ಪೊಲೀಸ್ ಮೇಲೆ ಹಲ್ಲೆ ಮಾಡಿದ್ದ ರೌಡಿ ಮೇಲೆ ಸಿಸಿಬಿ ಪೊಲೀಸರ ಚೇಸಿಂಗ್, ಫೈರಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Soladevanahalli

ಬೆಂಗಳೂರು, ಅ.21-ಹೆಡ್‍ಕಾನ್ಸ್‍ಸ್ಟೆಬಲ್ ಮೇಲೆ ಲಾಂಗ್‍ನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಇಂದಿರಾ ನಗರದ ಕುಖ್ಯಾತ ರೌಡಿಯನ್ನು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿಯುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ಗುಂಡು ಬಲಗಾಲಿಗೆ ತಾಗಿ ಗಾಯಗೊಂಡಿರುವ ರೌಡಿ ರಾಜಾದೊರೈನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ರೌಡಿ ಹಲ್ಲೆಯಿಂದ ಗಾಯಗೊಂಡಿದ್ದ ಹೆಡ್‍ಕಾನ್ಸ್‍ಸ್ಟೆಬಲ್ ನರಸಿಂಹಮೂರ್ತಿಗೆ ಚಿಕಿತ್ಸೆ ಕೊಡಿಸಲಾಗಿದೆ.

ಕೊಲೆ ಯತ್ನ ಸೇರಿದಂತೆ 18ಕ್ಕೂ ಹೆಚ್ಚು ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ರೌಡಿ ರಾಜಾದೊರೈ ಬಂಧನಕ್ಕೆ ಸಿಸಿಬಿ ಪೊಲೀಸರು ಜಾಲ ಬೀಸಿದ್ದರು. ಇಂದು ಮುಂಜಾನೆ ರಾಜಾದೊರೈ ತುಮಕೂರು ರಸ್ತೆಯ 8ನೆ ಮೈಲಿ ಸಮೀಪ  ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ಸ್‍ಪೆಕ್ಟರ್ ಪ್ರಕಾಶ್‍ರಥೋಡ್ ನೇತೃತ್ವದ ಪೊಲೀಸ್ ತಂಡ ರೌಡಿ ಬಂಧನಕ್ಕೆ ಮುಂದಾಯಿತು. ಈ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡ ರಾಜಾದೊರೈ ಬೈಕ್‍ನಲ್ಲಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಜೀಪ್‍ನಲ್ಲಿ ಸಿನಿಮೀಯ ರೀತಿಯಲ್ಲಿ ಹಿಂಬಾಲಿಸಿ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಸಾಸಿವೆಘಟ್ಟ ರಸ್ತೆ ಬಳಿಯ ಆಚಾರ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಸಮೀಪ ಆತನ ಬೈಕ್‍ಗೆ ಜೀಪ್‍ನಲ್ಲಿ ಡಿಕ್ಕಿ ಹೊಡೆದರು.

ಬೈಕ್‍ನಿಂದ ಕೆಳಗೆ ಬಿದ್ದ ರಾಜಾದೊರೈ ಪರಾರಿಯಾಗಲು ಯತ್ನಿಸಿದಾಗ ಪ್ರಕಾಶ್ ರಥೋಡ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ  ಸೂಚಿಸಿದರು. ಆದರೂ ರೌಡಿ ಓಡಲೆತ್ನಿಸಿದಾಗ ಹೆಡ್‍ಕಾನ್ಸ್‍ಸ್ಟೆಬಲ್ ನರಸಿಂಹಮೂರ್ತಿ ಹಿಡಿಯಲು ಮುಂದಾದರು. ಈ ವೇಳೆ ತನ್ನ ಬಳಿಯಿದ್ದ ಲಾಂಗ್‍ನಿಂದ ನರಸಿಂಹಮೂರ್ತಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಇನ್ಸ್‍ಪೆಕ್ಟರ್ ರಥೋಡ್ ರೌಡಿಯ ಬಲಗಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದರು. ಗಾಯಗೊಂಡಿರುವ ರೌಡಿ ರಾಜಾದೊರೈನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ವಿರುದ್ಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Facebook Comments

Sri Raghav

Admin