ಪ್ರಕಾಶ್ ರೈಗೆ ಶಿವರಾಮ ಕಾರಂತ ಪ್ರಶಸ್ತಿ ನೀಡಿದರೆ ಉಗ್ರ ಪ್ರತಿಭಟನೆಯ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Prakash-Rai--01

ಉಡುಪಿ,ಅ.9-ಸರ್ವಸಂಗ ಪರಿತ್ಯಾಗಿ, ನಾಥ ಪಂಥ ಜೋಗಿ ಸಮುದಾಯದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಹುಭಾಷಾ ನಟ ಪ್ರಕಾಶ್ ರೈ ಅವರಿಗೆ ಡಾ.ಶಿವರಾಮ ಕಾರಂತ ಪ್ರಶಸ್ತಿ ನೀಡಬಾರದು ಎಂದು ನಾಥ ಪಂಥ ಸಮುದಾಯ ಆಗ್ರಹಿಸಿದೆ. ಜಿಲ್ಲೆಯ ಕೋಟತಟ್ಟು ಗ್ರಾಮಪಂಚಾಯ್ತಿ ವತಿಯಿಂದ ಪ್ರಕಾಶ್ ರೈ ಅವರಿಗೆ ನೀಡುತ್ತಿರುವ ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ವಿರೋಧಿಸಿ ನಾಳೆ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ಧರಣಿ ನಡೆಸಲಾಗುವುದು ಎಂದು ಸಮುದಾಯದ ಡಾ.ಕೇಶವ ಕೋಟೇಶ್ವರ ಹೇಳಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಒಬ್ಬ ನಟರಲ್ಲ. ಅವರು ಸರ್ವಸಂಗ ಪರಿತ್ಯಾಗಿಯಾಗಿ ಮೋಕ್ಷಕ್ಕಾಗಿ ಪರಿತಪಿಸುತ್ತಿರುವವರು. ಅಂಥವರ ವಿರುದ್ದ ನಟ ಪ್ರಕಾಶ್ ರೈ ಅವರು ಅವಹೇಳನಕಾರಿಯಾಗಿ ಮಾತನಾಡಿರುವುದು ಮಹಾಪರಾಧವಾಗಿದ್ದು, ಯಾವುದೇ ಕಾರಣಕ್ಕೂ ಅವರಿಗೆ ಶಿವರಾಮ ಕಾರಂತರಂತಹ ಮಹಾನ್ ವ್ಯಕ್ತಿಯೊಬ್ಬರ ಹೆಸರಿನ ಪ್ರಶಸ್ತಿಯನ್ನು ನೀಡಕೂಡದು.

ಒಂದು ವೇಳೆ ಪ್ರಶಸ್ತಿ ನೀಡಿದ್ದೇ ಆದರೆ ನಾವು ಉಗ್ರ ಪ್ರತಿಭಟನೆ ಮಾಡುತ್ತೇವೆ. ಕೋಟತಟ್ಟು ಗ್ರಾಮ ಪಂಚಾಯ್ತಿಯವರು ನಾಳೆಯೇ ಪ್ರಶಸ್ತಿ ಪ್ರದಾನ ಮಾಡಲಿದ್ದು, ಅವರಿಗೆ ಪ್ರಶಸ್ತಿ ನೀಡಬಾರದು ಎಂದು ನಾಥ ಪಂಥ ಜೋಗಿ ಸಮುದಾಯ ಸೇವಾ ಸಮಿತಿಯ ಅಧ್ಯಕ್ಷ ಕೇಶವ ಕೋಟೇಶ್ವರ್ ಎಚ್ಚರಿಸಿದ್ದಾರೆ.
ಪ್ರಕಾಶ್ ರೈ ಅಂಥವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸರ್ವಥಾ ಖಂಡನೀಯ ಎಂದು ಅವರು ಹೇಳಿದ್ದಾರೆ.

Facebook Comments

Sri Raghav

Admin