ಪೌರಕಾರ್ಮಿಕರಿಗೆ ಅನ್ಯಾಯವಾಗಲು ಬಿಡಲ್ಲ: ಪದ್ಮನಾಭರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Padmanabha-reddy

ಬೆಂಗಳೂರು, ಅ.31- ನಾಳೆಯಿಂದ ನಗರದಲ್ಲಿ ಕಸ ವಿಲೇವಾರಿ ಗುತ್ತಿಗೆ ಪದ್ಧತಿ ರದ್ದುಪಡಿಸಲು ಬಿಬಿಎಂಪಿ ತೀರ್ಮಾನಿಸಿರುವುದು, 700 ನಾಗರಿಕರಿಗೆ ಒಬ್ಬ ಪೌರಕಾರ್ಮಿಕರನ್ನು ನಿಯೋಜಿಸಲು ಸರ್ಕಾರ ಮುಂದಾಗಿರುವುದರಿಂದ ಮತ್ತೆ ಕಸ ವಿಲೇವಾರಿ ಸಮಸ್ಯೆ ಉದ್ಭವಿಸಲಿದೆ. ಪಾಲಿಕೆ ಸಭೆಯಲ್ಲಿಂದು ಈ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಕಸ ಸಮಸ್ಯೆ ಉಲ್ಬಣಗೊಂಡರೆ ಸರ್ಕಾರ ಹಾಗೂ ಬಿಬಿಎಂಪಿಯ ಅವೈಜ್ಞಾನಿಕ ನಿರ್ಧಾರವೇ ಕಾರಣ ಎಂದು ಹರಿಹಾಯ್ದರು.

ನಾಳೆಯಿಂದ ಕಸ ವಿಲೇವಾರಿ ಗುತ್ತಿಗೆ ಪದ್ಧತಿ ರದ್ದುಪಡಿಸಿದರೆ ಇದನ್ನೇ ಕಾಯಕವಾಗಿಸಿಕೊಂಡಿರುವ 32ಸಾವಿರ ಪೌರಕಾರ್ಮಿಕರು ಬೀದಿಗೆ ಬೀಳುತ್ತಾರೆ. ಕೂಡಲೇ ಅವರನ್ನೇಲ್ಲಾ ಖಾಯಂಗೊಳಿಸಿ ಎಂದು ಆಗ್ರಹಿಸಿದರು. 700 ನಾಗರಿಕರಿಗೆ ಒಬ್ಬ ಪೌರಕಾರ್ಮಿಕರನ್ನು ಹಾಕಿದರೆ ಅವರು ಕೆಲಸ ಮಾಡಲು ಅಸಾಧ್ಯವಾಗುತ್ತದೆ. ವಾರಕ್ಕೊಮ್ಮೆ ಕಸ ವಿಲೇವಾರಿ ಮಾಡುವಂತಹ ಅನಿವಾರ್ಯತೆ ಎದುರಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಸರ್ಕಾರದ ಹೊಸ ನಿಯಮದಂತೆ 32ಸಾವಿರ ಪೌರಕಾರ್ಮಿಕರ ಬದಲು 12 ಸಾವಿರಕ್ಕೆ ಇಳಿಸಲು ನಿರ್ಧರಿಸಿದ್ದೀರಾ ಇದು ಸಂಪೂರ್ಣ ಅವೈಜ್ಞಾನಿಕ. ಇದರಿಂದ ಶೇ.60ರಷ್ಟು ಪೌರಕಾರ್ಮಿಕರು ಬೀದಿಗೆ ಬೀಳುತ್ತಾರೆ. ಇದೆಲ್ಲಾ ಗೊತ್ತಿದ್ದರೂ ಆಯುಕ್ತರು ಸ್ವೀಪಿಂಗ್ ಯಂತ್ರ, ಕಾಂಪ್ಯಾಕ್ಟರ್ ಹಾಗೂ ಆಟೋಗಳ ಖರೀದಿಗೆ ಮುಂದಾಗಿರುವುದು ದುರ್ದೈವವೇ ಸರಿ ಎಂದು ಹರಿಹಾಯ್ದುರು.

ಪೌರಕಾರ್ಮಿಕರ ಹಾಜರಾತಿಗೆ ಭಯೋಮೆಟ್ರಿಕ್ ಯಂತ್ರ ಅಳವಡಿಸಲು ಸ್ಯಾನಿಟರಿ ದಪ್ಪೇದಾರ್, ವಾಟರ್‍ಮನ್‍ಗಳ ನಿಯೋಜನೆಗೂ ಆಯುಕ್ತರು ಆದೇಶಿಸಿದ್ದಾರೆ. ಕೂಡಲೇ ಟೆಂಡರ್ ಕರೆದು ಪೌರಕಾರ್ಮಿಕರಿಗೆ ಅಗತ್ಯವಾದ ಸುರಕ್ಷಾ ಸಾಧನಗಳನ್ನು ನೀಡಬೇಕೆಂದು ಪದ್ಮನಾಭರೆಡ್ಡಿ ಒತ್ತಾಯಿಸಿದರು.
ನಾವು ಬಿಜೆಪಿಯವರು. ಯಾವುದೇ ಕಾರಣಕ್ಕೂ ಪೌರಕಾರ್ಮಿಕರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಒಂದು ವೇಳೆ ಅನ್ಯಾಯವಾದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದರು.

Facebook Comments

Sri Raghav

Admin