ಪೊಲೀಸ್ ಮಹಾ ಸಂಘದ ಅಧ್ಯಕ್ಷ ಶಶಿಧರ್ ಗೆ ಜಾಮೀನು ಮಂಜೂರು

ಈ ಸುದ್ದಿಯನ್ನು ಶೇರ್ ಮಾಡಿ

S-Shashidhar

ಬೆಂಗಳೂರು, ಆ.25- ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಜೂ.4ರಂದು ಪೊಲೀಸರ ಪ್ರತಿಭಟನೆಗೆ ಕರೆ ನೀಡಿ ರಾಜದ್ರೋಹದ ಆರೋಪದಡಿ ಬಂಧಿತರಾಗಿದ್ದ ಶಶಿಧರ್ ಅವರಿಗೆ ಹೈಕೋರ್ಟ್ ಏಕ ಸದಸ್ಯ ಪೀಠ ಷರತ್ತುಬದ್ಧ ಜಾಮೀನು ನೀಡಿದೆ. ಪೊಲೀಸ್ ಮುಷ್ಕರಕ್ಕೆ ಕರೆ ನೀಡಬಾರದು, ಪೊಲೀಸರೊಂದಿಗೆ ಸಭೆ ನಡೆಸಬಾರದು, ಸಾಕ್ಷ್ಯನಾಶಕ್ಕೆ ಯತ್ನಿಸಬಾರದು, 50 ಸಾವಿರ ರೂ. ಬಾಂಡ್ ಮತ್ತು ಇಬ್ಬರು ವ್ಯಕ್ತಿಗಳ ಜಾಮೀನು ನೀಡಬೇಕೆಂದು ಸೂಚಿಸಿ ಜಾಮೀನನ್ನು ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಾಧೀಶರಾದ ಆನಂದ್ ಭೈರಾರೆಡ್ಡಿಯವರು ಮಂಜೂರು ಮಾಡಿದ್ದಾರೆ.  ಜೂ.4ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೊಲೀಸರ ಸಾಮೂಹಿಕ ರಜೆ ಮೂಲಕ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಶ್ರೀಧರ್ ಅವರು ಈ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಸರ್ಕಾರ ಈ ಪ್ರತಿಭಟನೆಯನ್ನು ಹತ್ತಿಕ್ಕಿತ್ತು. ಈ ಪ್ರತಿಭಟನೆಗೆ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ಶಶಿಧರ್ ಅವರನ್ನು ಯಲಹಂಕದ ಅವರ ನಿವಾಸದಲ್ಲಿ ಬಂಧಿಸಲಾಗಿತ್ತು. ಯಲಹಂಕ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಸುಮಾರು 84 ದಿನಗಳಿಂದ ಅವರು ಜೈಲಿನಲ್ಲಿದ್ದರು. ಅವರ ಜಾಮೀನನ್ನು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.  ಪೊಲೀಸರ ಪ್ರತಿಭಟನೆ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನ ಮಾಡಿದ್ದಾರೆ ಎಂದು ಸರ್ಕಾರಿ ವಕೀಲರಾದ ಪೊನ್ನಣ್ಣ ವಾದ ಮಂಡಿಸಿದ್ದರು. ಆರೋಪಿ ಪರ ಅಶೋಕ್ ಹಾರ್ನಿಳ್ಳಿ ವಾದ ಮಂಡಿಸಿದ್ದರು. ವಾದ-ಪ್ರತಿಪಾದ ಆಲಿಸಿದ ನ್ಯಾಯಾಲಯ ಹಲವು ಷರತ್ತುಗಳನ್ನು ವಿಧಿಸಿ ಶಶಿಧರ್ ಅವರಿಗೆ ಜಾಮೀನು ಮಂಜೂರು ಮಾಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin