‘ಪೊಲೀಸರ ಮೇಲೆ ಹಲ್ಲೆ ಮಾಡುವ ಕ್ರಿಮಿನಲ್ ಗಳಿಗೆ ಗುಂಡೇಟು’ : ಆಯುಕ್ತರ ಖಡಕ್ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

Suneel-Kumar--02

ಬೆಂಗಳೂರು, ಜ.20-ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸುವಂತಹ ಕ್ರಿಮಿನಲ್‍ಗಳ ಮೇಲೆ ಮುಲಾಜಿಲ್ಲದೆ ಗುಂಡು ಹಾರಿಸುವಂತೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‍ಕುಮಾರ್ ಆದೇಶ ನೀಡಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸುವುದು, ಸಂಘರ್ಷಕ್ಕಿಳಿಯುವಂತಹ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ವರದಿಯಾದ ಹಿನ್ನೆಲೆಯಲ್ಲಿ ಇಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಠಾಣಾ ಆಸ್ತಿಯ ರಕ್ಷಣೆಗಾಗಿ ಬಲಪ್ರಯೋಗ ಮಾಡಲು ಪೊಲೀಸರಿಗೆ ಅವಕಾಶವಿದೆ. ಬಲಪ್ರಯೋಗವನ್ನು ಗುಂಡು ಹಾರಿಸುವ ಹಂತಕ್ಕೂ ಉಪಯೋಗಿಸುವಂತೆ ಅವರು ಸೂಚನೆ ನೀಡಿದರು.
ಪೊಲೀಸರಿಗೆ ಬಂದೂಕು ನೀಡಿರುವುದು ಆತ್ಮರಕ್ಷಣೆಗೆ. ಅದನ್ನು ಮುಲಾಜಿಲ್ಲದೆ ಬಳಸಿ. ಕ್ರಿಮಿನಲ್‍ಗಳು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ತೊಂದರೆ ಮಾಡಿದರೆ ಹಂತ ಹಂತವಾಗಿ ಬಲ ಪ್ರಯೋಗ ಮಾಡಿ, ಸಮಯ ಬಂದಾಗ ಆತ್ಮರಕ್ಷಣೆಗಾಗಿ ಗುಂಡು ಕೂಡ ಹಾರಿಸಬಹುದು ಎಂದು ಹೇಳುವ ಮೂಲಕ ಪೊಲೀಸರಿಗೆ ಆಯುಕ್ತರು ನೈತಿಕ ಸ್ಥೈರ್ಯ ತುಂಬಿದರು.

ಇತ್ತೀಚೆಗೆ ಜೀವನ್‍ಭೀಮಾನಗರದಲ್ಲಿ ಕೇರಳ ಮೂಲದ ಯುವಕರು ಕುಡಿದು ಗಲಾಟೆ ಮಾಡುತ್ತಿದ್ದರು. ಅವರನ್ನು ಬಂಧಿಸಲು ಹೋದಾಗ ಪ್ರತಿರೋಧ ವ್ಯಕ್ತಪಡಿಸಿದ ನಾಲ್ವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಅಕ್ರಮವಾಗಿ ಚಾಕು ಇಟ್ಟುಕೊಂಡಿದ್ದಕ್ಕೆ ಶಸ್ತ್ರಾಸ್ತ್ರ ಕಾಯ್ದೆ, ಮಹಿಳಾ ಪಿಎಸ್‍ಐಗಳ ಸಮವಸ್ತ್ರ ಎಳೆದಾಡಿರುವುದು ಸೇರಿದಂತೆ ಹಲವಾರು ಸೆಕ್ಷನ್‍ಗಳಡಿ ಕೇಸು ದಾಖಲಿಸಲಾಗಿದೆ.  ಎಚ್‍ಬಿಆರ್ ಲೇಔಟ್‍ನಲ್ಲಿ ಕಾಂಗೋ ಮಹಿಳೆಯೊಬ್ಬರು ಪೊಲೀಸರ ಸಮವಸ್ತ್ರ ಅರಿದಿರುವುದು, ಕೊಡಿಗೇಹಳ್ಳಿಯಲ್ಲಿ ಪೊಲೀಸರ ಬಂದೂಕು ಕಸಿದಿರುವುದು ಸೇರಿದಂತೆ ಕೆಲವು ಪ್ರಕರಣಗಳು ವರದಿಯಾಗಿವೆ. ಕಾನೂನು ಸುವ್ಯವಸ್ಥೆ ರಕ್ಷಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸುವ ಕ್ರಿಮಿನಲ್‍ಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ಗಸ್ತಿನಲ್ಲಿ ಹೋಗುವ ಪೊಲೀಸರು ಇನ್ನು ಮುಂದೆ ಕಡ್ಡಾಯವಾಗಿ ಬಂದೂಕು ತೆಗೆದುಕೊಂಡು ಹೋಗಬೇಕು. ಸೂಕ್ಷ್ಮ ಪ್ರದೇಶಗಳಿಗೆ ಒಬ್ಬರ ಬದಲಾಗಿ ನಾಲ್ವರು ಗಸ್ತಿಗಾಗಿ ಹೋಗುವಂತೆ ಸೂಚನೆ ನೀಡಲಾಗಿದೆ. ಕುಡಿದು ವಾಹನ ಚಲಾಯಿಸುವವರು ಮತ್ತು ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಟ್ರಾಫಿಕ್ ಪೊಲೀಸರು ಕ್ರಮಕೈಗೊಳ್ಳುವ ವೇಳೆ ಕೆಲವರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಅಂತಹ ಘಟನೆಗಳನ್ನು ವಿಡಿಯೋ ರೆಕಾರ್ಡ್ ಮಾಡಿಕೊಳ್ಳಬೇಕು, ಬಾಡಿ ವಾರೆಂಟ್ ಜಾರಿ ಮiÁಡಬೇಕು. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಬಂಧಿಸುವಂತೆ ಸೂಚನೆ ನೀಡಲಾಗಿದೆ.  ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ 62 ರಿಂದ 72 ಲಕ್ಷಕ್ಕೆ ಏರಿಕೆಯಾಗಿದೆ. ಸಂಚಾರ ನಿಯಮಗಳಡಿ 112 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. ಲೀಲಾಜಾಲವಾಗಿ ಬದುಕಬೇಕೆಂಬುವವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸುವುದು ಸಾಮಾನ್ಯ. ಆದರೆ ನಿಗ್ರಹಿಸುವ ಶಕ್ತಿ ಪೊಲೀಸ್ ಇಲಾಖೆಗೆ ಇದೆ ಎಂದು ಹೇಳಿದರು.
ಇತ್ತೀಚಿಗೆ ನಡೆದಿರುವ ಘಟನೆಗಳಲ್ಲೂ ರೌಡಿಗಳು ಭಾಗಿಯಾಗಿಲ್ಲ. ಎಲ್ಲರೂ ಮೊದಲ ಬಾರಿ ಅಪರಾಧ ಮಾಡಿರುವವರು. ಎಚ್‍ಬಿಆರ್ ಲೇಔಟ್ ಘಟನೆಯಲ್ಲಿ ಸಾಫ್ಟ್‍ವೇರ್ ಇಂಜಿನಿಯರ್‍ಗಳಿದ್ದಾರೆ. ಜೀವನ್‍ಭೀಮಾನಗರ ಘಟನೆಯಲ್ಲಿ ಕೇರಳದ ಮೂಲದವರಿದ್ದಾರೆ.

ತಡರಾತ್ರಿ ಒಂದು ಘಂಟೆಯವರೆಗೂ ಬಾರ್ ಓಪನ್ ಮಾಡಲು ಅವಕಾಶ ನೀಡಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆಯೇ ಇಲ್ಲವೇ ಎಂಬುದನ್ನೂ ಕೂಡ ಪರಿಶೀಲಿಸಲಾಗುತ್ತಿದೆ. ನಿಯಮಾನುಸಾರ ಒಂದು ಘಂಟೆ ನಂತರ ಯಾವುದೇ ಬಾರ್ ಓಪನ್ ಇದ್ದರೆ ಪೊಲೀಸರು ಮುಲಾಜಿಲ್ಲದೆ ಕ್ರಮ ಜರುಗಿಸಿದ್ದಾರೆ. ಅಂತಹ ಬಾರ್‍ಗಳನ್ನು ಮುಚ್ಚಿಸುವ ಅಧಿಕಾರವನ್ನು ಅಬಕಾರಿ ಕಾಯ್ದೆಯಲ್ಲಿ ಪೊಲೀಸರಿಗೆ ನೀಡಲಾಗಿದೆ. ಈ ಅಧಿಕಾರ ಬಳಸಿಕೊಂಡು ಈಗಾಗಲೇ 20ಕ್ಕೂ ಹೆಚ್ಚು ಬಾರ್‍ಗಳನ್ನು 10 ದಿನಗಳಿಂದ ಒಂದು ತಿಂಗಳವರೆಗೆ ಮುಚ್ಚಿಸಲಾಗಿದೆ. ಜೊತೆಗೆ ದಂಡ ವಿಧಿಸಲಾಗುತ್ತಿದೆ ಎಂದು ಆಯುಕ್ತರು ಹೇಳಿದರು.
ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಉರಿಯುತ್ತಿರುವ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ವೈಟ್‍ಫೀಲ್ಡ್ ಡಿಸಿಪಿ ಅವರಿಗೆ ಸೂಚಿಸಲಾಗಿದ್ದು, ವರದಿ ಬಂದ ನಂತರ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಗೂ ಮುನ್ನ ಆಯುಕ್ತರು ನಗರದ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

Facebook Comments

Sri Raghav

Admin