ಪ್ರತಿಷ್ಠಿತ ಬಡಾವಣೆ ಅವ್ಯವಸ್ಥೆಗಳ ಆಗರ

ಈ ಸುದ್ದಿಯನ್ನು ಶೇರ್ ಮಾಡಿ

12

ಯಲಹಂಕ, ಅ.3- ನಗರದ ಬಹು ಪ್ರತಿಷ್ಠಿತ ಬಡಾವಣೆಯಾದ ನ್ಯಾಯಾಂಗ ಬಡಾವಣೆ ಅವ್ಯವಸ್ಥೆಗಳ ಆಗರವಾಗಿದ್ದರೂ ಪಾಲಿಕೆ ಸದಸ್ಯ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಜನರಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ.ಅಭಿವೃದ್ಧಿಗೆ ಮತ್ತೊಂದು ಹೆಸರಾಗಿರುವ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಕ್ಷೇತ್ರದಲ್ಲೇ ಸಮಸ್ಯೆಗಳು ಮತ್ತು ಮೂಲ ಭೂತ ಸೌಕರ್ಯಗಳಿಲ್ಲದೆ ಜನ ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಪ್ರಮುಖವಾಗಿ ಕಾಳಜಿ ವಹಿಸಬೇಕಾದ ಪಾಲಿಕೆ ಸದಸ್ಯ ಸತೀಶ್ ಅವರ ನಿರ್ಲಕ್ಷ್ಯ ಸಮಸ್ಯೆಗಳ ನಿವಾರಣೆಯಾಗದೆ ಜೀವಂತವಾಗಿ ಉಳಿಸಿದೆ. ಈ ಬಡಾವಣೆಯನ್ನು ಹೆದ್ದಾರಿ ಕಡೆಯಿಂದ ವೀಕ್ಷಿಸಿದವರು ಸೌಕರ್ಯಗಳಿಗೆ ಏನೂ ಕಮ್ಮಿ ಇಲ್ಲ ಎಂದುಕೊಳ್ಳುವಂತೆ ಗೋಚರಿಸುತ್ತದೆಯಾದರೂ ಒಳ ಹೊಕ್ಕು ನೋಡಿದಾಗ ಅದರ ಬಂಡವಾಳ ಬಯಲಾಗುತ್ತದೆ.

ಪ್ರಮುಖ ಎರಡು ಹೆದ್ದಾರಿಗಳಿಗೆ ಮಾತ್ರ ಕನಿಷ್ಠ ಆರು ತಿಂಗಳಿಗೊಮ್ಮೆ ಡಾಂಬರು, ಬೀದಿ ದೀಪ, ನೀರಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿ ಸರಿಪಡಿಸಲಾಗುವುದಾದರೂ ಒಳಭಾಗದ ರಸ್ತೆಗಳ ಸ್ಥಿತಿ ಮಾತ್ರ ಶೋಚನೀಯವಾಗಿದೆ. ಡಾಂಬರ್ ಕಾಣದ ರಸ್ತೆಗಳು, ಸ್ವಚ್ಛತೆ ಕಾಣದ ಚರಂಡಿಗಳು, ರಸ್ತೆಯಲ್ಲಿನ ಮೊಣಕಾಲುದ್ದದ ಹಳ್ಳಗಳು ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿ ಉಂಟುಮಾಡುತ್ತಿವೆ. ರಸ್ತೆಗಳ ಎರಡೂ ಬದಿ ಚರಂಡಿಗಳಿದ್ದರೂ ಮಳೆ ಬಂದರಂತೂ ಚರಂಡಿಯಲ್ಲಿ ನೀರು ಹರಿಯದೆ ರಸ್ತೆಗಳೆಲ್ಲಾ ಈಜು ಕೊಳಗಳಾಗಿ ಮಾರ್ಪಾಡಾಗುವ ಮೂಲಕ ಮಕ್ಕಳು ಹಾಗೂ ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸುತ್ತದೆ.

ಈ ಅವ್ಯವಸ್ಥೆ ಬಗ್ಗೆ ಪಾಲಿಕೆ ಸದಸ್ಯರ ಗಮನಕ್ಕೆ ಎಷ್ಟು ಬಾರಿ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತ ಪಡಿಸುತ್ತಾರೆ. ಒಳ ಚರಂಡಿಗಳು ಕಸ ತುಂಬಿ ಹೋಗಿವೆ, ರಸ್ತೆಗಳು ಡಾಂಬರು ಕಂಡಿಲ್ಲ, ಹಳ್ಳಗಳದ್ದೇ ಕಾರುಬಾರು, ಮಳೆ ಬಂದರೆ ಈಜು ಕೊಳವಾಗುವ ರಸ್ತೆಗಳಿಂದಾಗಿ ಮಕ್ಕಳನ್ನು ಹೊರ ಕಳುಹಿಸಲೂ ಭಯಪಡುವ ಸ್ಥಿತಿ ತಲುಪಿದ್ದೇವೆ. ಇನ್ನಾದರೂ ಸಂಬಂಧಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಿ ಸಾರ್ವಜನಿಕರ ಸಮಸ್ಯೆ ಬಗೆಹರಿಸುವಲ್ಲಿ ಮುಂದಾಗಬೇಕಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin