ಪ್ರಜ್ವಲ್’ಗೆ ಆರ್.ಆರ್ ನಗರದ ಟಿಕೆಟ್ ನೀಡುವಂತೆ ಗೌಡರ ಮನೆ ಮುಂದೆ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Prajwal-Revanna--01
ಬೆಂಗಳೂರು, ಏ.7-ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರೆಂಬುದನ್ನು ಏ.13 ರಂದು ಪ್ರಕಟಿಸುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನಿರ್ಧರಿಸಿರುವ ಬೆನ್ನಲ್ಲೇ ಟಿಕೆಟ್‍ಗಾಗಿ ಒತ್ತಡ ಹೇರುವ ಪ್ರಯತ್ನ ನಡೆಸಲಾಗುತ್ತಿದೆ. ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಪುತ್ರ ಹಾಗೂ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಅವರಿಗೆ ರಾಜರಾಜೇಶ್ವರಿ ನಗರದ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ರಾಜರಾಜೇಶ್ವರಿ ನಗರದ ಜೆಡಿಎಸ್ ಕಾರ್ಯಕರ್ತರು ಪದ್ಮನಾಭ ನಗರದಲ್ಲಿರುವ ಎಚ್.ಡಿ.ದೇವೇಗೌಡರ ಮನೆ ಮುಂದೆ ಪ್ರತಿಭಟನೆ ನಡೆಸಿದರು.

ಈ ವೇಳೆ ಸ್ಥಳಕ್ಕಾಗಮಿಸಿದ ವಿಧಾನಪರಿಷತ್ ಸದಸ್ಯ ಹಾಗೂ ಮುಖಂಡ ಟಿ.ಎ.ಶರವಣ ಅವರನ್ನು ಕಾರ್ಯಕರ್ತರು ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ಕೊಡಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಹೊರಗೆ ಬಂದ ದೇವೇಗೌಡರಲ್ಲಿ ಕಾರ್ಯಕರ್ತರು ಆರ್.ಆರ್.ನಗರದ ಹಾಲಿ ಶಾಸಕರ ವಿರುದ್ಧ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಬಾರದು. ಪ್ರಜ್ವಲ್‍ರೇವಣ್ಣ ಅವರು ಸಮರ್ಥರಾಗಿದ್ದು, ಅವರನ್ನೇ ಈ ಕ್ಷೇತ್ರದಲ್ಲಿ ಕಣಕ್ಕಿಳಿಸಬೇಕು. ಬೇರೆಯವರಿಗೆ ಜೆಡಿಎಸ್‍ನಿಂದ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದರು.   ಏ.13 ರಂದು ಆರ್.ಆರ್.ನಗರದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪ್ರಜ್ವಲ್ ರೇವಣ್ಣ ಹೆಸರು ಘೋಷಿಸಬೇಕೆಂದು ಕಾರ್ಯಕರ್ತರು ಆಗ್ರಹಿಸಿದರು. ಆದರೆ ದೇವೇಗೌಡರು ಇದ್ಯಾವುದಕ್ಕೂ ಪ್ರತಿಕ್ರಿಯಿಸದೆ ಕಾರಿನಲ್ಲಿ ಹೊರಟರು.

ಏ.13 ರಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಎಚ್‍ಎಂಟಿ ವಾರ್ಡ್‍ನಲ್ಲಿ ಪಕ್ಷದ ಸಮಾವೇಶ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಜೆಡಿಎಸ್ ಬೆಂಗಳೂರು ಮಹಾನಗರ ಅಧ್ಯಕ್ಷ ಆರ್.ಪ್ರಕಾಶ್ ನೇತೃತ್ವದಲ್ಲಿ ಚುನಾವಣಾ ಪ್ರಚಾರ ಸಮಾವೇಶದ ಸಿದ್ಧತೆಗಳು ಭರದಿಂದ ಸಾಗಿವೆ. ಈ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರೆಂಬುದು ಅಧಿಕೃತವಾಗಿ ಪ್ರಕಟವಾಗದಿದ್ದರೂ ಪ್ರಜ್ವಲ್ ರೇವಣ್ಣ ಮತ್ತು ಆರ್.ಪ್ರಕಾಶ್ ಅವರ ಹೆಸರುಗಳು ಪದೇ ಪದೇ ಕೇಳಿ ಬಂದಿವೆ.

ದೇವೇಗೌಡರು ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧಿಸುವುದಾಗಿ ಪದೇ ಪದೇ ಪುನರುಚ್ಚರಿಸಿದ್ದಾರೆ. ಈ ನಡುವೆ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕೆಂಬ ಒತ್ತಡ ಹೆಚ್ಚಾಗುತ್ತಿದ್ದು, ಏ.13ರಂದು ನಡೆಯುವ ಸಮಾವೇಶದಲ್ಲಿ ಯಾರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

Facebook Comments

Sri Raghav

Admin