ಪ್ರತಿಷ್ಠಿತ ಮೋದಿ ಕಣ್ಣಾಸ್ಪತ್ರೆ ಮೇಲೆಯೇ ಕಣ್ಣು ಹಾಕಿದ ಭೂಗಳ್ಳರು..!

ಈ ಸುದ್ದಿಯನ್ನು ಶೇರ್ ಮಾಡಿ

Modi-eye-Hospital

ಬೆಂಗಳೂರು, ಏ.26-ಮಹಾಲಕ್ಷ್ಮಿ ಲೇಔಟ್ ಮೋದಿ ರಸ್ತೆಯಲ್ಲಿರುವ ಪ್ರತಿಷ್ಠಿತ ಎಂ.ಸಿ.ಮೋದಿ ಚಾರಿಟಬಲ್ ಟ್ರಸ್ಟ್‍ನ ಜಾಗದ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ. ಇಲ್ಲಿರುವ ಎರಡು ಎಕರೆ ಸುಮಾರು 150 ಕೋಟಿ ಮೌಲ್ಯದ ಜಾಗವನ್ನು ಕಬಳಿಸುವ ಹುನ್ನಾರ ನಡೆದಿದೆ.  ಏಳು ಲಕ್ಷಕ್ಕೂ ಹೆಚ್ಚು ಜನರ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ವಿಶ್ವ ದಾಖಲೆ ಬರೆದು, ಒಂದೇ ದಿನದಲ್ಲಿ 833 ಶಸ್ತ್ರಚಿಕಿತ್ಸೆ ನೆರವೇರಿಸಿ ಗಿನ್ನಿಸ್ ದಾಖಲೆ ಸೇರಿ ಎಲ್ಲಾ ಪ್ರಶಸ್ತಿ, ಪುರಸ್ಕಾರಗಳಿಂದ ಬಂದ ಹಣವನ್ನು ಬಡವರಿಗೆ ವ್ಯಯಿಸಿದ ಪುಣ್ಯಾತ್ಮ ಡಾ.ಮೋದಿ ಅವರು ನೇತ್ರ ಆಸ್ಪತ್ರೆ ಸ್ಥಾಪಿಸಲು ಸರ್ಕಾರ ಮಹಾಲಕ್ಷ್ಮಿ ಲೇಔಟ್‍ನಲ್ಲಿ 2 ಎಕರೆ ಜಾಗ ನೀಡಿತ್ತು. ಅಲ್ಲಿ ಬಡವರಿಗೆ, ಕೆಳವರ್ಗದವರಿಗೆ ಉಚಿತ ನೇತ್ರ ಚಿಕಿತ್ಸೆ ನಡೆಸಲಾಗುತ್ತಿತ್ತು.ಮೋದಿ ಹಾಗೂ ಅವರ ಮಕ್ಕಳ ನಿಧನದ ನಂತರ ಆ ಟ್ರಸ್ಟ್ ದುರ್ಬಳಕೆಯಾಗುತ್ತಿದ್ದು, ಈಗ ಆ ಜಾಗದ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ. ಪ್ರಭಾವಿ ರಾಜಕೀಯ ಹಿನ್ನೆಲೆಯಿರುವ ಕಾಂಗ್ರೆಸ್ ಶಾಸಕರೊಬ್ಬರು ಈ ಜಾಗ ಕಬಳಿಸುವ ಸಂಚು ನಡೆಸಿದ್ದಾರೆ ಎಂದು ತಿಳಿದುಬಂದಿದೆ.  ಈ ಜಾಗವನ್ನು ಉಳಿಸಲು ಮುಂದಾದ ಸ್ಥಳೀಯ ಶಾಸಕ ಕೆ.ಗೋಪಾಲಯ್ಯ ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನೂ ಕೂಡ ಮಾಡಲಾಗಿದೆ. ಡಾ.ಮೋದಿಯವರ ನಿಧನ ನಂತರ ಡಾ.ಅಮರನಾಥ್ ಮೋದಿ ಮತ್ತು ಸುವರ್ಣ ಮೋದಿಯವರು ಈ ಟ್ರಸ್ಟ್‍ನ್ನು ನಿರ್ವಹಿಸುತ್ತಿದ್ದರು. ಇವರ ನಿಧನದ ನಂತರ ಇವರ ತಮ್ಮನ ಮಗ ಸುಭಾಷ್ ಮೋದಿಯವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ.

ಮೋದಿಯವರು ಬದುಕಿದ್ದ ಕಾಲದಲ್ಲಿ ಸುಭಾಷ್ ಅವರನ್ನು ದೂರ ಇಟ್ಟಿದ್ದರು ಎನ್ನಲಾಗಿದೆ. ಇವರು ಅಕ್ರಮವಾಗಿ ಟ್ರಸ್ಟ್‍ನ್ನು ತಮ್ಮ ಹೆಸರಿಗೆ ಬರೆಸಿಕೊಂಡು ಇಲ್ಲಿನ ಎಲ್ಲಾ ವಹಿವಾಟನ್ನು ನಡೆಸಿ ಅನ್ಯಾಯ ಮಾಡುತ್ತಿರುವುದಲ್ಲದೆ, ಈ ಜಾಗವನ್ನು ಬೇರೆಯವರಿಗೆ ಮಾರುವ ಸಂಚು ರೂಪಿಸುತ್ತಿದ್ದಾರೆ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ.  ಡಾ.ಮೋದಿಯವರ ಪರಮಾಪ್ತರಾದ ನಿವೃತ್ತ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಹಿರಿಯ ಪೆÇಲೀಸ್ ಅಧಿಕಾರಿ ಜ್ಯೋತಿ ಪ್ರಕಾಶ್ ಮಿರ್ಜಿ, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಸೇರಿದಂತೆ ಅನೇಕಾನೇಕ ಗಣ್ಯರು ಈ ಜಾಗವನ್ನು ಉಳಿಸುವ ಪ್ರಯತ್ನಕ್ಕೆ ಕೈ ಜೋಡಿಸಿರುವುದಲ್ಲದೆ, ಮೋದಿ ಹೆಸರಲ್ಲಿ ಕಣ್ಣಿನ ಆಸ್ಪತ್ರೆ ಮುಂದುವರೆಯಬೇಕು, ಬಡವರಿಗೆ ಸೌಲಭ್ಯ ದೊರೆಯಬೇಕು. ಮೋದಿಯವರ ಹೆಸರು ಅಮರವಾಗಬೇಕು. ಈ ಜಾಗ ಖಾಸಗಿಯವರ ಪಾಲಾದರೆ ಇಲ್ಲಿ ವಾಣಿಜ್ಯ ಮಳಿಗೆಗಳು ತಲೆ ಎತ್ತುತ್ತವೆ. ವಿಶ್ವದಾಖಲೆ ಬರೆದ ಪುಣ್ಯಾತ್ಮ ಮೋದಿಯವರ ಹೆಸರು ನಶಿಸಿಹೋಗುತ್ತದೆ. ಈ ಜಾಗವನ್ನು ಉಳಿಸಲು ಜನರೇ ಮುಂದೆ ಬರಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಆಸ್ಪತ್ರೆಯಲ್ಲಿ 75 ಮಂದಿ ಮಹಿಳಾ ಸಿಬ್ಬಂದಿ ಸೇರಿದಂತೆ 105 ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವಾರು ಕಟ್ಟಡಗಳನ್ನು ಬಾಡಿಗೆಗೆ ನೀಡಲಾಗಿದೆ. ಆದರೆ ಟ್ರಸ್ಟ್‍ಗೆ ಯಾವುದೇ ಬಾಡಿಗೆಯೂ ಕ್ರಮವಾಗಿ ಬರುತ್ತಿಲ್ಲ. ಈ ಜಾಗ ಖಾಸಗಿಯವರ ಪಾಲಾದರೆ ಈ ಸಿಬ್ಬಂದಿ ಅನಾಥರಾಗುತ್ತಾರೆ. ಜಾಗವನ್ನು ರಕ್ಷಿಸಿ ಟ್ರಸ್ಟನ್ನು ಉಳಿಸಿ, ನಮ್ಮನ್ನು ಕಾಪಾಡಿ ಎಂದೂ ಕೂಡ ಅವರು ಅಲವತ್ತುಕೊಂಡಿದ್ದಾರೆ.  ಕಳೆದ 2015ರಲ್ಲಿ ಸುಭಾಷ್ ಮೋದಿ ಈ ಜಾಗವನ್ನು ಕಬಳಿಸುವ ಸಂಚು ರೂಪಿಸಿದ್ದಾರೆ ಎಂದು ಟಿವಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರವಾಗಿತ್ತು. ಅಲ್ಲಿಂದ ಈ ಜಾಗ ಉಳಿಸುವ ಹೋರಾಟವನ್ನು ಎಲ್ಲರೂ ಪ್ರಾರಂಭಿಸಿದ್ದರು.

ಸ್ಥಳೀಯ ಶಾಸಕರಾದ ಕೆ.ಗೋಪಾಲಯ್ಯ ಅವರೂ ಕೂಡ ಇತ್ತೀಚೆಗೆ ಅಲ್ಲಿಗೆ ತೆರಳಿ ಯಾವುದೇ ಕಾರಣಕ್ಕೂ ಈ ಟ್ರಸ್ಟ್ ಅನ್ಯರ ಪಾಲಾಗಲು ಬಿಡುವುದಿಲ್ಲ. ಜಾಗವನ್ನು ಸರ್ಕಾರ ವಹಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದ ಕಣ್ಣಿನ ಆಸ್ಪತ್ರೆ ತೆರೆಯಬೇಕು ಎಂದು ಆಗ್ರಹಿಸಿದ್ದಾರೆ. ಹಾಗೇನಾದರೂ ಖಾಸಗಿಯವರಿಗೆ ಈ ಜಾಗ ಪರಭಾರೆ ಮಾಡಲು ಮುಂದಾದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಮುರುಗೆಪ್ಪ ಚನ್ನವೀರಪ್ಪ ಮೋದಿ (ಎಂ.ಸಿ.ಮೋದಿ) ಬಡತನದ ಮಧ್ಯೆ ಕೊಲಂಬಿಯಾ ಮತ್ತು ನ್ಯೂಯಾರ್ಕ್ ವಿವಿಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು, ಬೆಳಗಾವಿಯಲ್ಲಿ ವೃತ್ತಿ ಜೀವನ ಆರಂಭಿಸಿ, ದಾವಣಗೆರೆಯಲ್ಲಿ ನೆಲೆಸಿ 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ಸಮಯದಲ್ಲಿ ಮಹಾತ್ಮಗಾಂಧಿಯವರ ಭಾಷಣದಿಂದ ಪ್ರೇರೇಪಿತರಾಗಿ ಕೆಲವೇ ಸ್ವಯಂಸೇವಕರ ಜೊತೆ ಹಳ್ಳಿ ಹಳ್ಳಿಗಳಿಗೆ ಹೋಗಿ ಕಣ್ಣಿನ ಚಿಕಿತ್ಸೆ ಮಾಡುತ್ತಿದ್ದರು.  ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಹಲವಾರು ರಾಜ್ಯಗಳಲ್ಲಿ ನೇತ್ರ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಿ ಉಚಿತ ಚಿಕಿತ್ಸೆಗಳನ್ನು ಮಾಡುತ್ತಿದ್ದರು. ಕಣ್ಣಿನ ಪೆÇರೆ ತೆಗೆಯುವ ಶಸ್ತ್ರ ಚಿಕಿತ್ಸೆಯಲ್ಲಿ ಪರಿಣಿತಿ ಹೊಂದಿದ್ದ ಡಾ.ಮೋದಿ ಪ್ರತಿ ಗ್ರಾಮದಲ್ಲೂ ಶಿಬಿರಗಳನ್ನು ನಡೆಸಿದ್ದರು. ರಷ್ಯಾ, ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಸೇವೆ ಸಲ್ಲಿಸಿ ಗೌರವಗಳಿಗೆ ಪಾತ್ರವಾಗಿದ್ದರು.ಸಾಮೂಹಿಕ ನೇತ್ರ ಚಿಕಿತ್ಸಾ ಹಾಗೂ ಸಂಚಾರಿ ಘಟಕವನ್ನು ತೆರೆದ ಮೊದಲ ವೈದ್ಯ ಎಂಬ ಖ್ಯಾತಿಯನ್ನೂ ಕೂಡ ಗಳಿಸಿದ್ದರು.  ರೈಲಿನಲ್ಲಿ ಪ್ರಯಾಣಿಸುವಾಗಲೂ ಅಲ್ಲಿನ ಪ್ರಯಾಣಿಕರ ಕಣ್ಣುಗಳನ್ನು ಪರೀಕ್ಷಿಸುತ್ತಿದ್ದರು. ಇವರ ಈ ಸೇವೆಗೆ ಪದ್ಮಶ್ರೀ, ಪದ್ಮಭೂಷಣ, ಮೈಸೂರು, ಕರ್ನಾಟಕ, ಪುಣೆ ವಿವಿಗಳ ಗೌರವ ಡಾಕ್ಟರೇಟ್, ಅಂತಾರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.n

2005ರ ನವೆಂಬರ್ 11ರಲ್ಲಿ ತಮ್ಮ 90ನೆ ವಯಸ್ಸಿನಲ್ಲಿ ಮೋದಿ ಹೃದಯಾಘಾತದಿಂದ ನಿಧನರಾದಾಗ ಇವರ ಕಣ್ಣುಗಳನ್ನು ದಾನ ಮಾಡಿದ್ದರು. ಇಂತಹ ಮಹಾನ್ ವ್ಯಕ್ತಿ ಅಂತಾರಾಷ್ಟ್ರೀಯ ನೇತ್ರ ತಜ್ಞರಲ್ಲೊಬ್ಬರು. ಇವರ ಗೌರವಾರ್ಥ ಟ್ರಸ್ಟ್ ಸ್ಥಾಪಿಸಲು ನೀಡಿರುವ ಜಾಗವನ್ನು ಕಬಳಿಸಲು ಮುಂದಾಗಿರುವುದು, ಅವರ ಸಂಬಂಧಿಗಳೇ ಇದಕ್ಕೆ ಸಾಥ್ ನೀಡಿರುವುದು ಹಾಗೂ ಅಧಿಕಾರಿಗಳು ಟ್ರಸ್ಟ್ ವಹಿವಾಟುಗಳಿಗೆ ಅಕ್ರಮವಾಗಿ ಬೆಂಬಲ ನೀಡುತ್ತಿರುವುದು ವಿಪರ್ಯಾಸವಾಗಿದೆ.
ಬಡವರಿಗೆ 5, 10ರೂ.ಗಳಿಗೆ ನೇತ್ರ ಪರೀಕ್ಷೆ, ಕಡಿಮೆ ದರದಲ್ಲಿ ನೇತ್ರ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಕನ್ನಡಕಗಳು ದೊರೆಯುತ್ತಿದ್ದ ಏಕೈಕ ಆಸ್ಪತ್ರೆ ಡಾ.ಎಂ.ಸಿ.ಮೋದಿ ಆಸ್ಪತ್ರೆ. ಈಗ ಆ ಜಾಗದ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ.  ಆ ಟ್ರಸ್ಟ್‍ನಲ್ಲಿ ನಡೆಯುತ್ತಿರುವ ಬಹುತೇಕ ವಹಿವಾಟುಗಳು ಅಕ್ರಮವಾಗಿವೆ ಎಂಬುದು ಸ್ಥಳೀಯರ ಆರೋಪವಾಗಿದೆ. ಜವಾಬ್ದಾರಿಯುತ ನಾಗರಿಕರು, ಮಾಧ್ಯಮಗಳು ದನಿ ಎತ್ತಿ ಈ ಜಾಗವನ್ನು ಉಳಿಸಿಕೊಳ್ಳಬೇಕು. ಮೋದಿಯವರ ಹೆಸರನ್ನು ಮತ್ತೆ ವಿಶ್ವಮಾನ್ಯಗೊಳಿಸಬೇಕು. ಬಡವರ ಚಿಕಿತ್ಸೆಗೆ ಸಹಕರಿಸಬೇಕು. ಇದನ್ನು ಉಳಿಸಲು ಹೋರಾಟ ಮಾಡುವವರಿಗೆ ಬೆಂಬಲ ನೀಡಬೇಕು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin