ಪೋಸ್ಟರ್‍ನಲ್ಲಿ ತಮ್ಮ ಫೋಟೋ ಮಾಯವಾಗಿದ್ದಕ್ಕೆ ವಿಶ್ವನಾಥ್ ಕೆಂಡಾಮಂಡಲ

ಈ ಸುದ್ದಿಯನ್ನು ಶೇರ್ ಮಾಡಿ

H-vishwanath

ಮೈಸೂರು, ಮಾ.12- ಮಾಜಿ ಸಂಸದ ಎಚ್. ವಿಶ್ವನಾಥ್ ಮತ್ತೆ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ್ದಾರೆ. ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆಗೆ ಸಂಬಂಧಿಸಿದಂತೆ ಪೋಸ್ಟರ್ ಹಾಗೂ ಜಾಹೀರಾತುಗಳಲ್ಲಿ ತಮ್ಮ ಭಾವಚಿತ್ರ ಕೈ ಬಿಟ್ಟಿರುವುದಕ್ಕೆ ವಿಶ್ವನಾಥ್ ಗರಂ ಆಗಿದ್ದಾರೆ. ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಈ ಕುರಿತು ಪ್ರತಿಕ್ರಿಯಿಸಿದ ವಿಶ್ವನಾಥ್, ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ.
40 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ನಂಬಿ ಬದುಕಿದವನು. ನನ್ನ ರಾಜಕೀಯ ಜೀವನದಲ್ಲಿ ಇಂತಹ ಅದೆಷ್ಟೋ ಮುಖ್ಯಮಂತ್ರಿಗಳನ್ನು ಕಂಡಿದ್ದೇನೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಹೆಸರು ಹೇಳದೆಯೇ ಆಕ್ರೋಶ ವ್ಯಕ್ತಪಡಿಸಿದರು. ಪೋಸ್ಟರ್‍ಗಳಲ್ಲಿ ಬೇಕೆಂದೇ ನನ್ನ ಚಿತ್ರಗಳನ್ನು ಹಾಕಿಲ್ಲ. ಇದು ನಿಜಕ್ಕೂ ಉಡಾಫೆ. ಇಂತಹ ಉಡಾಫೆ, ಅಹಂಕಾರವನ್ನು ಬಿಡದಿದ್ದರೆ ಮುಂದಿನ ಚುನಾವಣೆಯಲ್ಲಿ ಜನರೇ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ನಾನು ಎರಡು ಬಾರಿ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಈ ಮೂಲಕ ನನ್ನ ಹೆಜ್ಜೆ ಗುರುತುಗಳನ್ನು ಬಿಟ್ಟಿದ್ದೇನೆ. ಜನರಿಗೆ ನಾನು ಏನೆಂಬುದು ಗೊತ್ತು. ನನ್ನಂತಹವರ ಭಾವಚಿತ್ರಗಳನ್ನು ಕೈ ಬಿಡಲಾಗಿದೆ. ಇದರಿಂದ ನನಗೇನೂ ಬೇಸರವಿಲ್ಲ. ಆದರೆ, ಕಾಂಗ್ರೆಸ್ ಪಕ್ಷವನ್ನು ಇವರು ಅದೆಲ್ಲಿಗೆ ಕೊಂಡೊಯ್ಯುತ್ತಿದ್ದಾರೆ ಎನ್ನುವುದೇ ಗೊತ್ತಾಗಿಲ್ಲ. ಮುಂದಿನ ಚುನಾವಣೆಯಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದು ಟಾಂಗ್ ನೀಡಿದರು.

+ ಮುಖಂಡರ ಆಕ್ರೋಶ:

ಜಾಹೀರಾತು ಹಾಗೂ ಪೋಸ್ಟರ್‍ಗಳಲ್ಲಿ ವಿಶ್ವನಾಥ್ ಅವರ ಭಾವಚಿತ್ರ ಕೈಬಿಟ್ಟಿರುವುದಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯ ಮುಖಂಡರನ್ನು ಹೀಗೇ ನಡೆಸಿಕೊಂಡರೆ ಉಪಚುನಾವಣೆಯಲ್ಲಿ ಪಕ್ಷದ ವಿರುದ್ಧ ನಿಲ್ಲಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಮುಖ್ಯಮಂತ್ರಿಗಳಿಗೆ ರವಾನಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin