ಪ್ರತಿಭಾವಂತ ಕ್ರೀಡಾ ಸಾಧಕನಿಗೆ ಬೇಕು ಶಾಶ್ವತ ನೆಲೆ

ಈ ಸುದ್ದಿಯನ್ನು ಶೇರ್ ಮಾಡಿ

Ram-prasad

ಕ್ರೀಡಾ ಸಾಧನೆಗೆ ದೈಹಿಕ ವಿಕಲತೆ ಅಡ್ಡಿಯಲ್ಲ. ಕೇವಲ ದೈಹಿಕ ಸಬಲರು ಹಾಗೂ ವಿಕಲ ಚೇತನರು ಮಾತ್ರವಷ್ಟೇಯಲ್ಲ,ಇದಕ್ಕೆ ಮಿಗಿಲಾಗಿ ಬುದ್ದಿಮಾಂದ್ಯರು (ಮಾನಸಿಕ ವಿಕಲ ಚೇತನರು) ಕೂಡ ಸಾಧನೆ ಮಾಡಬಲ್ಲರು ಎಂಬುದಕ್ಕೆ ಉತ್ತಮ ನಿದರ್ಶನ ರಾಮ್ ಪ್ರಸಾದ್.  ಹೌದು..! ರಾಮ್ ಪ್ರಸಾದ್ ಒಬ್ಬ ವಿಶಿಷ್ಟ ವಿಕಲ ಚೇತನ ಕ್ರೀಡಾಪಟು..! ಬೆಂಗಳೂರಿನ ಮಲ್ಲೇಶ್ವರಂ ಸಮೀಪ ವಯ್ಯಾಲಿಕಾವಲ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಪ್ರಸಾದ್‍ಗೆ ಶಾಲಾ ದಿನಗಳಲ್ಲಿ ಸಂಭವಿಸಿದ ಅಪಘಾತದಲ್ಲಿ ಮೆದುಳಿಗೆ ಸಣ್ಣ ಪೆಟ್ಟು ಬಿದ್ದು ಈತ ತನ್ನ ಬೌದ್ಧಿಕ ಸಾಮಥ್ರ್ಯ ಕಳೆದುಕೊಂಡು ಮಾನಸಿಕ ವಿಕಲಚೇತನರಾಗುತ್ತಾರೆ. ಈ ದುರ್ಘಟನೆಯಿಂದ ನೊಂದ ರಾಮ್‍ಪ್ರಸಾದ್ ಅವರ ತಂದೆಯಾದ ರಾಮು ಅವರೇ ಕೋಚ್ ಆಗಿ ತನ್ನ ಮಗನಿಗೆ ನ್ಯೂನ್ಯತೆ ಇದ್ದರೂ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿಸಬೇಕೆಂಬ ಛಲದಿಂದ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಿ ಏಕಕಾಲದಲ್ಲಿ ತಂದೆಯ ಜವಾಬ್ದಾರಿ ಹಾಗೂ ಕೋಚ್ ಜವಾಬ್ದಾರಿಯನ್ನೂ ನಿಭಾಯಿಸಿಕೊಂಡು ಸುಮಾರು 25 ವರ್ಷಗಳ ಕಾಲ ಸುದೀರ್ಘವಾಗಿ ಶ್ರಮಿಸಿದ್ದಾರೆ.

ಸಂಘ -ಸಂಸ್ಥೆಗಳ ಅಡಿಯಲ್ಲಿ ನಡೆದ ರಾಜ್ಯ,ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್,ಹ್ಯಾಂಡ್‍ಬಾಲ್, ಈಜು,ಸೈಕ್ಲಿಂಗ್,ಬ್ಯಾಸ್ಕೆಟ್‍ಬಾಲ್ ,ವಾಲಿಬಾಲ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಭಾಗವಹಿಸಿ ರಾಮ್ ಪ್ರಸಾದ್ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ . ಅಲ್ಲದೇ ಸಾಂಸ್ಕøತಿಕ ಚಟುವಟಿಕೆಗಳಲ್ಲೂ ಕೂಡ ತನ್ನ ಪ್ರತಿಭೆ ಬೆಳಗುವ ಮೂಲಕ ತಾನೊಬ್ಬ ವಿಕಲ ಚೇತನ ವ್ಯಕ್ತಿ ಎಂಬುವುದನ್ನೇ ಪ್ರಸಾದ್ ಮರೆಸಿದ್ದಾರೆ. ಆದರೆ, ಪ್ರಸಾದ್ ಜೀವನಕ್ಕೆ ಶಾಶ್ವತ ನೆಲೆ ಸಿಕ್ಕದಿರುವುದು ನೋವಿನ ಸಂಗತಿಯಾಗಿದೆ.  ರಾಮು ತನ್ನ ಮಗ ರಾಮ್ ಪ್ರಸಾದ್‍ನನ್ನು ಭಾರತ್ ಎಲೆಕ್ಟ್ರಾನಿಕ್ಸ್ ಉದ್ಯೋಗಿ ನವೀನ್ ಅವರ ಬಳಿ ಅಥ್ಲೆಟಿಕ್ಸ್ ಹಾಗೂ ಸೈಕ್ಲಿಂಗ್ ತರಬೇತಿಗೆ ಸೇರಿಸಿದ್ದರು . 1997 ರಲ್ಲಿ ನಡೆದ ರಾಜ್ಯ ಮಟ್ಟದ ವಿಶೇಷ ಒಲಂಪಿಕ್ಸ್‍ನಲ್ಲಿ ಭಾಗವಹಿಸಿ 200 ಮೀಟರ್ ಓಟದಲ್ಲಿ ದ್ವಿತೀಯ , ಸೈಕ್ಲಿಂಗ್‍ನಲ್ಲಿ ಪ್ರಥಮ , ರಿಲೆಯಲ್ಲಿ ಪ್ರಥಮ ,100 ಮೀಟರ್ ಓಟದಲ್ಲಿ ದ್ವಿತೀಯ ಹಾಗೂ ಲಾಂಗ್ ಜಂಪ್‍ನಲ್ಲಿ ದ್ವಿತೀಯ ಬಹುಮಾನಗಳನ್ನು ಗಳಿಸುವ ಮೂಲಕ ತನ್ನ ಜಯದ ಓಟವನ್ನು ಆರಂಭಿಸಿ ಸಾಧನೆಗೆ ಮಾನಸಿಕ ವೈಕಲ್ಯ ತೊಡಕಾಗುವುದಿಲ್ಲ ಎಂಬುದನ್ನು ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ತೋರಿಸಿಕೊಟ್ಟಿದ್ದಾರೆ.

2002 ರಲ್ಲಿ ರಾಜ್ಯ ಮಟ್ಟದಲ್ಲಿ ನಡೆದ ಮತ್ತೊಂದು ವಿಶೇಷ ಒಲಂಪಿಕ್ಸ್‍ನಲ್ಲಿ ರಾಮ್ ಪ್ರಸಾದ್ ಭಾಗವಹಿಸಿ 100 ಮೀ ಹಾಗೂ 200 ಮೀ. ಓಟದಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ. ಜತೆಗೆ 2004ರಲ್ಲಿ ಪ್ರಾರಂಭವಾದ ರಾಜ್ಯ ಮಟ್ಟದ ಮತ್ತೊಂದು ವಿಶೇಷ ಒಲಂಪಿಕ್ಸ್‍ನಲ್ಲಿ ಭಾಗವಹಿಸಿ 1 ಕಿಮೀ. ಸೈಕ್ಲಿಂಗ್‍ನಲ್ಲಿ ಪ್ರಥಮ ಬಹುಮಾನ ಗಳಿಸುವ ಮೂಲಕ ಸದೃಢ ಆಟಗಾರರಿಗಿಂತ ತಾನೇನು ಕಡಿಮೆಯಿಲ್ಲ ಎಂಬುವುದನ್ನು ರಾಮ್ ಪ್ರಸಾದ್ ಸಾಬೀತು ಮಾಡಿದ್ದಾರೆ. ಪ್ರಸಾದ್ ಸಾಧನೆಯನ್ನು ಗುರುತಿಸಿದ ರಾಜ್ಯ ಅಂಗವಿಕಲರ ಕಲ್ಯಾಣ ಇಲಾಖೆ ಇದೇ ವರ್ಷದಲ್ಲಿ ಅಂಗವಿಕಲರ ಕಲ್ಯಾಣ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

2005ರಲ್ಲಿ ಈ ಸಾಧಕನ ಕ್ರೀಡಾಪ್ರತಿಭೆ ಗುರ್ತಿಸಿದ ಅಂದಿನ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾಗಿದ್ದ ಟಿ.ಎನ್.ಚತುರ್ವೇದಿ ಪ್ರಶಂಸಾ ಪತ್ರ ನೀಡಿ ಗೌರವಿಸಿದ್ದರು. ಜತೆಗೆ ಅಂಗವಿಕಲರ ಕ್ರೀಡಾ ಪರಿಷತ್ ಕೂಡ ಪ್ರಸಾದ್ ಗೆ ಮಾರ್ಗದರ್ಶಿ ಅವಾರ್ಡ್-2005 ನ್ನು ನೀಡಿ ಪುರಸ್ಕರಿಸಿದೆ. ಅದೇ ವರ್ಷದಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ವಿಶೇಷ ಒಲಂಪಿಕ್ಸ್‍ನ 15,000 ಕಿ.ಮೀ ಲಾಪೋರ್ಸ್‍ಮೆಂಟ್ ಟಾರ್ಚ್ ರನ್ ವಿಭಾಗದಲ್ಲಿ ಪ್ರಸಾದ್ ಭಾಗವಹಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

2006ರಲ್ಲಿ ಮಲೇಶಿಯಾದ ಕ್ವಾಲಾಲಂಪುರದಲ್ಲಿ ನಡೆದ ಪೆಸಿಫಿಕ್ ಗೇಮ್ಸ್‍ನಲ್ಲೂ ಭಾಗವಹಿಸಿ ರಾಷ್ಟ್ರ ಮತ್ತು ರಾಜ್ಯದ ಪ್ರತಿಷ್ಠೆ ಹೆಚ್ಚಿಸಿದ್ದು , ಅದೇ ವರ್ಷ ನೇತಾಜಿ ಸುಭಾಷ್ ಚಂದ್ರ ಬೋಸ್ ರಾಜ್ಯ ಗೌರವ ಯುವ ಪ್ರಶಸ್ತಿಗೆ ರಾಮ್ ಪ್ರಸಾದ್ ಭಾಜನರಾಗಿದ್ದರು. ರಾಜಸ್ತಾನದಲ್ಲಿ 2012 ರಲ್ಲಿ ನಡೆದ ಸಾಪ್ಟ್‍ಬಾಲ್ ಟೂರ್ನಿಮೆಂಟ್‍ನಲ್ಲಿ ಎರಡನೇ ಸ್ಥಾನ ಪಡೆದುಕೊಂಡ ರಾಜ್ಯ ತಂಡದಲ್ಲಿ ರಾಮ್‍ಪ್ರಸಾದ್ ಇದ್ದರು. 2013 ರಲ್ಲಿ ಗುಜರಾತ್‍ನಲ್ಲಿ ನಡೆದ ವಿಶೇಷ ಒಲಂಪಿಕ್ಸ್‍ನಲ್ಲಿ ವಾಲಿಬಾಲ್ ವಿಭಾಗದಲ್ಲಿ ಪ್ರಥಮ ಬಹುಮಾನ. ಅದೇ ವರ್ಷದಲ್ಲಿ ಗೋಲ್ಡ್ ಸ್ಪೋರ್ಟ್ಸ್ ಡೇ ಅವಾರ್ಡ್-2013. 2014ರಲ್ಲಿ ಕೆಂಪೇಗೌಡ ಪ್ರಶಸ್ತಿಗಳನ್ನು ಪ್ರಸಾದ್ ಮುಡಿಗೇರಿಸಿಕೊಂಡಿದ್ದಾರೆ . 2015ರಲ್ಲಿ ಅಮೆರಿಕಾದ ಲಾಸ್ ಏಂಜಲ್ಸ್ ನಲ್ಲಿ ನಡೆದ ಒಲಂಪಿಕ್ಸ್ ವಿಶ್ವ ಕ್ರೀಡಾಕೂಟ ದಲ್ಲಿ ಹ್ಯಾಂಡ್‍ಬಾಲ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಸಿ ಬೆಳ್ಳಿ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿದ್ದಾರೆ.

ಸಣ್ಣ ಸರ್ಕಾರಿ ನೌಕರಿ ಸಾಕು ಜೀವನಕ್ಕೆ:

ಕ್ರೀಡೆಯಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿರುವ ವಿಕಲ ಚೇತನ ಕ್ರೀಡಾಪಟು ರಾಮ್ ಪ್ರಸಾದ್ ಅವರಿಗೆ ಇನ್ನೂ ಶಾಶ್ವತ ನೆಲೆ ಸಿಕ್ಕಿಲ್ಲದಿರುವುದು ವಿಪರ್ಯಾಸ.  ಪ್ರಸಾದ್ ಅವರ ತಂದೆ ರಾಮು ತಮ್ಮ ಮಗನಿಗೆ ಸಣ್ಣ ಸರ್ಕಾರಿ ನೌಕರಿ ಕೊಡಿಸುವ ಸಲುವಾಗಿ ವಿವಿಧ ಸಂಸ್ಥೆಗಳು ಹಾಗೂ ಇನ್ನಿತರ ವಿಕಲ ಚೇತನರ ಇಲಾಖೆಯ ಕಛೇರಿಗಳ ಕದ ತಟ್ಟಿ -ತಟ್ಟಿ ಸುಸ್ತಾಗಿದ್ದಾರೆ. ರಾಮ್ ಪ್ರಸಾದ್ ಕನ್ನಡ ,ತಮಿಳು,ತೆಲುಗು ಮಾತನಾಡುತ್ತಾರೆ. ನನ್ನ ಮಗನ ಕ್ರೀಡಾ ಸಾಧನೆ ಗಮನಿಸಿ ಯಾವುದಾದರೂ ಸರ್ಕಾರಿ ಸಂಸ್ಥೆಯಲ್ಲಿ ಸಣ್ಣ ನೌಕರಿ ಸಿಕ್ಕರೆ ಸಾಕು ಎಂದು ಪ್ರಸಾದ್ ಅವರ ತಂದೆ ರಾಮು ಅವರ ತುಡಿತ. ಪ್ರಸಾದ್ ಅವರನ್ನು ಕ್ರೀಡಾ ಇಲಾಖೆ ಗುರುತಿಸಿ ಕೇವಲ ಪ್ರಶಸ್ತಿಗೆ ಸೀಮಿತವಾಗಿಸದೆ ಈತನ ಜೀವನಕ್ಕೆ ಶಾಶ್ವತ ಆಸರೆ ಕಲ್ಪಿಸಬೇಕು. ಆಗ ಮಾತ್ರ ಕ್ರೀಡಾ ಸಾಧನೆಗೆ ಮೌಲ್ಯ ಬಂದಂತಾಗುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin