ಪೆಟ್ರೋಲ್ ಸುರಿದು ಆಟೋ ಚಾಲಕನ ಕೊಂದಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Jail--02

ಬೆಂಗಳೂರು,ಫೆ.28-ಪದೇಪದೇ ಹಣಕ್ಕಾಗಿ ಪೀಡಿಸುತ್ತಿದ್ದ ಆಟೋ ಚಾಲಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿ ಬಂಧನಕ್ಕೊಳಗಾಗಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಸಿಸಿಎಚ್ ನ್ಯಾಯಾಲಯ ತೀರ್ಪು ನೀಡಿದೆ.
ಎಜಿಎಸ್ ಲೇಔಟ್‍ನ 19ನೇ ಮುಖ್ಯರಸ್ತೆ ನಿವಾಸಿ ಕೇಶವ(34) ಮತ್ತು ರಾಮಚಂದ್ರಪುರದ 6ನೇ ಕ್ರಾಸ್ ನಿವಾಸಿ ದೀನ್ ದಯಾಳ್(46) ಆಟೋ ಚಾಲಕರಾಗಿದ್ದು, ಬನಶಂಕರಿ 3ನೇ ಹಂತದ ಇಟ್ಟಮಡುವಿನ ವಿಬಿಬಿ ಬೇಕರಿ ಎದುರು ಆಟೋ ರಿಕ್ಷಾ ನಿಲ್ದಾಣದಲ್ಲಿ ಆಟೋ ನಿಲ್ಲಿಸಿಕೊಳ್ಳುತ್ತಿದ್ದರು. ಕೇಶವ ತನ್ನ ಆರ್ಥಿಕ ಸಂಕಷ್ಟಕ್ಕಾಗಿ ದೀನದಯಾಳ್ ಬಳಿ ಹಣ ಕೇಳುತ್ತಿದ್ದನು.

ಇದರಿಂದ ಬೇಸತ್ತಿದ್ದ ದೀನ್ ದಯಾಳ್ ಆತನೊಂದಿಗೆ ಜಗಳವಾಡಿದ್ದನು. ಆಗಸ್ಟ್ 21, 2012ರಂದು ಸಂಜೆ 4 ಗಂಟೆ ಸಂದರ್ಭದಲ್ಲಿ ಆಟೋ ನಿಲ್ದಾಣದಲ್ಲಿ ನಿಂತಿದ್ದಾಗ ಜಗಳವಾಗಿದೆ. ಕೇಶವನು ಯಾವಾಗಲೂ ತನ್ನಿಂದ ಹಣ ಪಡೆಯುವುದಕ್ಕಾಗಿ ತೊಂದರೆ ಕೊಡುತ್ತಿದ್ದಾನೆ, ಈತನಿಗೆ ಕೊಲೆ ಮಾಡಬೇಕೆಂದು ನಿರ್ಧರಿಸಿ ಅಂದು 100 ರೂ.ಗೆ ಪೆಟ್ರೋಲ್ ಖರೀದಿ ಮಾಡಿ ಒಂದು ಪ್ಲಾಸ್ಟಿಕ್ ಬಾಟಲ್‍ನಲ್ಲಿ ತುಂಬಿಸಿಕೊಂಡು ಈತನಿದ್ದ ಸ್ಥಳಕ್ಕೆ ಬಂದಿದ್ದನು. ಈ ವೇಳೆ ವಿನಾಕಾರಣ ಕೇಶವನನ್ನು ಉದ್ದೇಶಿಸಿ ಯಾರೋ ತನ್ನ ಆಟೋರಿಕ್ಷಾದ ಇಂಡಿಕೇಟರ್ ಹೊಡೆದು ಹಾಕಿದ್ದಾರೆಂದು ಜಗಳ ತೆಗೆದು ಕೊಲೆ ಮಾಡುವ ಉದ್ದೇಶದಿಂದ ಆಟೋರಿಕ್ಷಾ ನಿಲ್ದಾಣದಿಂದ ಕೇಶವನನ್ನು ಶ್ರೀದೇವಿ ಕಾಂಡಿಮೆಂಟ್ಸ್ ಮುಂಭಾಗಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಕೇಶವನನ್ನು ಕೆಳಕ್ಕೆ ಬೀಳಿಸಿ ಪೆಟ್ರೋಲ್ ಸುರಿದು ಬೆಂಕಿ ಹತ್ತಿಸಿದ್ದನು.

ಇದರಿಂದ ಕೇಶವನಿಗೆ ಸುಟ್ಟುಗಾಯಗಳಾಗಿ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದನು. ಎಎಸ್‍ಐ ವಿಜಯೇಂದ್ರ ಅವರು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಕೇಶವನಿಂದ ವಿಚಾರಣೆ ಮಾಡಿ ವೈದ್ಯರ ಸಮಕ್ಷಮ ಹೇಳಿಕೆಯನ್ನು ಪಡೆದುಕೊಂಡು ಪ್ರಕರಣ ದಾಖಲು ಮಾಡಿದ್ದರು. ಕೇಶವನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆ.23ರವರೆಗೆ ಚಿಕಿತ್ಸೆ ಕೊಡಿಸಿ ನಂತರ ಶಂಕರಪುರದಲ್ಲಿರುವ ಪಾಪುಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ 29ರಂದು ಪಾಪುಲರ್ ಆಸ್ಪತ್ರೆಯಿಂದ ಗಿರಿನಗರದಲ್ಲಿರುವ ಪಲ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕೇಶವನನ್ನು ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು.

ಆದರೆ ಕೇಶವ ಚಿಕಿತ್ಸೆಯಿಂದ ಗುಣಮುಖರಾಗದೆ ಸೆ.18ರಂದು ಮೃತಪಟ್ಟಿದ್ದನು. ಈ ಬಗ್ಗೆ ಕೇಶವನ ಪತ್ನಿ ವೀಣಾ ಆರೋಪಿ ದೀನದಯಾಳ್ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ನ್ಯಾಯಾಲಯದಿಂದ ಆದೇಶ ಪಡೆದುಕೊಂಡು ಇನ್ಸ್‍ಪೆಕ್ಟರ್ ಎಸ್.ಕೆ. ಮಾಲತೀಶ್ ತನಿಖೆ ಕೈಗೊಂಡಿದ್ದರು.  ಸೆ.27ರಂದು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ತಲೆಮರೆಸಿಕೊಂಡಿದ್ದ ಈ ಪ್ರಕರಣದ ಆರೋಪಿ ದೀನ್‍ದಯಾಳ್‍ನನ್ನು ತನಿಖಾ ತಂಡಪತ್ತೆ ಮಾಡಿ ಕರೆತಂದಿದ್ದರು.

ವಿಚಾರಣೆ ವೇಳೆ ಆರೋಪಿಯು ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದನು. ಈ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿದಾರರನ್ನು ವಿಚಾರಣೆ ಮಾಡಿ ಹೇಳಿಕೆಗಳನ್ನು ಪಡೆದುಕೊಂಡು ನ್ಯಾಯಾಲಯಕ್ಕೆ ಇನ್‍ಸ್ಪೆಕ್ಟರ್ ಮಾಲತೀಶ್ ದೋಷಾರೋಪಣ ಪಟ್ಟಿ ಸಲ್ಲಿಸಿದ್ದನು.  ಈ ಪ್ರಕರಣವು ಸಿ.ಸಿ.ಹೆಚ್. 70ನೇ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾದ ಮೇರೆಗೆ ಆರೋಪಿಗೆ ನ್ಯಾಯಾಧೀಶರಾದ ಟಿ.ಪಿ. ರಾಮಲಿಂಗೇಗೌಡ ಜೀವಾವಧಿ ಶಿಕ್ಷೆ ಮತ್ತು 10,000 ರೂ. ದಂಡವನ್ನು ವಿಧಿಸಿರುತ್ತಾರೆ.

Facebook Comments

Sri Raghav

Admin