ಪೋಷಕರ ಕ್ಯಾನ್ಸರ್ ಚಿಕಿತ್ಸೆಗೆಗಾಗಿ ಕಳ್ಳತನ ಮಾಡಿ ಸಿಕ್ಕಿಬಿದ್ದರು

ಈ ಸುದ್ದಿಯನ್ನು ಶೇರ್ ಮಾಡಿ

Crime-2-Arrested--01

ಬೆಂಗಳೂರು, ಆ.30- ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ತಂದೆ-ತಾಯಿಯ ವೈದ್ಯಕೀಯ ವೆಚ್ಚಕ್ಕಾಗಿ ಸ್ನೇಹಿತನೊಂದಿಗೆ ಸೇರಿ ಕಳ್ಳತನಕ್ಕಿಳಿದಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಜೆಸಿ ನಗರ ಪೊಲೀಸರು ಬಂಧಿಸಿ 25 ಲಕ್ಷ ರೂ. ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ತ್ರಿಪುರ ರಾಜ್ಯದ ಪರೇಸ್‍ಕುಮಾರ್ ಸಿನ್ಹಾ (38) ಮತ್ತು ಈತನ ಸ್ನೇಹಿತ ಒರಿಸ್ಸಾ ಮೂಲದ ಬಿಜಯ್‍ದಾಸ್ (34) ಬಂಧಿತರು. ಆರೋಪಿಗಳಿಂದ ಜೆಸಿ ನಗರ ಠಾಣೆಯಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 18 ಲಕ್ಷ ರೂ. ಮೌಲ್ಯದ 16 ಲ್ಯಾಪ್‍ಟಾಪ್, 12 ಎಂಐ ಟ್ಯಾಬ್, ಸ್ಯಾಮ್‍ಸಂಗ್ ಮೊಬೈಲ್, ಆಡುಗೋಡಿ ಹಾಗೂ ಕೋರಮಂಗಲ ಠಾಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ 7 ಲಕ್ಷ ಮೌಲ್ಯದ 8 ಲ್ಯಾಪ್‍ಟಾಪ್, 10 ಮಾನಿಟರ್, ಪ್ರೊಜೆಕ್ಟರ್ ಹಾಗೂ ಹೆಡ್‍ಫೋನ್ ವಶಪಡಿಸಿಕೊಂಡಿದ್ದಾರೆ. ಜು.15ರಂದು ಸಂಜೆ 6 ಗಂಟೆಯಿಂದ ಮಾರನೆ ದಿನ ಬೆಳಗ್ಗೆ 10.30ರ ನಡುವೆ ಜೆಪಿ ನಗರ 3ನೆ ಹಂತ, ಮಿನಿ ಫಾರೆಸ್ಟ್‍ನಲ್ಲಿರುವ ರಿಲೆ-2 ಇಂಡಿಯಾ ಪ್ರೈವೇಟ್ ಕಂಪೆನಿಯ ಬಾಗಿಲನ್ನು ಒಡೆದು ಒಳನುಗ್ಗಿದ ಕಳ್ಳರು ಕಚೇರಿಯಲ್ಲಿದ್ದ 21 ಲ್ಯಾಪ್‍ಟಾಪ್ಸ್, 15 ಟ್ಯಾಬ್ಸ್, ಸ್ಯಾಮ್‍ಸಂಗ್ ಮೊಬೈಲ್ ಹಾಗೂ 1 ಬ್ಲಾಕ್‍ಬೆರ್ರಿ ಮೊಬೈಲ್ ಫೋನ್‍ಅನ್ನು ಕಳವು ಮಾಡಿಕೊಂಡು ಹೋಗಿದ್ದ ಬಗ್ಗೆ ಜೆಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣವನ್ನು ಪತ್ತೆ ಮಾಡಲು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಶರಣಪ್ಪ ಅವರ ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡ ಕೃತ್ಯ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇಬ್ಬರು ವ್ಯಕ್ತಿಗಳ ಚಲನವಲನ ಗಮನಕ್ಕೆ ಬಂದಿದೆ.
ಒಬ್ಬ ವ್ಯಕ್ತಿ ತಲೆಗೆ ಹೆಲ್ಮೆಟ್ ಹಾಕಿಕೊಂಡಿದ್ದು, ಇನ್ನೊಬ್ಬ ವ್ಯಕ್ತಿಯು ಸೆಕ್ಯುರಿಟಿ ಸಮವಸ್ತ್ರ ಧರಿಸಿರುವುದು ಕಂಡುಬಂದಿದೆ. ಸೆಕ್ಯೂರಿಟಿ ಏಜೆನ್ಸಿ ಸಂಪರ್ಕಿಸಿ ಈ ತಂಡ ತನಿಖೆ ಕೈಗೊಂಡಾಗ ಯಾವುದೇ ಐಡಿ ಪ್ರೂಫ್ ನೀಡದೆ ಮೊಬೈಲ್ ನಂಬರ್ ಮಾತ್ರ ನೀಡಿ ಕೆಲಸಕ್ಕೆ ಸೇರಿಕೊಂಡಿರುವುದು ತಿಳಿದುಬಂದಿದೆ.
ಮೊಬೈಲ್ ಫೋನ್‍ನ ಸಿಡಿಆರ್‍ಅನ್ನು ಪರಿಶೀಲನೆ ನಡೆಸಿದಾಗ ಈ ಹಿಂದೆ ಸೆಕ್ಯೂರಿಟಿ ಗಾರ್ಡ್ ಆಗಿ ಸೇರಿಕೊಂಡಾಗ ನೀಡಿದ್ದ ಭಾವಚಿತ್ರವು ಕಳ್ಳತನ ನಡೆದ ಸಿಸಿಟಿವಿ ಫುಟೇಜ್‍ನಲ್ಲಿ ಸಿಕ್ಕ ಫೋಟೋಗೆ ಹೋಲಿಕೆಯಾಗುತ್ತಿದ್ದುದನ್ನು ಗಮನಿಸಿದ ತನಿಖಾ ತಂಡ ತನಿಖೆ ಚುರುಕುಗೊಳಿಸಿತು.

ಸೆಕ್ಯೂರಿಟಿ ಗಾರ್ಡ್ ಆಗಿ ಸೇರಿಕೊಂಡ ಒಬ್ಬಾತ ಸಾಫ್ಟ್‍ವೇರ್ ಕಂಪೆನಿಗಳು ಇರುವಂತಹ ಬಿಲ್ಡಿಂಗ್‍ನಲ್ಲಿ ನೈಟ್ ಸೆಕ್ಯೂರಿಟಿಯಾಗಿ ಕೆಲಸಕ್ಕೆ ಸೇರಿಕೊಂಡು ಅಲ್ಲಿನ ಎಲ್ಲ ಮಾಹಿತಿಗಳನ್ನು ತಿಳಿದುಕೊಂಡು ಕಳ್ಳತನ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಆರೋಪಿ ಪರೇಸ್‍ಕುಮಾರ್ ಸಿನ್ಹ ತಂದೆ-ತಾಯಿ ಇಬ್ಬರಿಗೂ ಕ್ಯಾನ್ಸರ್ ಕಾಯಿಲೆಯಿದ್ದು, ಚಿಕಿತ್ಸೆಗೆ ಹಣ ಭರಿಸಲು ತನ್ನ ಸ್ನೇಹಿತ ಬಿಜಯ್‍ದಾಸ್‍ನೊಂದಿಗೆ ಸೇರಿಕೊಂಡು ಕಳ್ಳತನ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

Facebook Comments

Sri Raghav

Admin