ಪೊಲೀಸ್ ಸಹಾಯವಾಣಿಗೆ ಇಂಗ್ಲೆಂಡ್ ಮಾದರಿಯ ತಂತ್ರಜ್ಞಾನ : ನಿರ್ಗಮಿತ ಗೃಹ ಸಚಿವ ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

Parameshwar--01

ಬೆಂಗಳೂರು, ಜೂ.1- ತುರ್ತು ಸಂದರ್ಭಗಳಲ್ಲಿ ತಕ್ಷಣ ಪ್ರತಿಕ್ರಿಯಿಸಲು ಅನುಕೂಲವಾಗುವಂತೆ 100 ಸಂಖ್ಯೆಯ ಸಹಾಯವಾಣಿಗೆ ಇಂಗ್ಲೆಂಡ್ ಮಾದರಿಯ ತಂತ್ರಜ್ಞಾನ ಅಳವಡಿಸಲಾಗಿದೆ. ಒಂದು ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಲಿಸಲಿದ್ದಾರೆ ಎಂದು ನಿರ್ಗಮಿತ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.  ವಿಕಾಸಸೌಧದಲ್ಲಿ ಗೃಹ ಸಚಿವರಾಗಿ ಕೊನೆಯ ಬಾರಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವರ್ಷ 7 ತಿಂಗಳಲ್ಲಿ ತಾವು ಮಾಡಿದ ಸಾಧನೆಗಳನ್ನು ವಿವರಿಸಿದರು.ಜರ್ಮನಿ ಹಾಗೂ ಇಂಗ್ಲೆಂಡ್‍ನಲ್ಲಿ ಪ್ರವಾಸ ಕೈಗೊಂಡು ಅಲ್ಲಿನ ತಂತ್ರಜ್ಞಾನವನ್ನು ನಮ್ಮಲ್ಲೂ ಜಾರಿ ಮಾಡುವ ಪ್ರಯತ್ನ ಮಾಡಿದ್ದೇನೆ. ಇಂಗ್ಲೆಂಡ್‍ನಲ್ಲಿರುವ 999 ಮಾದರಿಯಲ್ಲಿ ನಮ್ಮಲ್ಲಿನ 100 ಸಹಾಯವಾಣಿಯನ್ನು ಚುರುಕುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.  ತೊಂದರೆಯಲ್ಲಿರುವವರು ಕರೆ ಮಾಡಿದರೆ 15 ಸೆಕೆಂಡ್‍ನಲ್ಲಿ ಅವರಿಗೆ ಪ್ರತಿಕ್ರಿಯಿಸಬೇಕು. 15 ನಿಮಿಷದಲ್ಲಿ ಕರೆ ಮಾಡಿದವರು ತಿಳಿಸಿದ ಸ್ಥಳಕ್ಕೆ ತಲುಪುವಂತಹ ವ್ಯವಸ್ಥೆ ಮಾಡಲಾಗಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ವಾರ ಉದ್ಘಾಟಿಸಲಿದ್ದಾರೆ ಎಂದರು.

23 ಸಾವಿರ ಪೊಲೀಸ್ ಸಿಬ್ಬಂದಿ ನೇಮಕಕ್ಕೆ ಅನುಮತಿ ನೀಡಲಾಗಿದೆ. 12 ಸಾವಿರ ಪಪೊಲೀಸರಿಗೆ ಬಡ್ತಿ ನೀಡಲಾಗಿದೆ. ಎರಡು ಸಾವಿರ ರೂ. ಭತ್ಯೆ ಹೆಚ್ಚಿಸಲಾಗಿದೆ. ವೇತನ ಪರಿಷ್ಕರಣೆಗೆ ಸಮಿತಿ ರಚಿಸಿ ಸಮಗ್ರ ವರದಿ ನೀಡಲಾಗಿದೆ. ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯ ಜತೆ ಪೊಲೀಸರ ವೇತನವೂ ಹೆಚ್ಚಳವಾಗುವ ವಿಶ್ವಾಸವಿದೆ. ಪೊಲೀಸರಿಗೆ 11 ಮನೆಗಳನ್ನು ನಿರ್ಮಿಸುವ ಪೊಲೀಸ್ ಗೃಹ ಯೋಜನೆಯಡಿ 5 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಇನ್ನು 4 ಸಾವಿರ ಮನೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಶೇ.4ರಷ್ಟಿರುವ ವಸತಿ ಸೌಲಭ್ಯವನ್ನು ಶೇ.9ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಇಲಾಖೆಗೆ ಒಂದು ಸಾವಿರಕ್ಕೂ ಹೆಚ್ಚು ವಾಹನ ಖರೀದಿಸಿ ನೀಡಲಾಗಿದೆ. ಅದರಲ್ಲಿ 140 ಹೈವೆ ಪೆಟ್ರೋಲಿಂಗ್ ವಾಹನಗಳಿವೆ ಎಂದು ವಿವರಿಸಿದರು.ಕಲ್ಬುರ್ಗಿ ಹತ್ಯೆ ಪ್ರಕರಣ ಕೈ ಬಿಟ್ಟಿಲ್ಲ:

ಸಾಹಿತಿ ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣದಲ್ಲಿ ಯಾವುದೇ ಸಾಕ್ಷಾಧಾರಗಳು ಸಿಕ್ಕಿಲ್ಲ. ಈವರೆಗೂ ಯಾವ ಪ್ರಕರಣದಲ್ಲೂ ನಡೆಸದೆ ಇರುವಷ್ಟು ಮಾವನ ಹುಡುಕಾಟವನ್ನು ಕಲ್ಬುರ್ಗಿ ಪ್ರಕರಣದಲ್ಲಿ ಮಾಡಲಾಗಿದೆ. ಪನ್ಸಾರೆ ನರೇಂದ್ರ ದಾಬೋಳ್ಕರ್ ಹತ್ಯೆಗೂ ಕಲ್ಬುರ್ಗಿ ಹತ್ಯೆಗೂ ಸಾಮ್ಯತೆ ಇದೆ. ಈ ಮೂರು ಪ್ರಕರಣಗಳಲ್ಲಿ ಹತ್ಯೆಗೆ ಬಳಸಿರುವ ಗುಂಡಿನಲ್ಲಿ ಒಂದೇ ರೀತಿಯ ಮಾರ್ಕ್ ಇದೆ. ಹೆಚ್ಚಿನ ಪರಿಶೀಲನೆಗೆ ಸ್ಕಾಟ್‍ಲ್ಯಾಂಡ್‍ಗೆ ಕಳುಹಿಸಲಾಗಿದೆ. ಇನ್ನು ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲವನ್ನೂ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದರು.  ರಾಜ್ಯದಲ್ಲಿ ರಾಜಕೀಯ ಹತ್ಯೆಗಳು ಹೆಚ್ಚಾಗಿವೆ ಎಂಬ ಆರೋಪವನ್ನು ತಳ್ಳಿ ಹಾಕಿದ ಪರಮೇಶ್ವರ್, ಕಲ್ಬುರ್ಗಿ ಪ್ರಕರಣ ಒಂದು ಬಿಟ್ಟು ಎಲ್ಲ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin