೇಲೆ ದಾಳಿಗಳನ್ನು ನಡೆಸಲು ಸಂಚು ರೂಪಿಸಿದ್ದ ಐಎಸ್ ಭಯೋತ್ಪಾದಕರು ಜೆಎಂಬಿ ನೆರವಿನೊಂದಿಗೆ ದೇಶದ ಪ್ರಮುಖ ಸ್ಥಳಗಳಲ್ಲಿಯೂ ಬುಡಮೇಲು ಕೃತ್ಯಗಳನ್ನು ಎಸಗಲು ಸಂಚು ನಡೆಸಿದ್ದ ಸಂಗತಿಯೂ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಸಿರಿಯಾ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಸಿದ ಭಯೋತ್ಪಾದನೆ ದಾಳಿಗಳ ಮಾದರಿಯಲ್ಲೇ ಭಾರತದಲ್ಲೂ ಆಕ್ರಮಣಕ್ಕೆ ಐಎಸ್ ಉಗ್ರರು ಸಂಚು ರೂಪಿಸಿದ್ದಾರೆ ಎಂದು ಆತ ತಿಳಿಸಿದ್ದಾನೆ.  ಮೊದಲು ಬಾಂಗ್ಲಾದೇಶದ ಮೇಲೆ ಹಿಡಿತ ಸಾಧಿಸಲು ಐಎಸ್ ಉಗ್ರರಿಗೆ ಬೆಂಬಲ ನೀಡಿರುತ್ತಿರುವ ಜೆಎಂಬಿ ನಂತರ ಏಷ್ಯಾದ ಮುಸ್ಲಿಂ ರಾಷ್ಟ್ರಗಳಲ್ಲೂ ಕೇಂದ್ರ ಸ್ಥಾನಗಳನ್ನು ಸ್ಥಾಪಿಸಿ ಹಿಂದು ದೇಶಗಳ ಮೇಲೆ ದಾಳಿ ನಡೆಸುವ ಉದ್ದೇಶ ಹೊಂದಿದೆ ಎಂದು ಇನ್ನೊಂದು ಮೂಲಗಳು ತಿಳಿಸಿವೆ.

ಕರಾವಳಿ ದ್ವೀಪ ಬಳಕೆ :

ಇದೇ ವೇಳೆ, ಭಾರತ ಸಮುದ್ರದಲ್ಲಿನ ನಿರ್ಜನ ದ್ವೀಪಗಳನ್ನು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ತಮ್ಮ ಸುರಕ್ಷಿತ ತಾಣಗಳಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಯು ಎಚ್ಚರಿಕೆ ನೀಡಿದೆ.  ಈ ಬಗ್ಗೆ ಕೇಂದ್ರ ಸರ್ಕಾರ ಮತತು ಭದ್ರತಾ ಪಡೆಗಳಿಗೆ ಎಚ್ಚರಿಕೆ ನೀಡಿರುವ ಸಮಿತಿ, ಭಾರತದ ಮೇಲೆ ಭಯೋತ್ಪಾದಕ ದಾಳಿಗಳನ್ನು ನಡೆಸುವುದಕ್ಕೆ ಲಷ್ಕರ್ ಉಗ್ರರು ಹೊಸ ಮತ್ತು ಅಸಂಪ್ರದಾಯಿಕ ಮಾರ್ಗಗಳನ್ನು ಅನ್ವೇಷಿಸುತ್ತಿದ್ದಾರೆ. ಇದಕ್ಕಾಗಿ ನಿರ್ಜನ ದ್ವೀಪಗಳನ್ನು ತಮ್ಮ ಸುರಕ್ಷಿತ ತಾಣಗಳನ್ನಾಗಿ ಬಳಸಿಕೊಳ್ಳುವ ತಂತ್ರ ರೂಪಿಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ. ಲಷ್ಕರ್ ಉಗ್ರರು ಭಾರತದ ಮೇಲೆ ಕರಾವಳಿ ಪ್ರದೇಶದ ಮೂಲಕ ಭಯೋತ್ಪಾದಕ ದಾಳಿ ನಡೆಸುವ ಸಂಚು ರೂಪಿಸುತ್ತಿದ್ದು, ಜನವಸತಿ ಇಲ್ಲದ ದ್ವೀಪಗಳನ್ನು ತನ್ನ ಕಾರಾಸ್ತಾನವಾಗಿ ಬಳಸಿಕೊಳ್ಳುವ ಸಾಧ್ಯತೆ ಇರುವ ಬಗ್ಗೆ ಗುಪ್ತಚರ ದಳ ಮಾಹಿತಿ ಸಂಗ್ರಹಿಸಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin