ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆ ಈಡೇರಿದೆ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

kanakapura
ಕನಕಪುರ, ಮಾ.2- ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದ ತೃಪ್ತಿಯಿದೆ. ರೈತರ ಸಾಲಮನ್ನಾದಿಂದ ಹಿಡಿದು ಹತ್ತಾರು ಜನಪರ ಕಾರ್ಯಕ್ರಮಗಳನ್ನು ಜನರಿಗೆ ನೇರವಾಗಿ ತಲುಪಿಸಿದ್ದೇನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತಾಲ್ಲೂಕಿನ ಶಿವನಹಳ್ಳಿ ಸಮೀಪದ ಐವತ್ತು ಎಕರೆ ವಿಸ್ತೀರ್ಣದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಮೆಗಾಡೈರಿ ಉದ್ಘಾಟನೆ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ರೈತರ ಬದುಕು ಹಸನಾಗಲು ಕೃಷಿಕ್ಷೇತ್ರಕ್ಕೆ ಮತ್ತು ನೀರಾವರಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅದೇರೀತಿ ಅಂತರ್ಜಲ ವೃದ್ಧಿಸಲು ಕೃಷಿಹೊಂಡ, ಚೆಕ್‍ಡ್ಯಾಂ ನಿರ್ಮಿಸಿ ಬತ್ತಿಹೋದ ಕೆರೆಗಳಿಗೆ ಪುನರ್‍ಜೀವ ತುಂಬಲು ಕೆರೆಗಳನ್ನು ತುಂಬಿಸುವ ಕಾಯಕಲ್ಪಕ್ಕೆ ಸಹಸ್ರಾರು ಕೋಟಿ ರೂ. ಹಣ ಖರ್ಚು ಮಾಡಲಾಗಿದೆ ಎಂದರು.

ರಾಜ್ಯದ ಹಾಲು ಉತ್ಪಾದಕರ ಸಹಕಾರ ಸಂಘದ ಮೂಲಕ ರೈತರಿಗೆ ಹೆಚ್ಚಿನ ಪ್ರೋತ್ಸಾಹ ಧನವನ್ನು ನೀಡಲಾಗಿದೆ. ಹಿಂದಿನ ಸರ್ಕಾರಗಳು ಇಂತಹ ಯೋಜನೆಗಳನ್ನು ಏಕೆ ಮಾಡಲಿಲ್ಲ? ಕಳೆದ ಐದು ವರ್ಷಗಳಲ್ಲಿ ಬಜೆಟ್‍ನಲ್ಲಿ ಮೀಸಲಿಟ್ಟ ಹಣದಲ್ಲಿ ಹಿಂದುಳಿದ, ಅಲ್ಪಸಂಖ್ಯಾತ, ದಲಿತರ ಮೀಸಲು ಹಣವನ್ನು ಶೇ.100 ರಷ್ಟು ಜನಾಂಗದ ಕಲ್ಯಾಣಕ್ಕಾಗಿ ವೆಚ್ಚ ಮಾಡಲಾಗಿದೆ. ನಾವು ಕೈಗೊಂಡಿರುವ ಜನಪರ ಕಾರ್ಯಕ್ರಮಗಳನ್ನು ವಿಧಾನಸಭೆಯಲ್ಲಿ ಸಮರ್ಥಿಸಿಕೊಳ್ಳಲಾಗದ ಬಿಜೆಪಿ ಮುಖಂಡರು ಹೊರಗಡೆ ಬಂದು ನಾವು ಏನೂ ಮಾಡಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ತಿಳಿಸಿದರು.

ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಸಿಬಿಐ ಮತ್ತು ಐಟಿ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಅಧಿಕಾರ ಬಂದಾಗಿನಿಂದಲೂ ಕಾಂಗ್ರೆಸ್ ಮುಖಂಡರ ಮನೆಗಳ ಮೇಲೆ ದಾಳಿ ನಡೆಸುವುದು ಮತ್ತು ಪ್ರಕರಣಗಳನ್ನು ದಾಖಲಿಸುವ ಮೂಲಕ ಭಯ ತುಂಬುವ ಯತ್ನ ಮಾಡುತ್ತಿದ್ದಾರೆ. ಆದರೆ ಬಿಜೆಪಿಯ ಮುಖಂಡರ ಮನೆಗಳ ಮೇಲೆ ಏಕೆ ದಾಳಿ ನಡೆಸುತ್ತಿಲ್ಲ ಅವರೇನು ಸತ್ಯ ಹರಿಶ್ಚಂದ್ರರೇ ಎಂದು ಪ್ರಶ್ನಿಸಿದರು. ಕನಕಪುರ ವಿಧಾನಸಭಾ ಕ್ಷೇತ್ರದ ಶಿವಕುಮಾರ್ ಜನಪ್ರಿಯ ಶಾಸಕನಾಗಿ, ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಗರೋಪಾದಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ರಾಜ್ಯದ ಯಾವುದೇ ಒಬ್ಬ ಶಾಸಕ ಮಾಡದ ಪ್ರಗತಿಯನ್ನು ಇಲ್ಲಿ ಮಾಡಿದ್ದಾರೆ ಎಂದರು. ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಮಾತನಾಡಿ, ನೀರಾವರಿ ಒಂದೇ ಯೋಜನೆಗೆ ಸಾವಿರ ಕೋಟಿ ರೂ., ವಿದ್ಯುತ್ ಕ್ಷೇತ್ರದಲ್ಲಿ ಪ್ರಗತಿಪರ ಕ್ರಾಂತಿ, ವಸತಿ ಹೀನರಿಗೆ ಸಾವಿರಾರು ಮನೆ ಮಂಜೂರು ಹಾಗೂ 1372 ಕೋಟಿ ರೂ.ಗಳ ವೆಚ್ಚದಲ್ಲಿ ಇಂದು ಹತ್ತಾರು ಪ್ರಗತಿಪರ ಅಭಿವೃದ್ಧಿಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಸಚಿವರಾದ ಟಿ.ಬಿ.ಜಯಚಂದ್ರ, ಎ.ಮಂಜು, ಶಾಸಕರಾದ ಎಸ್.ರವಿ, ಸಿ.ಎಂ.ಲಿಂಗಪ್ಪ, ನಗರಸಭಾಧ್ಯಕ್ಷ ದಿಲೀಪ್, ಬೆಂಗಳೂರು ಡೈರಿ ಅಧ್ಯಕ್ಷ ಅಪ್ಪಯ್ಯಣ್ಣ, ಎಂ.ಡಿ.ರಾಕೇಶ್‍ಸಿಂಗ್, ವ್ಯವಸ್ಥಾಪಕ ನಾಗರಾಜಯ್ಯ, ಜಿಲ್ಲಾಧಿಕಾರಿ ಡಾ.ಮಮತಾ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಯ ಅಧಿಕಾರಿಗಳು, ರಾಜಕೀಯ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin