ಪೊಲೀಸರೇ ಸಂಯಮದಿಂದ ವರ್ತಿಸಿ : ಸಿಎಂ ಸಿದ್ದರಾಮಯ್ಯ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

 

Polcie

ಬೆಂಗಳೂರು, ಆ.17-ಅಮ್ನೆಸ್ಟಿ ಸಂಘಟನೆ ಕಾಶ್ಮೀರಿ ಸಂಘರ್ಷ ಕುರಿತು ನಗರದ ಥಿಯೋಲಾಜಿಕಲ್ ಕಾಲೇಜಿನಲ್ಲಿ ನಡೆಸಿದ ಕಾರ್ಯಾಗಾರದ ಸಂದರ್ಭದಲ್ಲಿ ದೇಶ ವಿರೋಧಿ ಘೋಷಣೆ ಭಾಷಣ, ಸೇನೆ ವಿರುದ್ಧ ಅವಮಾನಕರ ಹೇಳಿಕೆ ಖಂಡಿಸಿ ನೀಡಿರುವ ದೂರಿನ ಬಗ್ಗೆ ಶೀಘ್ರವೇ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಜನರ ಮುಂದಿಡಬೇಕು ಎಂದು ಸೂಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರು ಸಂಯಮದಿಂದ ವರ್ತಿಸಬೇಕೆಂದೂ ಸಲಹೆ ಮಾಡಿದ್ದಾರೆ.  ಇಂದು ತಮ್ಮ ನಿವಾಸದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ಪೊಲೀಸ್ ಆಯುಕ್ತ ಎಂ.ಎನ್.ಮೆಘರಿಕ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಅವರು , ಅಮ್ನೆಸ್ಟಿ ಸಂಘಟನೆ ನಡೆಸಿದ ಕಾರ್ಯಾಗಾರ ನಂತರ ನಡೆದ ಘಟನೆ, ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ವಿವರವಾಗಿ ಮಾಹಿತಿ ಪಡೆದರು.

ಕಾರ್ಯಾಗಾರದ ಸಂದರ್ಭದಲ್ಲಿ ನಡೆದ ಘಟನೆಗಳ ಬಗ್ಗೆ ಸೂಕ್ತ ಮಾಹಿತಿ ಪಡೆದು ತ್ವರಿತಗತಿಯಲ್ಲಿ ತನಿಖೆ ನಡೆಸಿ ವಾಸ್ತವಾಂಶವನ್ನು ಜನರಿಗೆ ತಿಳಿಸಿ. ಹೆಚ್ಚು ಪ್ರತಿಭಟನೆಗಳಿಗೆ ಅವಕಾಶ ಮಾಡಿಕೊಡಬೇಡಿ ಎಂದು ಅವರು ಸಲಹೆ ಮಾಡಿದ್ದಾರೆ.  ಎಬಿವಿಪಿ ನಡೆಸಲು ಉದ್ದೇಶಿಸಿರುವ ಅಸಹಕಾರ ಚಳವಳಿ ಬಗ್ಗೆ ಪೊಲೀಸರು ಎಚ್ಚರಿಕೆಯಿಂದ ಇರಬೇಕು. ಗುಪ್ತಚರ ಇಲಾಖೆ ತೀವ್ರ ನಿಗಾ ವಹಿಸಬೇಕು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅತ್ಯಂತ ಜಾಗರೂಕರಾಗಿ ಕೆಲಸ ಮಾಡಬೇಕು ಮತ್ತು ಪ್ರತಿಭಟನೆ ನಿಯಂತ್ರಿಸುವ ನೆಪದಲ್ಲಿ ಯಾವುದೇ ಹಲ್ಲೆ ಮಾಡಬಾರದು, ಸಂಯಮದಿಂದ ವರ್ತಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.

ಪ್ರಚೋದಾತ್ಮಕ ಕೆಲಸಗಳಿಗೆ ಕುಮ್ಮಕ್ಕು ನೀಡುವ ಕೆಲಸ ಆಗಬಾರದು. ಯಾವುದೇ ನಿರ್ಧಾರಗಳನ್ನು ಕೆಳಹಂತದ ಪೊಲೀಸ್ ಅಧಿಕಾರಿಗಳು ತೆಗೆದುಕೊಳ್ಳಬಾರದು. ಪರಿಸ್ಥಿತಿ ಕೈ ಮೀರುವ ಹಂತ ತಲುಪಿದರೆ ಮೇಲಿನ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಅವರು ಸಲಹೆ ನೀಡಿದ್ದಾರೆ.   ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ನಗರ ಪೊಲೀಸ್ ಆಯುಕ್ತ ಮೆಘರಿಕ್, ಹಿರಿಯ ಪೊಲೀಸ್ ಅಧಿಕಾರಿಗಳು ಕಳೆದ ಶನಿವಾರ ಥಿಯೋಲಾಜಿಕಲ್ ಕಾಲೇಜಿನಲ್ಲಿ ನಡೆದ ಘಟನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟರು.

► Follow us on –  Facebook / Twitter  / Google+

Facebook Comments

Sri Raghav

Admin