ಪ್ರತ್ಯೇಕ ಧ್ವಜ ಪ್ರಸ್ತಾಪದಿಂದ ದೂರ ಸರಿದ ರಾಜ್ಯ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Kannada-Flag--01

ಬೆಂಗಳೂರು, ಸೆ.1- ಇತ್ತೀಚಿನ ದಿನಗಳಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ರಾಜ್ಯಕ್ಕೆ ಪ್ರತ್ಯೇಕ ಧ್ವಜ ರಚನೆ ಮಾಡುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೈ ಬಿಡಲು ತೀರ್ಮಾನಿಸಿದೆ. ಕಾನೂನಿನಲ್ಲಿ ಯಾವುದೇ ರಾಜ್ಯಕ್ಕೆ ಪ್ರತ್ಯೇಕ ಧ್ವಜಕ್ಕೆ ಅವಕಾಶ ಇಲ್ಲದೇ ಇರುವ ಕಾರಣ ಮುಂದೆ ಉಂಟಾಗಬಹುದಾದ ಮುಜುಗರವನ್ನು ತಪ್ಪಿಸಿಕೊಳ್ಳಲು ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿದಿದೆ ಎಂದು ತಿಳಿದು ಬಂದಿದೆ.ಸಂವಿಧಾನದ 370ನೇ ವಿಧಿಯ ಪ್ರಕಾರ ದೇಶದಲ್ಲೇ ಜಮ್ಮು ಮತ್ತು ಕಾಶ್ಮೀರ ಹೊರತು ಪಡಿಸಿದರೆ ಬೇರೆ ಯಾವುದೇ ರಾಜ್ಯಗಳಿಗೆ ಪ್ರತ್ಯೇಕ ಧ್ವಜ ಹೊಂದಲು ಕಾನೂನಿನಲ್ಲಿ ಅವಕಾಶವಿಲ್ಲ.
ಒಂದು ವೇಳೆ ಪ್ರತ್ಯೇಕ ಧ್ವಜ ಬೇಕೆಂದು ರಾಜ್ಯ ಸರ್ಕಾರ ಬಯಸಿದರೆ ಕೇಂದ್ರ ಸರ್ಕಾರ ಮಾನ್ಯ ಮಾಡಬೇಕು. ಕೇಂದ್ರವು ಅನುಮತಿ ನೀಡಿದರೂ ನ್ಯಾಯಾಲಯ ಊರ್ಜಿತಗೊಳಿಸುವುದಿಲ್ಲ.

ಇದನ್ನು ಮನಗಂಡೆ ಸರ್ಕಾರ ಪ್ರತ್ಯೇಕ ಧ್ವಜದ ಪ್ರಸ್ತಾವನೆಯಿಂದ ಹಿಂದೆ ಸರಿಯಲು ಮುಂದಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕಕ್ಕೆ ಪ್ರತ್ಯೇಕ ಧ್ವಜದ ಪ್ರಸ್ತಾವನೆ ಮಾಡಿದ್ದರು. ಇದಕ್ಕೆ ಸಾಕಷ್ಟು ಪರ-ವಿರೋಧ ವ್ಯಕ್ತವಾಗಿತ್ತು. ಕೆಲವು ಸಾಹಿತಿಗಳು, ಬರಹಗಾರರು, ಚಿಂತನಗಾರರು, ಕನ್ನಡ ಸಂಘಟನೆಗಳು ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದರು. ಆದರೆ, ಉಳಿದ ಕೆಲ ಸಂಘಟನೆಗಳು ಸರ್ಕಾರದ ಈ ಕ್ರಮ ಒಕ್ಕೂಟದ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದವು. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಜನರ ಭಾವನೆಗಳನ್ನು ಸೆಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ತಂತ್ರ ಅನುಸರಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.

ಸಭೆ ಸೇರಿದ ಸಮಿತಿ:

ಕಳೆದ ಜೂನ್ 6ರಂದು ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಇದರಲ್ಲಿ ಡಿಟಿಎಆರ್, ಕಾನೂನು ಇಲಾಖೆ ಕಾರ್ಯದರ್ಶಿ, ಗೃಹ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕರು ಸೇರಿದಂತೆ ಕೆಲವು ಸಾಹಿತಿಗಳನ್ನೊಳಗೊಂಡ ಸಮಿತಿ ರಚನೆಯಾಗಿತ್ತು. ಸಮಿತಿ ರಚನೆಯಾಗಿ ಮೂರು ತಿಂಗಳು ಕಳೆದರೂ ಈವರೆಗೂ ಒಂದೇ ಒಂದು ಬಾರಿಯೂ ಸಭೆ ನಡೆಸುವುದಾಗಲಿ, ಇಲ್ಲವೇ ಅನೌಪಚಾರಿಕವಾಗಿ ಮಾತುಕತೆಯನ್ನೂ ಕೂಡ ನಡೆಸಿಲ್ಲ.

ಪ್ರತ್ಯೇಕ ಧ್ವಜ ರಚನೆ ಮಾಡಲು ಸಂವಿಧಾನದಲ್ಲಿ ಮಾನ್ಯತೆ ಇಲ್ಲದೇ ಇರುವಾಗ ಸಭೆ ನಡೆಸುವುದರಲ್ಲಿ ಯಾವ ಅರ್ಥವಿಲ್ಲ ಎಂಬುದು ಸಮಿತಿಯ ತೀರ್ಮಾನವಾಗಿದೆ.ಇನ್ನು ಅಧಿಕಾರಿಗಳು ಸಭೆ ನಡೆಸಿದರೆ ನ್ಯಾಯಾಂಗ ನಿಂಧನೆ ತೂಗುಗತ್ತಿ ಎದುರಾಗುತ್ತದೆ. ಒಂದೇ ರಾಷ್ಟ್ರ, ಒಂದೇ ಭಾವುಟ ಎಂಬ ಕಲ್ಪನೆ ಇರುವಾಗ ಪ್ರತ್ಯೇಕ ಧ್ವಜದ ಬಗ್ಗೆ ವರದಿ ನೀಡಿದರೆ ಕಾನೂನಿನಲ್ಲಿ ಮಾನ್ಯರೆ ಸಿಗುವುದಿಲ್ಲ ಎಂಬುದು ಖಚಿತವಾಗಿದೆ. ಹೀಗಾಗಿ ಸಮಿತಿ ಈವರೆಗೂ ಸಭೆ ನಡೆಸುವ ಗೋಜಿಗೆ ಹೋಗಿಲ್ಲ.

ಹೈಕಮಾಂಡ್ ಗರಂ:

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೆಗೆದುಕೊಂಡ ಪ್ರತ್ಯೇಕ ಧ್ವಜ ತೀರ್ಮಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೂಡ ವಿರೋಧ ವ್ಯಕ್ತಪಡಿಸಿತ್ತು. ಅದರಲ್ಲೂ ಉಸ್ತುವಾರಿ ವೇಣುಗೋಪಾಲ್‍ಗೆ ಈ ಪ್ರಸ್ತಾವನೆಯನ್ನು ಕೈ ಬಿಡುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಲು ಸೂಚನೆ ಕೊಟ್ಟಿತ್ತು.ಕರ್ನಾಟಕ ಸರ್ಕಾರ ತೆಗೆದುಕೊಂಡಿರುವ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿದೆ. ನಾಳೆ ಪ್ರತಿಯೊಂದು ರಾಜ್ಯಗಳು ಇದೇ ರೀತಿ ಪ್ರತ್ಯೇಕ ಧ್ವಜ, ಪ್ರತ್ಯೇಕ ಭಾಷೆ ಬೇಕು ಎಂದು ಬೇಡಿಕೆ ಇಟ್ಟರೆ ದೇಶ ವಿಭಜನೆಯತ್ತ ಸಾಗುತ್ತದೆ. ಯಾವುದೇ ಕಾರಣಕ್ಕೂ ಈ ನಿರ್ಧಾರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಖಂಡತುಂಡವಾಗಿ ಹೇಳಿತ್ತು. ಹೀಗಾಗಿ ಸರ್ಕಾರ ಪ್ರತ್ಯೇಕ ಧ್ವಜದ ತೀರ್ಮಾನದಿಂದ ದೂರ ಉಳಿಯಲು ನಿರ್ಧರಿಸಿದೆ.

Facebook Comments

Sri Raghav

Admin