ಪ್ರತಿಷ್ಠಿತ ಲಿಮ್ಕಾ ಬುಕ್ ಆಫ್ ರೆಕಾರ್ಡ್‍ಗೆ ಸೇರಿದ ಕೆಎಸ್‍ಆರ್‍ಟಿಸಿ

ಈ ಸುದ್ದಿಯನ್ನು ಶೇರ್ ಮಾಡಿ

Ramalingareddy

ಬೆಂಗಳೂರು, ಜ.12– ಪ್ರತಿಷ್ಠಿತ ಲಿಮ್ಕಾ ಬುಕ್ ಆಫ್ ರೆಕಾರ್ಡ್‍ಗೆ ಸೇರ್ಪಡೆಗೊಂಡ ದೇಶದ ಪ್ರಪ್ರಥಮ ರಸ್ತೆ ಸಾರಿಗೆ ಸಂಸ್ಥೆ ಅತಿ ಹೆಚ್ಚು ಪ್ರಶಸ್ತಿ ಪಡೆದ ಮೊದಲ ಸರ್ಕಾರಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಕೆಎಸ್‍ಆರ್‍ಟಿಸಿ ಭಾಜನವಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ನಮ್ಮ ಸಂಸ್ಥೆಗೆ ಇಷ್ಟೆಲ್ಲ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಚಾರ.
ಹೀಗಾಗಿ ಬಸ್ ಸೇವೆಯನ್ನು ಮತ್ತಷ್ಟು ಜನಸ್ನೇಹಿ ಮಾಡಲು ಹಲವಾರು ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದರು. ಕೆಎಸ್‍ಆರ್‍ಟಿಸಿ ಸಂಸ್ಥೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 2015-16ನೆ ಸಾಲಿನಲ್ಲಿ 114.95 ಕೋಟಿ ರೂ. ಲಾಭ ಗಳಿಸಿದೆ. ಇದರಲ್ಲಿ ಸಂಸ್ಥೆ ಸಿಬ್ಬಂದಿ ನಿವೃತ್ತಿ ಸಮಯದಲ್ಲಿ ಆರ್ಥಿಕ ಮುಗ್ಗಟ್ಟು ಉಂಟಾಗಬಹುದೆಂಬ ಉದ್ದೇಶದಿಂದ 64 ಕೋಟಿ ರೂ.ಗಳನ್ನು ಗ್ರ್ಯಾಚುಟಿ ನಿಧಿಗೆ ಜಮೆ ಮಾಡಲಾಗಿದೆ ಎಂದರು.

2014-15ರಲ್ಲಿ 314 ಕೋಟಿ ರೂ. ಸಾಲ ಇತ್ತು. ಈಗಾಗಲೇ 161 ಕೋಟಿ ರೂ. ತೀರಿಸಿದ್ದೇವೆ ಎಂದು ಸಚಿವರು ತಿಳಿಸಿದರು. ಇದುವರೆಗೂ ಐಒಸಿಯಿಂದ ಡೀಸೆಲ್ ಖರೀದಿಸುತ್ತಿದ್ದೆವು. 2015ರಿಂದ ಬಿಪಿಸಿಎಲ್ ಕಂಪೆನಿಯಿಂದ ಖರೀದಿಸುತ್ತಿದ್ದೇವೆ. ಹೀಗಾಗಿ ನಾಲ್ಕು ರಸ್ತೆ ಸಾರಿಗೆ ಸಂಸ್ಥೆ 212 ಘಟಕಗಳಿಗೆ ಇಂಧನ, ಆಟೊಮೇಷನ್ ಹಾಗೂ ಹೊಸ ಬಂಕ್ ಉಚಿತವಾಗಿ ಬಂದಿದೆ. ಇದರಿಂದ ಸಂಸ್ಥೆಗೆ ಮೂರು ವರ್ಷಗಳಿಗೆ 358 ಕೋಟಿ ರೂ. ಉಳಿತಾಯವಾಗುತ್ತದೆ. ಇಂತಹ ಆಟೊಮೇಷನ್ ಸೌಲಭ್ಯವನ್ನು ಆದಷ್ಟು ಬೇಗ ಉದ್ಘಾಟನೆ ಮಾಡುತ್ತಿದ್ದೇವೆ ಎಂದರು.  ನಗರ ಸಾರಿಗೆ ಆರಂಭಿಸಿದ ಕೀರ್ತಿ ಸಂಸ್ಥೆಗೆ ಸೇರುತ್ತದೆ. ಪ್ರಸ್ತುತ 41 ನಗರಗಳಲ್ಲಿ 1793 ಬಸ್‍ಗಳು ಸಂಚರಿಸುತ್ತಿವೆ. ಇದರ ಜತೆಗೆ ನಾಲ್ಕು ನಿಗಮಗಳಿಂದ 5273 ಹೊಸ ಬಸ್ ಖರೀದಿಸಿದ್ದೇವೆ. ದೇಶದಲ್ಲೇ ಪ್ರಪ್ರಥಮ ಬಾರಿಗೆ ನೂರಕ್ಕೆ ನೂರರಷ್ಟು ಬಯೋ ಡೀಸೆಲ್ ಮಲ್ಟಿ ಆ್ಯಕ್ಸೆಲ್‍ನ 25 ಬಸ್ ಸೇವೆಯನ್ನು ಆರಂಭಿಸಿದ್ದೇವೆ ಎಂದು ಹೇಳಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin