ಪೊಲೀಸರ ವೇತನ ಪರಿಷ್ಕರಣೆ ಕುರಿತು ವಿಧಾನಸಭೆಯಲ್ಲಿ ಸಿದ್ದು-ಶೆಟ್ಟರ್ ನಡುವೆ ಮಾತಿನ ಚಕಮಕಿ

ಈ ಸುದ್ದಿಯನ್ನು ಶೇರ್ ಮಾಡಿ

Session

ಬೆಳಗಾವಿ, ನ.29- ಪೊಲೀಸರ ವೇತನ ಪರಿಷ್ಕರಣೆಗೆ ಸಂಬಂಧಪಟ್ಟಂತೆ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರತಿ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ನಡುವೆ ಮಾತಿನ ಚಕಮಕಿಯಾದ ಪ್ರಸಂಗ ನಡೆಯಿತು. ಪ್ರಶ್ನೋತ್ತರ ವೇಳೆಯಲ್ಲ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ, ಪೊಲೀಸರ ವೇತನ ಪರಿಷ್ಕರಣೆ ಕುರಿತು ಕೇಳಿದ ಪ್ರಶ್ನೆಗೆ ಸಚಿವ ಪರಮೇಶ್ವರ್ ಸುದೀರ್ಘ ಉತ್ತರ ನೀಡಿದರು. 40 ವರ್ಷಗಳಿಂದ ಪೊಲೀಸರ ವೇತನ ಪರಿಷ್ಕರಣೆ ಮತ್ತು ಅವರ ಕಷ್ಟ-ಸುಖಗಳ ಬಗ್ಗೆ ಯಾರೂ ಗಮನ ಹರಿಸಲಿಲ್ಲ. ನಮ್ಮ ಸರ್ಕಾರ ಗಮನ ಹರಿಸುತ್ತಿದ್ದಂತೆ ಎಲ್ಲರೂ ಪ್ರಶ್ನೆ ಕೇಳಲು ಆರಂಭಿಸಿದ್ದಾರೆ ಎಂದು ತಿರುಗೇಟು ನೀಡಿದರು.

ಸಾರಿಗೆ , ಸಮವಸ್ತ್ರ ಹಾಗೂ ಅಪಾಯಕಾರಿ ಕೆಲಸಗಳ ಭತ್ಯೆಗಳು ಸೇರಿದಂತೆ ಎರಡು ಸಾವಿರ ರೂ. ಹೆಚ್ಚುವರಿ ಭತ್ಯೆ ನೀಡಲು ನಿರ್ಧಾರತ ತೆಗೆದುಕೊಳ್ಳಲಾಗಿದ್ದು, ಡಿಸೆಂಬರ್ 1ರಿಂದ ಜಾರಿಗೆ ಬರುತ್ತಿದೆ. ರಾಘವೇಂದ್ರ ಔರಾದ್ಕರ್ ಸಮಿತಿಯ ವರದಿಯನ್ನು ಮುಂದಿನ ವರ್ಷ ರಚಿಸುವ ವೇತನ ಪರಿಷ್ಕರಣೆ ಸಮಿತಿಗೆ ಒಪ್ಪಿಸಿ ನಂತರ ಪೊಲೀಸರ ವೇತನವನ್ನು ಪರಿಷ್ಕರಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್, ಸಿ.ಟಿ.ರವಿ. ವೈ.ಎಸ್.ವಿದತ್ತ ಅವರು ಮಾತನಾಡಿ, ವೇತನ ಸಮಿತಿಯೇ ಪೊಲೀಸರ ವೇತನ ಪರಿಷ್ಕರಿಸುವುದಾದರೆ ರಾಘವೇಂದ್ರ ಔರಾದ್ಕರ್ ಸಮಿತಿಯ ಔಚಿತ್ಯವಾದರೂ ಏನೆಂದು ಪ್ರಶ್ನಿಸಿದರು.

ಕೂಡಲೇ ಪೊಲೀಸರಿಗೆ ಸರ್ಕಾರ ಶೇ.30ರಷ್ಟು ವೇತನ ಹೆಚ್ಚಿಸಬೇಕು. ಬೆಟ್ಟದಷ್ಟು ಆಸೆ ತೋರಿಸಿ 2ಸಾವಿರ ರೂ. ಮಾತ್ರ ಭತ್ಯೆ ನೀಡಲಾಗುತ್ತಿದೆ. ಇದು ಸರಿಯಲ್ಲ ಎಂದರು. ಶಾಸಕ ಪಿ.ರಾಜೀವ್ ಮಾತನಾಡಿ, ರಾಘವೇಂದ್ರ ಔರಾದ್ಕರ್ ಸಮಿತಿ ವರದಿ ನಂತರ ಪೊಲೀಸರ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಈ ಮೊದಲು 15 ಕೆಜಿ ಅಕ್ಕಿ, 3 ಕೆಜಿ ಗೋಧಿ ಸೇರಿ 700ರೂ. ಬೆಲೆಯ ಪಡಿತರ ನೀಡಲಾಗುತ್ತಿತ್ತು. ಅದನ್ನು ನಿಲ್ಲಿಸಿ 400ರೂ. ಹಣ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಾರದ ರಜೆಯಲ್ಲೂ ಕೆಲಸ ಮಾಡುವ ಸಿಬ್ಬಂದಿಗಳಿಗೆ 200ರೂ. ವೇತನ ನೀಡಲಾಗುತ್ತಿತ್ತು. ಈಗ ಕಡ್ಡಾಯವಾಗಿ ವಾರದ ರಜೆ ನೀಡಬೇಕೆಂದು ಆದೇಶ ಮಾಡಿ 200ರೂ. ವೇತನವನ್ನು ರದ್ದುಗೊಳಿಸಲಾಗಿದೆ. ಸಿಬ್ಬಂದಿಗಳ ಕೊರತೆಯಿಂದಾಗಿ ಹಿರಿಯ ಅಧಿಕಾರಿಗಳು ಹಾಗೂ ಕೆಳ ಹಂತದ ಸಿಬ್ಬಂದಿಗಳಿಗೆ ವಾರದ ರಜೆ ನೀಡುತ್ತಿಲ್ಲ. ಇತ್ತ ವೇತನವೂ ಇಲ್ಲ. ರಜೆಯೂ ಇಲ್ಲ ಎಂಬಂತಾಗಿದೆ. ಸರ್ಕಾರ ಭತ್ಯೆಯನ್ನು 2ಸಾವಿರ ರೂ.ಗಳ ಬದಲಾಗಿ 10ಸಾವಿರ ರೂ.ಗಳಿಗೆ ಹೆಚ್ಚಿಸಬೇಕೆಂದ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದತ್ತ ಮತ್ತು ಶೆಟ್ಟರ್ ಮಧ್ಯಪ್ರವೇಶಿಸಿ, ಸಂಘಟಿತ ವಲಯಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರತಿಭಟನೆ ಮಾಡುತ್ತಾರೆ. ಆದರೆ, ಪೊಲೀಸರಿಗೆ ಪ್ರತಿಭಟನೆ ಮಾಡುವ ಅಧಿಕಾರ ಇಲ್ಲ. ಅವರದು ಮೂಖ ರೋಧನೆಯಾಗಿದೆ. ಹೊರಗಡೆ ನಮ್ಮನ್ನು ಭೇಟಿ ಮಾಡಿ ನಮ್ಮ ಬಗ್ಗೆ ಶಾಸನ ಸಭೆಯಲ್ಲಿ ಮಾತನಾಡಿ ಎಂದು ಅಳಲು ತೋಡಿಕೊಳ್ಳುತ್ತಾರೆ ಎಂದರು.

ಇದಕ್ಕೆ ಸ್ವಯಂ ಪ್ರೇರಿತರಾಗಿ ಎದ್ದು ನಿಂತು ಉತ್ತರಿಸಿದ ಮುಖ್ಯಮಂತ್ರಿಗಳು, ಪೊಲೀಸರ ಬಗ್ಗೆ ನಮಗೆ ಅನುಕಂಪವಿದೆ. ಜೀವದ ಹಂಗು ತೊರೆದು ಅವರು ಮಾಡುವ ಕಷ್ಟದ ಕೆಲಸಗಳ ಬಗ್ಗೆ ನಮಗೆ ಅರಿವಿದೆ. ಮುಂದಿನ ಮಾರ್ಚ್‍ನಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನದ ಬಗ್ಗೆ ರಚಿಸಲಾಗುವ ವೇತನ ಆಯೋಗಕ್ಕೆ ಔರಾದ್ಕರ್ ವರದಿಯೂ ನೀಡಿ ವೇತನ ಪರಿಷ್ಕರಣೆ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಹಿಂದೆ ಯಾರೂ ಪೊಲೀಸರ ವೇತನ ಪರಿಷ್ಕರಣೆಗೆ ಕ್ರಮ ಕೈಗೊಂಡಿರಲಿಲ್ಲ. ಶೆಟ್ಟರ್ ಕೂಡ ಸಿಎಂ ಆಗಿದ್ದರು. ಅವರ ಕಾಲದಲ್ಲೂ ಪೊಲೀಸರ ಸಮಸ್ಯೆ ಬಗ್ಗೆ ಗಮನ ಹರಿಸಲಿಲ್ಲ. ಶೆಟ್ಟರ್ ಅವರಿಗೆ ಪೊಲೀಸರ ಸಮಸ್ಯೆಗಳ ಬಗ್ಗೆ ಅರಿವಿರಲಿಲ್ಲವೆ ಎಂದು ನೇರವಾಗಿ ಪ್ರಶ್ನಿಸಿದರು. ಇದರಿಂದ ಕೆಲ ಕಾಲ ಪ್ರತಿಪಕ್ಷದ ನಾಯಕರು ಮತ್ತು ಮುಖ್ಯಮಂತ್ರಿ ನಡುವೆ ಮಾತಿನ ಚಕಮಕಿ ನಡೆಯಿತು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin