‘ಪ್ರತಾಪ’ ತೋರಿಸಿದ್ದಕ್ಕೆ ಬಿಜೆಪಿಯಲ್ಲೇ ಬೇಸರ

ಈ ಸುದ್ದಿಯನ್ನು ಶೇರ್ ಮಾಡಿ

Pratap-Simha--02

ಬೆಂಗಳೂರು, ಡಿ.5- ಸಂಸದ ಪ್ರತಾಪ್ ಸಿಂಹ ಅವರ ನಡವಳಿಕೆ ಬಿಜೆಪಿ ವಲಯದಲ್ಲೇ ಬೇಸರ ಸೃಷ್ಟಿಸಿದ್ದು, ಇಂದು ಪಕ್ಷದ ಹೈಕಮಾಂಡ್‍ಗೆ ಅವರ ಬಗ್ಗೆ ವರದಿ ಸಲ್ಲಿಸಲಾಗಿದೆ. ಗುಂಡ್ಲುಪೇಟೆ-ನಂಜನಗೂಡು ಉಪಚುನಾವಣೆ ಸಂದರ್ಭದಲ್ಲಿ ಮಹದೇವ ಪ್ರಸಾದ್ ಅವರ ಪತ್ನಿ ಮೋಹನ್‍ಕುಮಾರಿ ಅವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿ ಪ್ರತಾಪ್ ಸಿಂಹ ಮುಜುಗರ ಉಂಟುಮಾಡಿದ್ದರು. ಇದೀಗ ಅನಗತ್ಯವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಹೆಸರು ಎಳೆದು ತಂದು ಮುಜುಗರ ತಂದಿದ್ದಾರೆ. ಯುವಮೋರ್ಚಾ ಕಾರ್ಯಕರ್ತರನ್ನು ಹುರಿದುಂಬಿಸಲು ಹೋಗಿ ಫೇಸ್‍ಬುಕ್‍ನಲ್ಲಿ ಲೈವ್ ಕೊಟ್ಟು ಪಕ್ಷದೊಳಗೆ ನಡೆದ ವಿಷಯಗಳನ್ನು ಬಹಿರಂಗವಾಗಿ ಹೇಳಿಕೆ ನೀಡಿ ಮತ್ತಷ್ಟು ಇರಿಸು-ಮುರಿಸು ಉಂಟಾಗುವಂತೆ ಮಾಡಿದ್ದಾರೆ.

ಹುಣಸೂರಿನಲ್ಲಿ ಹನುಮ ಜಯಂತಿ ಮಾಡಿದ್ದೇನೋ ಸರಿ. ಆದರೆ, ಅಲ್ಲಿಗೆ ತೆರಳುವಾಗ ಪೊಲೀಸ್ ಬ್ಯಾರಿಕೇಡ್ ಮೇಲೆ ಕಾರು ಹತ್ತಿಸಿ ಮತ್ತೆ ವಿವಾದ ಎಳೆದುಕೊಂಡಿದ್ದಾರೆ. ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಮಾಡಲು ಸಾಕಷ್ಟು ಅಸ್ತ್ರಗಳಿವೆ. ಆದರ, ಪ್ರತಾಪ್ ಸಿಂಹ ಹೋರಾಟ ಮಾಡಲು ಹೋಗಿ ವಿವಾದ ಹುಟ್ಟುಹಾಕಿಕೊಳ್ಳುವುದನ್ನು ಜಾಯಮಾನ ಮಾಡಿಕೊಂಡುಬಿಟ್ಟಿದ್ದಾರೆ. ಇದರಿಂದ ಪಕ್ಷಕ್ಕೆ ಹಾಗೂ ಪಕ್ಷದ ನಾಯಕರಿಗೆ ಮುಜುಗರ ಉಂಟಾಗಿದೆ.
ಚುನಾವಣೆ ಹತ್ತಿರ ಬರುತ್ತಿರುವಾಗ ಪ್ರತಿದಿನ, ಪ್ರತಿ ಕ್ಷಣ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಆದರೆ, ಯುವ ಸಂಸದ ಒಂದಿಲ್ಲೊಂದು ಎಡವಟ್ಟು ಮಾಡುತ್ತಲೇ ಬರುತ್ತಿರುವುದರಿಂದ ಬಿಜೆಪಿಗೆ ಅನುಕೂಲವಾಗುವುದು ಬಿಟ್ಟು ಪರೋಕ್ಷವಾಗಿ ಕಾಂಗ್ರೆಸ್‍ಗೆ ಲಾಭವಾದಂತಾಗುತ್ತಿದೆ.

ಬಿಜೆಪಿ ಪರಿವರ್ತನಾ ಯಾತ್ರೆ ನಡೆಸುತ್ತಿದ್ದು, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಹೋದ ಕಡೆಯಲ್ಲೆಲ್ಲ ಉತ್ತಮ ಸ್ಪಂದನೆ ಸಿಗುತ್ತಿದೆ. ಆದರೆ, ಪ್ರತಾಪ್ ಸಿಂಹ ಹೇಳಿಕೆಯಿಂದ ಯಡಿಯೂರಪ್ಪ ಸೇರಿದಂತೆ ಎಲ್ಲರಿಗೂ ಮುಜುಗರವಾಗುವಂತಾಗಿದೆ. ಮೊದಲು ಪ್ರತಾಪ್ ಸಿಂಹ ಬಾಯಿಗೆ ಬೀಗ ಹಾಕಬೇಕು. ಇಲ್ಲದೆ ಹೋದರೆ ಮುಂದೆ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ಚುನಾವಣೆ ಇರುವುದರಿಂದ ಜನರ ಬಳಿಗೆ ನಾವು ಹೋಗಬೇಕು. ಇಂತಹದ್ದನ್ನೆಲ್ಲ ಇಟ್ಟುಕೊಂಡು ಜನರಿಗೆ ಉತ್ತರ ಕೊಡಲು ಆಗುವುದಿಲ್ಲ. ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಬಿಜೆಪಿ ಹೈಕಮಾಂಡ್‍ಗೆ ರಾಜ್ಯ ಘಟಕದ ಕೆಲವರು ವರದಿ ನೀಡಿದ್ದಾರೆ.  ಅಲ್ಲದೆ, ರಾಜ್ಯಾಧ್ಯಕ್ಷರಿಗೂ ಪ್ರತಾಪ್ ಸಿಂಹ ವಿರುದ್ಧ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Facebook Comments

Sri Raghav

Admin