ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ ಪಿಯು ವಿದ್ಯಾರ್ಥಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

 

tumkur

ತುಮಕೂರು, ನ.16- ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ ದ್ವಿತೀಯ ಪಿಯುಸಿ ವಿದ್ಯಾರ್ಥಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.ಮಧು (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ತನ್ನ ಭಾವ ಮಹೇಶ್ ಮತ್ತು ಅಕ್ಕನ ಜತೆ ವಾಸವಾಗಿದ್ದನು. ನಗರದ ಹೊರಭಾಗದಲ್ಲಿರುವ ಸರ್ವೋದಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು, ಕಳೆದ ಸೋಮವಾರ ಅಕ್ಕನ ಮನೆಯಲ್ಲಿ ನಡೆದ ಸಮಾರಂಭಕ್ಕೆ ತಂದೆ-ತಾಯಿ ಬೆಂಗಳೂರಿನಿಂದ ಬಂದಿದ್ದರು. ಈ ವೇಳೆ ತಂದೆ-ತಾಯಿ ಟೆಸ್ಟ್‍ನಲ್ಲಿ ಕಡಿಮೆ ಅಂಕ ತೆಗೆದಿದ್ದೀಯ, ಯಾವಾಗಲೂ ಮೊಬೈಲ್‍ನಲ್ಲಿ ಚಾಟಿಂಗ್ ಮಾಡುತ್ತಿರುತ್ತೀಯ ಓದುವ ಕಡೆ ಗಮನ ಕೊಡು. ಈ ಬಾರಿ ನೀನು ಸೆಕೆಂಡ್ ಪಿಯುಸಿ ಎಂದು ಬುದ್ಧಿಮಾತು ಹೇಳಿದ್ದರು.

ಇದನ್ನೇ ಮನದಲ್ಲಿಟ್ಟುಕೊಂಡಿದ್ದ ಮಧು ನಿನ್ನೆ ಬೆಳಗ್ಗೆ ತನ್ನ ತಂದೆ-ತಾಯಿಯನ್ನು ಬೆಂಗಳೂರಿಗೆ ಬಸ್ ಹತ್ತಿಸಿ ಮನೆಗೆ ಹಿಂದಿರುಗಿದ್ದಾನೆ. ಅಕ್ಕನಿಗೆ ಕಟಿಂಗ್ ಮಾಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಹೊರಟಿದ್ದಾನೆ. ಆದರೆ, ಸಂಜೆಯಾದರೂ ಮನೆಗೆ ಬಾರದೆ ಇರುವುದರಿಂದ ಭಯಗೊಂಡ ಅಕ್ಕ-ಭಾವ ಜಯನಗರ ಪೋಲೀಸ್ ಠಾಣೆಗೆ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ್ದಾರೆ.ಇಂದು ಬೆಳಗ್ಗೆ ಆತ ಕ್ಯಾತ್ಸಂದ್ರ ಹೊರಭಾಗದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ರೈಲ್ವೆ ಪೋಲೀಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ಭೀಮಣ್ಣ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin